ನವದೆಹಲಿ: ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ನಿವೃತ್ತಿ ಸುದ್ದಿ ಬುಧವಾರದಿಂದ ಎಲ್ಲೆಡೆ ಸುದ್ದಿಯಾಗಿತ್ತು. ಬುಧವಾರ ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, "ನಾನು ವಯಸ್ಸಿನ ಮಿತಿಯಿಂದಾಗಿ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ" ಎಂದು ಹೇಳಿರುವುದಾಗಿ ವರದಿಯಾಗಿತ್ತು. ಆದರೆ ಇದೀಗ ಸ್ವತಃ ಮೇರಿ ಕೋಮ್, "ನಾನು ನಿವೃತ್ತಿ ಘೋಷಿಸಿಲ್ಲ" ಎಂದು ತಿಳಿಸಿದ್ದಾರೆ.
"ನಾನು ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿಲ್ಲ.ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಿವೃತ್ತಿ ನೀಡಲು ಬಯಸಿದರೆ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ. ಬುಧವಾರ ನಾನು ಕಾರ್ಯಕ್ರಮವೊಂದರಲ್ಲಿ ನಿವೃತ್ತಿ ಘೋಷಿಸಿದ್ದೇನೆ ಎಂದು ವರದಿಯಾಗಿದೆ. ಅದು ನಿಜವಲ್ಲ.ನಾನು ಜನವರಿ 24ರಂದು ದಿಬ್ರೂಗಢ್‌ನಲ್ಲಿ (ಅಸ್ಸಾಂ) ಶಾಲಾ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಮಾತನಾಡಿ, 'ನನಗಿನ್ನೂ ಕ್ರೀಡೆಯಲ್ಲಿ ಸಾಧನೆ ಮಾಡುವ ಹಸಿವಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ವಯಸ್ಸಿನ ಮಿತಿ ಇರುವುದರಿಂದ ನನಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ' ಎಂದಿದ್ದೆ. ಸದ್ಯ ನಾನು ಫಿಟ್ನೆಸ್ ಬಗ್ಗೆ ಗಮನಹರಿಸುತ್ತಿದ್ದೇನೆ. ನಿವೃತ್ತಿ ಘೋಷಿಸಿದಾಗ ಎಲ್ಲರಿಗೂ ತಿಳಿಸುತ್ತೇನೆ. ದಯವಿಟ್ಟು ನನ್ನ ನಿವೃತ್ತಿ ಬಗ್ಗೆ ತಪ್ಪಾಗಿ ವರದಿಯಾಗಿರುವುದನ್ನು ಸರಿಪಡಿಸಿ" ಎಂದು ಇಂದು ಮಾಧ್ಯಮವೊಂದರ ಮೂಲಕ ತಿಳಿಸಿದರು.
ಇದನ್ನೂ ಓದಿ: 'ನನಗಿನ್ನೂ ಹಸಿವಿದೆ, ಆದರೆ..': ಬಾಕ್ಸಿಂಗ್‌ಗೆ 6 ಬಾರಿಯ ವಿಶ್ವಚಾಂಪಿಯನ್ ಮೇರಿ ಕೋಮ್ ವಿದಾಯ