ಹೈದರಾಬಾದ್(ತೆಲಂಗಾಣ): ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಮೈದಾನಕ್ಕಿಳಿಯುತ್ತಿಲ್ಲ. ಹೀಗಾಗಿ, ನಾವು ಗುಣಮಟ್ಟದ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅನುಪಸ್ಥಿತಿಯಲ್ಲಿ ಇತರ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ತಿಳಿಸಿದರು. ಟೆಸ್ಟ್ ಸರಣಿಗೂ ಮುನ್ನ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್, 2ನೇ ಟೆಸ್ಟ್ ವಿಶಾಖಪಟ್ಟಣ, 3ನೇ ಟೆಸ್ಟ್ ರಾಜ್‌ಕೋಟ್, 4ನೇ ಟೆಸ್ಟ್ ರಾಂಚಿ ಮತ್ತು 5ನೇ ಮತ್ತು ಅಂತಿಮ ಟೆಸ್ಟ್ ಧರ್ಮಶಾಲಾದಲ್ಲಿ ನಡೆಯಲಿದೆ.
''ಟೀಂ ಇಂಡಿಯಾ ವಿರಾಟ್ ಕೊಹ್ಲಿಯಂತಹ ಗುಣಮಟ್ಟದ ಆಟಗಾರನನ್ನು ಕಳೆದುಕೊಳ್ಳುತ್ತಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಅಸಾಧಾರಣ ಆಟಗಾರ. ಅವರ ದಾಖಲೆಗಳು ಎಲ್ಲವನ್ನೂ ಹೇಳುತ್ತವೆ. ಅವರು ತಂಡಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡುತ್ತಾರೆ. ಇದರಿಂದ ಇತರ ಆಟಗಾರರೂ ಉತ್ತಮ ಪ್ರದರ್ಶನ ನೀಡಲು ಅನುವಾಗುತ್ತದೆ'' ಎಂದು ಹೇಳಿದರು.
"ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಟೆಸ್ಟ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಆಡಿದ್ದಾರೆ. ತಂಡದಲ್ಲಿ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಇತರ ಕೆಲವು ಶ್ರೇಷ್ಠ ಆಟಗಾರರಿದ್ದಾರೆ. ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಮತ್ತು ಸಾಮರ್ಥ್ಯ ಸಾಬೀತುಪಡಿಸಲು ಅವರಿಗೆ ಅವಕಾಶವಿದೆ" ಎಂದು ದ್ರಾವಿಡ್ ತಿಳಿಸಿದರು.
ಹೈದರಾಬಾದ್ ಪಿಚ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ''ಪಿಚ್ ಪರಿಸ್ಥಿತಿಯನ್ನು ಊಹಿಸುವುದು ಕಷ್ಟ. ಆಟ ಪ್ರಾರಂಭವಾದ ನಂತರ ನಾವು ಲೆಕ್ಕಾಚಾರ ಮಾಡುತ್ತೇವೆ. ನಾನು ಗಮನಿಸಿದಂತೆ ಪಿಚ್ ಚೆನ್ನಾಗಿರುವಂತೆ ತೋರುತ್ತಿದೆ. ಪಿಚ್ನಲ್ಲಿ ಸ್ವಲ್ಪಮಟ್ಟಿಗೆ ಸ್ಪಿನ್ ಮಾಡಬಹುದು. ಆದರೆ ಎಷ್ಟು ವೇಗವಾಗಿ ಬೌಲ್ ಮಾಡಬಹುದು ಎಂಬುದು ನನಗೆ ತಿಳಿದಿಲ್ಲ" ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ: ದ್ರಾವಿಡ್