ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಹಾಕಿ ತಂಡದ ಆಟಗಾರ ಹಾರ್ದಿಕ್ ಸಿಂಗ್ ಪ್ಯಾರಿಸ್ನಿಂದ ಭಾರತಕ್ಕೆ ಆಗಮಿಸಿದಾಗ ಅಂದು ಏರ್ಪೋಟ್ನಲ್ಲಿ ನಡೆದ ಘಟನೆಯೊಂದನ್ನು ನೆನೆದು ಬೇಸರ ಹೊರಹಾಕಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡದ ಭಾಗವಾಗಿದ್ದ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಒಲಿಂಪಿಕ್ಸ್ ಬಳಿಕ ಭಾರತಕ್ಕೆ ಹಿಂತಿರುಗಿದಾಗ ವಿಮಾನ ನಿಲ್ದಾಣದಲ್ಲಿ ಅಂದು ವಿಚಿತ್ರ ಅನುಭವವಾಗಿತ್ತು ಎಂದು ಹೇಳಿದ್ದಾರೆ. ಆ ದಿನ ಕಂಚಿನ ಪದಕದೊಂದಿಗೆ ಏರ್ಪೋಟ್ಗೆ ಆಗಮಿಸಿದ ನಮ್ಮನ್ನು ಯಾರು ಲೆಕ್ಕಿಸದೇ, ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಡಾಲಿ ಚಾಯ್‌ವಾಲಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಆಸಕ್ತಿ ತೋರಿಸಿದ್ದರು. ಪದಕ ಗೆದ್ದ ನಮ್ಮನ್ನು ನಿರ್ಲಕ್ಷಿಸಿದ್ದರು ಎಂದು ಬೇಸರ ಹೊರ ಹಾಕಿದ್ದಾರೆ.
ಚಾಯ್ವಾಲಾಗೆ ಸಿಕ್ಕ ಗೌರವ ನಮಗೆ ಸಿಗಲಿಲ್ಲ: 'ವಿಮಾನ ನಿಲ್ದಾಣದಲ್ಲಿ ನನ್ನ ಕಣ್ಣಾರೆ ನೋಡಿದ್ದೇನೆ. ಆ ದಿನ ನನ್ನೊಂದಿಗೆ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಕೂಡ ಇದ್ದರು. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಡಾಲಿ ಚಾಯ್‌ವಾಲಾ ಕೂಡ ಅದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ, ಅಲ್ಲಿದ್ದ ಜನರು ನಮ್ಮನ್ನು ಲೆಕ್ಕಿಸದೇ ಡಾಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಆ ದಿನ ದೇಶಕ್ಕಾಗಿ ಪದಕ ಗೆದ್ದು ಬಂದಿದ್ದ ನಮ್ಮನ್ನು ಯಾರು ಗುರುತಿಸಲೇ ಇಲ್ಲ. ನಾವು ಒಬ್ಬರನ್ನೊಬ್ಬರು ನೋಡಿಕೊಂಡೆವು. ಇದು ತುಂಬಾ ಮುಜುಗರ ಎನಿಸಿತು. ಹರ್ಮನ್ ಪ್ರೀತ್ ತಮ್ಮ ವೃತ್ತಿಜೀವನದಲ್ಲಿ 150ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಮಂದೀಪ್ 100ಕ್ಕೂ ಹೆಚ್ಚು ಫೀಲ್ಡ್ ಗೋಲುಗಳನ್ನು ಗಳಿಸಿದ್ದಾರೆ.
ಡಾಲಿ ಚಾಯ್‌ವಾಲಾ ತಮ್ಮ ಸ್ಪೆಷಲ್ ಟೀ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಅಲ್ಲದೇ ಅವರು ಬಿಲ್ ಗೇಟ್ಸ್ನಂತಹ ಶ್ರೀಮಂತ ಉದ್ಯಮಿಗೆ ಚಹಾವನ್ನೂ ಕುಡಿಸಿದ್ದಾರೆ. ನಿಜಕ್ಕೂ ಇದು ಹೆಮ್ಮೆಯ ಸಂಗತಿ ಆದರೇ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದರೂ, ಭಾರತೀಯ ಹಾಕಿ ತಾರೆಗಳಿಗೆ ಅರ್ಹವಾದ ಮನ್ನಣೆ ಸಿಗುತ್ತಿಲ್ಲ. ಒಬ್ಬ ಕ್ರೀಡಾಪಟುವಿಗೆ ಹೆಸರು ಜತೆಗೆ ಹಣವೂ ಮುಖ್ಯವಾಗುತ್ತದೆ. ಆದರೆ, ಅದಕ್ಕೂ ಮಿಗಿಲಾಗಿ ಅಭಿಮಾನಿಗಳ ಪ್ರೋತ್ಸಾಹ ಹೆಚ್ಚು ಖುಷಿಯನ್ನು ನೀಡುತ್ತದೆ. ಅಭಿಮಾನಿಗಳು ನಮ್ಮ ಆಟವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೇ ನಮಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ' ಎಂದು ಹಾರ್ದಿಕ್ ತಿಳಿಸಿದ್ದಾರೆ.