ನವದೆಹಲಿ: ಪ್ಯಾರಿಸ್ ಒಲಿಂಪಿಕ್ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಳಿಸಿದ ಒಲಿಂಪಿಕ್ ಸಮಿತಿ ನಿರ್ಧಾರ ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ನಾಳೆ ಪ್ಯಾರಿಸ್ ಒಲಿಂಪಿಕ್ ಸಮಾರೋಪ ಸಮಾರಂಭ ಇದ್ದು, ಇದಕ್ಕೂ ಮೊದಲು ತೀರ್ಪು ಪ್ರಕಟವಾಗಲಿದೆ. ಇಂದು ರಾತ್ರಿ 9:30ಕ್ಕೆ ತೀರ್ಪು ಹೊರ ಬೀಳಲಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಮನವಿಯಲ್ಲಿ, ಮಂಗಳವಾರದ ಪಂದ್ಯಗಳಲ್ಲಿ ತಮ್ಮ ತೂಕ ನಿಗದಿತ ಮಿತಿಯೊಳಗೆ ಇದ್ದ ಕಾರಣ ಬೆಳ್ಳಿ ಪದಕ ನೀಡಬೇಕೆಂದು ಒತ್ತಾಯಿಸಿದ್ದಾರೆ. ವಿನೇಶ್ ಪರ ಖ್ಯಾತ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ವಾದ ಮಂಡಿಸಿದರು.
3 ಗಂಟೆಗಳ ಕಾಲ ವಿಚಾರಣೆ: ಭಾರತ ಒಲಿಂಪಿಕ್ ಅಸೋಸಿಯೇಷನ್ ಹೇಳಿಕೆ ಪ್ರಕಾರ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು IOA ಸುಮಾರು 3 ಗಂಟೆಗಳ ಕಾಲ ಮಾತುಕತೆಯನ್ನು ಆಲಿಸಿದೆ. ವಿಚಾರಣೆಯ ಮೊದಲು ಎಲ್ಲಾ ಸಂಬಂಧಿತ ಪಕ್ಷಗಳು ತಮ್ಮ ವಿವರವಾದ ಕಾನೂನು ಅಫಿಡವಿಟ್‌ಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಸಾಳ್ವೆ, ಸಿಂಘಾನಿಯಾ ಮತ್ತು ಕ್ರೀಡಾ ಕಾನೂನು ತಂಡಕ್ಕೆ ತಮ್ಮ ಸಹಕಾರ ಮತ್ತು ವಿಚಾರಣೆಯ ಸಮಯದಲ್ಲಿ ವಾದ ಮಂಡಿಸಿದರು.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಕಾರ, ನ್ಯಾಯವಾದಿಗಳಾದ ಸಾಳ್ವೆ, ಸಿಂಘಾನಿಯಾ ವಾದ ಮಂಡಿಸಿದರು. ಈ ಪ್ರಕರಣದ ತೀರ್ಪು ಏನೇ ಇರಲಿ, ನಾವು ಅವರ ಜೊತೆ ನಿಲ್ಲುತ್ತೇವೆ ಮತ್ತು ವಿನೇಶ್ ಅವರ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಪಿ.ಟಿ ಉಷಾ ಹೇಳಿದ್ದಾರೆ.
ಏನಿದು ಪ್ರಕರಣ: ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ ಪಂದ್ಯದ ವೇಳೆ 100 ಗ್ರಾಂ ತೂಕ ಹೆಚ್ಚಾಗಿ ಕಂಡುಬಂದ ಹಿನ್ನೆಲೆ ವಿನೇಶ್ ಫೋಗಟ್ ಅವರನ್ನು ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಫೋಗಟ್ ಕ್ರೀಡಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ! - Hockey Team Receives Warm Welcome