Shakib Al Hassan Bowling Ban: ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ಗೆ ಭಾರಿ ಸಂಕಷ್ಟ ಎದುರಾಗಿದ್ದು, ಇನ್ಮುಂದೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ. ಒಂದು ದಿನದ ಹಿಂದಷ್ಟೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಕೀಬ್ ಅವರೂ ಇಸಿಬಿ ನಡೆಸುವ ಟೂರ್ನಿಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶಕೀಬ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಬೌಲಿಂಗ್ ಮಾಡದಂತೆ ನಿಷೇಧ ಹೇರಿದೆ.
ಶಕೀಬ್ ಪ್ರಸ್ತುತ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಸರ್ರೆ ತಂಡದ ಭಾಗವಾಗಿದ್ದ ಅವರು ಇತ್ತೀಚೆಗೆ ಸೋಮರ್‌ಸೆಟ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶಕೀಬ್ 12 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ್ದ ಶಕೀಬ್ ಎರಡೂ ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದರು.
ಶಕೀಬ್ ಬೌಲಿಂಗ್ ನಿಷೇಧಕ್ಕೆ ಕಾರಣ ಏನು?: ವಾಸ್ತವವಾಗಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಶಕೀಬ್ ಅವರ ಬೌಲಿಂಗ್ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು. ಅವರ ಬೌಲಿಂಗ್ ಆ್ಯಕ್ಷನ್ 15 ಡಿಗ್ರಿ ವ್ಯಾಪ್ತಿಯನ್ನು ದಾಟುತ್ತದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮಗಳ ಪ್ರಕಾರ ಮಣಿಕಟ್ಟನ್ನು 15 ಡಿಗ್ರಿಗಿಂತ ಹೆಚ್ಚು ತಿರುಗಿಸುವಂತಿಲ್ಲ. ಈ ಹಿನ್ನೆಲೆ ಅವರ ಬೌಲಿಂಗ್ ಮೇಲೆ ನಿಷೇಧ ಹೇರಿತ್ತು.
ಸೆಪ್ಟೆಂಬರ್ 9 ರಿಂದ 12ರವರೆಗೆ ನಡೆದ ಕೌಂಟಿ ಪಂದ್ಯದಲ್ಲಿ ಶಕೀಬ್ ಉತ್ತಮ ಪ್ರದರ್ಶನ ನೀಡಿದ್ದರು. ಸೋಮರ್‌ಸೆಟ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 33.5 ಓವರ್‌ಗಳನ್ನು ಬೌಲ್ ಮಾಡಿದ್ದ ಅವರು 97 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿದ್ದರು. ನಂತರ ಎರಡನೇ ಇನಿಂಗ್ಸ್‌ನಲ್ಲಿ 29.3 ಓವರ್‌ಗಳನ್ನು ಬೌಲ್ ಮಾಡಿ 96 ರನ್‌ಗಳಿಗೆ 5 ವಿಕೆಟ್ ಉರುಳಿಸಿದ್ದರು.
ಶಕೀಬ್ ಕ್ರಿಕೆಟ್ ದಾಖಲೆ: ಶಕೀಬ್ ಈವರೆಗೂ 71 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 4609 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 31 ಅರ್ಧ ಶತಕಗಳು ದಾಖಲಾಗಿವೆ. ಶಕೀಬ್ ಈ ಮಾದರಿಯಲ್ಲಿ 246 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 36 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸಿದ್ದು, ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಉಳಿದಂತೆ 247 ಏಕದಿನ ಪಂದ್ಯಗಳನ್ನು ಆಡಿ, 7570 ರನ್ ಗಳಿಸಿದ್ದಾರೆ. ಇದರಲ್ಲೂ 317 ವಿಕೆಟ್ ಕೂಡ ಕಬಳಿಸಿದ್ದಾರೆ.
ಇದನ್ನೂ ಓದಿ: W,W,W,W,W,W: ಬುಮ್ರಾ ವಿಧ್ವಂಸಕ ದಾಳಿಗೆ ನಡುಗಿದ ಆಸ್ಟ್ರೇಲಿಯಾ: ಅನಿಲ್ ಕುಂಬ್ಳೆ ದಾಖಲೆ ಉಡೀಸ್!