ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ಡೇ (ಅಭಿಯಂತರರ ದಿನ) ಆಚರಿಸಲಾಗುತ್ತದೆ. ಭಾರತದ ಸರ್ವಶ್ರೇಷ್ಠ ಇಂಜಿನಿಯರ್ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸರ್ ಎಂ ವಿಶ್ವೇಶ್ವರಯ್ಯ (ಮೋಕ್ಷಗುಂಡಂ ವಿಶ್ವೇಶ್ವರಯ್ಯ) ಅವರು ಹುಟ್ಟಿದ್ದು ಇದೇ ದಿನ. ಆಧುನಿಕ ಮೈಸೂರು ಸಂಸ್ಥಾನದ ಪಿತಾಮಹ ಎಂದು ಕರೆಯಲ್ಪಡುವ ವಿಶ್ವೇಶ್ವರಯ್ಯನವರು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಅಪರಾವಾದ ಕೊಡುಗೆ ನೀಡಿದ್ದಾರೆ. ದೇಶಾದ್ಯಂತ ನಿರ್ಮಿಸಲಾದ ಅಣೆಕಟ್ಟುಗಳು ಮತ್ತು ಸೇತುವೆಗಳ ಯಶಸ್ಸಿನಲ್ಲೂ ಇವರ ಪಾತ್ರವಿದೆ. ಈ ಹಿನ್ನೆಲೆ ಅವರ ನೆನೆಪಿನ ಸ್ಮರಣಾರ್ಥವಾಗಿ ಈ ದಿನವನ್ನು 'ಎಂಜಿನಿಯರ್ಸ್ ಡೇ' ಎಂದು ಘೋಷಿಸಲಾಗಿದೆ.
ಭಾರತ ಸೇರಿದಂತೆ ವಿದೇಶಗಳಲ್ಲಿ ಇಂಜಿನಿಯರ್ಗಳು ತಮ್ಮ ಕೌಶಲ್ಯದಿಂದ ದೇಶ ಮತ್ತು ಜಗತ್ತನ್ನು ಪ್ರಗತಿಯತ್ತ ಕೊಂಡೊಯ್ಯಲು ಅವರಿಗೆ ಪ್ರೋತ್ಸಾಹಿಸಲು ಪ್ರಪಂಚದಾದ್ಯಂತ ವಿವಿಧ ದಿನಾಂಕದಂದು ಈ ದಿನ ಆಚರಿಸಲಾಗುತ್ತದೆ. ಆದ್ರೆ ನಿಮಗೆ ಗೊತ್ತಾ ಇಂಜಿನಿಯರ್ ಪದವಿ ಪಡೆದಿರುವ ಹಲವಾರು ಜನ ಕ್ರೀಡಾ ಲೋಕದಲ್ಲೂ ಯಶಸ್ಸು ಕಂಡಿದ್ದಾರೆ ಎಂದು. ಹಾಗಾದ್ರೆ ಬನ್ನಿ ಇಂಜಿನಿಯರ್ ಪದವಿ ಹೊಂದಿರುವ ಸ್ಟಾರ್ ಕ್ರಿಕೆಟಿಗರು ಯಾರೆಂದು ತಿಳಿದುಕೊಳ್ಳೋಣ..
- ಶ್ರೀನಿವಾಸ್ ವೆಂಕಟರಾಘವನ್: ಭಾರತ ಕ್ರಿಕೆಟ್ ತಂಡದ ಮಾಜಿ ಆಫ್ ಬ್ರೇಕ್ ಬೌಲರ್ ಮತ್ತು ಅಂಪೈರ್ ಶ್ರೀನಿವಾಸ್ ವೆಂಕಟರಾಘವನ್ ಅವರು ಎಂಜಿನಿಯರ್ ಪದವೀಧರರು. ಇವರು ಚೆನ್ನೈನ ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದರು.
- ಇಎಎಸ್ ಪ್ರಸನ್ನ: ಭಾರತದ ಮಾಜಿ ಆಫ್ ಸ್ಪಿನ್ನರ್ ಇಎಎಸ್ ಪ್ರಸನ್ನ ಅವರನ್ನು ಮೊದಲ ಇಂಜಿನಿಯರ್ ಪದವೀಧರ ಕ್ರಿಕೆಟರ್ ಎಂದು ಹೇಳಲಾಗುತ್ತದೆ. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಅವರು ಬಿಇ ಪದವಿ ಪಡೆದಿದ್ದರು.
- ಕೆ ಶ್ರೀಕಾಂತ್: 80ರ ದಶಕದ ಭಾರತದ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಕೃಷ್ಣಮಾಚಾರಿ ಶ್ರೀಕಾಂತ್, ಚೆನ್ನೈನ ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು.
- ಅನಿಲ್ ಕುಂಬ್ಳೆ: ಕರ್ನಾಟಕದ ಶ್ರೇಷ್ಠ ಲೆಗ್ ಸ್ಪಿನ್ನರ್ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೂಡ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು.
- ಜಾವಗಲ್ ಶ್ರೀನಾಥ್: ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್, ಜಾವಗಲ್ ಶ್ರೀನಾಥ್ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜ್ (SJCE) ನಲ್ಲಿ ವಾದ್ಯ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು.
- ರವಿಚಂದ್ರನ್ ಅಶ್ವಿನ್: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಅಶ್ವಿನ್ ಈಗಲೂ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಅವರು ಟೆಸ್ಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.
- ಶಿಖಾ ಪಾಂಡೆ: ಭಾರತೀಯ ಮಹಿಳಾ ಕ್ರಿಕೆಟ್ನ ವೇಗದ ಬೌಲರ್ ಶಿಖಾ ಪಾಂಡೆ ಗೋವಾದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
- ಆಕಾಶ್ ಮಧ್ವಲ್: ಐಪಿಎಲ್ 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ಆಕಾಶ್ 2016ರಲ್ಲಿ ರೂರ್ಕಿಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ಡೈಮೆಂಡ್ ಲೀಗ್ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ನೀರಜ್ ಚೋಪ್ರಾ: ಅದಕ್ಕೆ ಕಾರಣ ಇದೇ ನೋಡಿ - Neeraj Chopra