ಹೈದರಾಬಾದ್: ಇಂಗ್ಲೆಂಡ್ನ ಸ್ಟಾರ್ ಕ್ರಿಕೆಟಿಗ ಡೇವಿಡ್ ಮಲಾನ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2017 ರಲ್ಲಿ ಇಂಗ್ಲೆಂಡ್‌ಗೆ ಪಾದಾರ್ಪಣೆ ಮಾಡಿದ ಈ ಎಡಗೈ ಬ್ಯಾಟ್ಸ್‌ಮನ್, ತಮ್ಮ ವೃತ್ತಿಜೀವನದಲ್ಲಿ 22 ಟೆಸ್ಟ್, 30 ಏಕದಿನ ಮತ್ತು 62 ಟಿ20 ಪಂದ್ಯಗಳನ್ನಾಡಿದ್ದಾರೆ.
ಡೇವಿಡ್ ಮಲಾನ್ ಟೆಸ್ಟ್‌ನಲ್ಲಿ ಒಂದು ಶತಕ, ಏಕದಿನದಲ್ಲಿ ಆರು ಮತ್ತು ಟಿ20ಯಲ್ಲಿ ಒಂದು ಶತಕಗಳನ್ನ ಸಿಡಿಸಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಮಲಾನ್, ಈ ಸಾಧನೆ ಮಾಡಿದ ಎರಡನೇ ಇಂಗ್ಲಿಷ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರಿಗಿಂತ ಮೊದಲು ಜೋಸ್ ಬಟ್ಲರ್ ಈ ಸಾಧನೆ ಮಾಡಿದ್ದರು. ಕಳೆದ ವರ್ಷ ವಿಶ್ವಕಪ್ ಆಡಿದ ನಂತರ ಮಲಾನ್, ಇಂಗ್ಲೆಂಡ್ ಏಕದಿನ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ ಮತ್ತು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆಯಾಗಿರಲಿಲ್ಲ.
ಮಲನ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಸ್ಥಳೀಯ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದು, "ಟೆಸ್ಟ್ ಕ್ರಿಕೆಟ್ ಯಾವಾಗಲೂ ನನ್ನ ಬೆಳೆವಣಿಗೆಗೆ ಉತ್ತುಂಗವಾಗಿತ್ತು. ಕೆಲವೊಮ್ಮೆ ನಾನು ಚೆನ್ನಾಗಿ ಆಡಿದ್ದೇನೆ. ಆದರೆ ನಡುವೆ ಸ್ಥಿರತೆ ಕಾಪಾಡಿಕೊಳ್ಳಲಾಗಲಿಲ್ಲ. ಇದು ನಿರಾಶಾದಾಯಕವಾಗಿತ್ತು. ಏಕೆಂದರೆ ನಾನು ಅದಕ್ಕಿಂತ ಉತ್ತಮ ಆಟಗಾರ ಎಂದು ನಾನು ಭಾವಿಸಿದೆ. ನಾನು ಎಲ್ಲಾ ಮೂರು ಸ್ವರೂಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ. ಆದರೆ ಟೆಸ್ಟ್ ಕ್ರಿಕೆಟ್ ಮೇಲಿನ ಒಲವು ಬೇರೆಯೇ ಆಗಿತ್ತು" ಎಂದಿದ್ದಾರೆ.
"ನಾನು ಸಾಕಷ್ಟು ಚೆಂಡುಗಳನ್ನು ಹೊಡೆಯಲು ಇಷ್ಟಪಡುತ್ತೇನೆ ಮತ್ತು ಕಠಿಣ ತರಬೇತಿ ಪಡೆಯುತ್ತಿದ್ದೆ. ವಿಶೇಷವಾಗಿ ನಾನು ಆಡಿದ ಸುದೀರ್ಘ ಟೆಸ್ಟ್ ಸರಣಿಯಲ್ಲಿ ಮಾನಸಿಕವಾಗಿ ತುಂಬಾ ಕ್ಷೀಣಿಸುತ್ತಿದ್ದೆ. ನನ್ನ ಪ್ರದರ್ಶನವು ಮೂರನೇ ಅಥವಾ ನಾಲ್ಕನೇ ಟೆಸ್ಟ್ನಿಂದ ಕುಸಿಯುತ್ತಿತ್ತು. ಆದರೆ, ನಿಮಗೆ ತಿಳಿದಿದೆ, ಮೈದಾನದಲ್ಲಿ ನಾನು ಯಾವಾಗಲೂ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಲು ಸರಿ ಎಂದು ಭಾವಿಸಿದ್ದನ್ನೇ ಮಾಡಿದ್ದೇನೆ. ನಾವು ಗೆದ್ದಿದ್ದೇವೆಯೇ ಅಥವಾ ಸೋತಿದ್ದೇವೆಯೇ ಎಂಬ ಬಗ್ಗೆ ಚಿಂತಿಸದೆ ನಾನು ರನ್ ಗಳಿಸದೇ ಎಂದಿಗೂ ಮೈದಾನದಿಂದ ಹೊರನಡೆಯಲಿಲ್ಲ. ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆಯೇ ಎಂದು ನಾನು ಯಾವಾಗಲೂ ನನ್ನನ್ನು ಪ್ರಶ್ನಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಮಲನ್ ತಮ್ಮ ವೃತ್ತಿಜೀವನದಲ್ಲಿ ಆಡಿದ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಕ್ರಮವಾಗಿ 1074, 1450 ಮತ್ತು 1892 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಜಯ್ ಶಾ ಸಾರಥಿ; ಅಧ್ಯಕ್ಷರಾಗಿ ಅವಿರೋಧ ಆಯ್ಕೆ - ICC New President