ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದು 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 11 ಅಕ್ಟೋಬರ್ 1993ರಂದು ಜನಿಸಿದ ಹಾರ್ದಿಕ್ ಟೀಮ್ ಇಂಡಿಯಾದ ಯಶಸ್ವಿ ಆಟಗಾರ ಆಗಿದ್ದಾರೆ. ಈ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲೂ ಪಾಂಡ್ಯ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ 3 ವಿಕೆಟ್ ಪಡೆದ ಕೈಜಾರಿ ಹೋಗಿದ್ದ ಪಂದ್ಯವನ್ನು ಮರಳಿ ಗೆಲ್ಲುವಂತೆ ಮಾಡಿದ್ದರು. ಇಷ್ಟೆಲ್ಲ ವರ್ಚಸ್ಸಿನಿಂದ ಬೌಲಿಂಗ್ ಮಾಡುವ ಪಾಂಡ್ಯ ಆರಂಭದಲ್ಲಿ ಲೆಗ್ ಸ್ಪಿನ್ನರ್ ಆಗಿದ್ದರು. ಆದ್ರೆ ಆ ಒಂದು ಘಟನೆ ಅವರ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಹಾಗಾದ್ರೆ ಬನ್ನಿ ಪಾಂಡ್ಯ ಲೆಗ್ ಸ್ಪಿನ್ನರ್ ನಿಂದ ವೇಗದ ಬೌಲರ್ ಆಗಿ ಬಡ್ತಿ ಪಡೆದಿದ್ದು ಹೇಗೆಂದು ಇದೀಗ ತಿಳಿಯೋಣ.
ಪಾಂಡ್ಯ ವೇಗದ ಬೌಲರ್ ಆಗಿದ್ದು ಹೇಗೆ: ಹಾರ್ದಿಕ್ ಪಾಂಡ್ಯ ಕುಟಂಬ ಮೊದಲಿಗೆ ಸೂರತ್ನಲ್ಲಿ ನೆಲೆಸಿತ್ತು. ನಂತರ ತಮ್ಮ ಮಕ್ಕಳ ಕ್ರಿಕೆಟ್ ಭವಿಷ್ಯಕ್ಕಾಗಿ ತಂದೆ ಹಿಮಾಂಶು ಪಾಂಡ್ಯ ಕಟುಂಬ ಸಮೇತವಾಗಿ ಬರೋಡಾಗೆ ತೆರಳಿದರು. ನಂತರ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಇಬ್ಬರನ್ನು ಮಾಜಿ ಭಾರತೀಯ ವಿಕೆಟ್-ಕೀಪರ್, ಬ್ಯಾಟ್ಸ್‌ಮನ್ ಕಿರಣ್ ಮೋರ್ ಅಕಾಡೆಮಿಗೆ ತರಬೇತಿಗಾಗಿ ಸೇರಿಸಲಾಯಿತು.
ಅಕಾಡೆಮಿಗೆ ಸೇರಿದಾಗ, ಪಾಂಡ್ಯ ಕೇವಲ ಬ್ಯಾಟಿಂಗ್ ಮಾತ್ರ ಮಾಡುತ್ತಿದ್ದರು. ಕೆಲ ವರ್ಷಗಳ ಬಳಿಕ ಬೌಲಿಂಗ್ ಮಾಡಲು ಪ್ರಾರಂಭಿಸಿದರು. ಅದು ಕೂಡ ಲೆಗ್ ಸ್ಪಿನ್ ಆಗಿ ತಮ್ಮ ಬೌಲಿಂಗ್ ಜರ್ನಿ ಆರಂಭಿಸಿದರು.
ಆದ್ರೆ ಅದೊಂದು ದಿನ ನೆಟ್ ಸೆಷನ್ ನಡೆಯುತ್ತಿದ್ದಾಗ ಕೆಳ ಕ್ರಮಾಂಕದ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸಬೇಕಾಗಿತ್ತು. ಈ ವೇಳೆ ಕೆಲ ವೇಗದ ಬೌಲರ್ಗಳು ಬೇಕಾಗಿತ್ತು. ಅದಾಗಲೇ ಹಲವಾರು ಓವರ್ ಎಸೆದಿದ್ದ ವೇಗದ ಬೌಲರ್ಗಳು ಸುಸ್ತಾಗಿದ್ದರು. ಬಳಿಕ ಕೋಚ್ ಸನತ್ ಕುಮಾರ್ ನೆಟ್ಸ್ನಲ್ಲಿ ಬೌಲಿಂಗ್ ಮಾಡುವಂತೆ ಹಾರ್ದಿಕ್ ಪಾಂಡ್ಯಗೆ ಸೂಚಿಸಿದರು. ಈ ವೇಳೆ ವೇಗದ ಬೌಲಿಂಗ್ ಮಾಡಿದ ಹಾರ್ದಿಕ್ ಗಂಟೆಗೆ 130 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದು ಎಲ್ಲರನ್ನು ಬೆರಗು ಗೊಳಿಸಿದರು. ಬಳಿಕ ಕೋಚ್ ಸನತ್ ಕುಮಾರ್ ಪಾಂಡ್ಯಗೆ ವೇಗದ ಬೌಲಿಂಗ್ ತರಬೇತಿ ನೀಡಲಾರಂಭಿಸಿದರು. ಇದರ ಫಲಿತಾಂಶವಾಗಿ ಇಂದು ಹಾರ್ದಿಕ್ ಯಶಸ್ವಿ ಬ್ಯಾಟರ್ ಜೊತೆ ಬೌಲರ್ ಕೂಡ ಆಗಿದ್ದಾರೆ.
ಹಾರ್ದಿಕ್ ವೃತ್ತಿಜೀವನ: ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಐಪಿಎಲ್ ಪಂದ್ಯಗಳನ್ನು ಮಾತ್ರ ಆಡುತ್ತಿದ್ದರು. ದೇಶಿಲೀಗ್ನಲ್ಲಿ ಅದ್ಬುತ ಪ್ರದರ್ಶನದಿಂದಾಗಿ 2016ರಲ್ಲಿ ಭಾರತ ತಂಡದ ಪರ ಆಡಲು ಅವಕಾಶ ಪಡೆದುಕೊಂಡರು. ಟಿ20 ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ನಂತರ 2017ರಲ್ಲಿ ಏಕದಿನ ಪಂದ್ಯವನ್ನೂ ಆಡಿದರು. ಇದಾದ ಬಳಿಕ 2018ರಲ್ಲಿ ಟೆಸ್ಟ್ಗೂ ಪಾಂಡ್ಯ ಲಗ್ಗೆಯಿಟ್ಟರು.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಸೋಲು: ತವರಿನಲ್ಲಿ 556 ರನ್ಗಳಿಸಿಯೂ ಹೀನಾಯವಾಗಿ ಸೋತ ಪಾಕಿಸ್ತಾನ