ಅಹಮದಾಬಾದ್: ಗುಜರಾತ್ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಹಲವು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಅದರಲ್ಲೂ ವಡೋದರಾದಲ್ಲಿ ಮಳೆಯಿಂದಾಗಿ ವಿಶ್ವಾಮಿತ್ರ ನದಿ ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಸೃಷ್ಟಿಯಾಗಿದೆ. ನದಿ ತೀರದ ಹಲವು ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಭಾರತದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರಾಧಾ ಯಾದವ್ ಅವರ ಕುಟುಂಬವೂ ಪ್ರವಾದ ಸಿಲುಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಾಧಾ ಯಾದವ್ ಮತ್ತು ಅವರ ಕುಟುಂಬವನ್ನು ಪ್ರವಾಹದಿಂದ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ.
ಈ ಬಗ್ಗೆ ಸ್ವತಃ ರಾಧಾ ಯಾದವ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ಮಳೆಯಿಂದಾಗಿ ವಡೋದರದ ಎಲ್ಲಾ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನಾವೂ ಕೂಡ ಇದರಲ್ಲಿ ಸಿಲುಕಿಕೊಂಡಿದ್ದೆವು. ನಮ್ಮ ಕುಟುಂಬವನ್ನು ಸಂಕಟದ ಪರಿಸ್ಥಿತಿಯಲ್ಲಿ ರಕ್ಷಿಸಿದ NDRF ತಂಡಗಳಿಗೆ ವಿಶೇಷ ಧನ್ಯವಾದಗಳು" ಎಂದು ಬರೆದು ಪ್ರವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗುಜರಾತ್ ರಾಜ್ಯದಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಹಲವೆಡ ಪ್ರವಾಹ ಉಂಟಾಗಿದ್ದು ಇದರಲ್ಲಿ ಇದೂವರೆಗೂ 28 ಜನರು ಸಾವನ್ನಪ್ಪಿದ್ದಾರೆ. ಪ್ರವಾಹ ಪ್ರದೇಶಗಳಿಂದ ಸುಮಾರು 18,000 ನಿರಾಶ್ರಿತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಹದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ ರಾಜ್ಯದ ಪ್ರಸ್ತುತದ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ಪ್ರಕೃತಿ ವಿಕೋಪ ಎದುರಿಸಲು ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.