ಹೈದರಾಬಾದ್: ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಟಿ20 ವಿಶ್ವಕಪ್ಕ್ರಿಕೆಟ್ಗೆ ಆಸ್ಟ್ರೇಲಿಯಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂದರೆ, ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್, ಯುವ ಸೆನ್ಸೇಷನ್ ಫ್ರೇಸರ್ ಮೆಕ್-ಗುರ್ಕ್, ಆಲ್ರೌಂಡರ್ ಮ್ಯಾಟ್ ಶಾರ್ಟ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಏಕದಿನ ವಿಶ್ವಕಪ್ ಗೆದ್ದ ಪ್ಯಾಟ್ ಕಮಿನ್ಸ್ ಬದಲಿಗೆ ಮಿಚೆಲ್ ಮಾರ್ಷ್ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಎರಡು ವರ್ಷಗಳಿಂದ ಒಂದೂ ಟಿ20 ವಿಶ್ವಕಪ್ ಆಡದ ಸ್ಪಿನ್ನರ್ ಆಸ್ಟನ್ ಅಗರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಮಾರ್ಕಸ್ ಸ್ಟೊಯಿನೀಸ್, ಟಿಮ್ ಡೇವಿಡ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ತಂಡದಲ್ಲಿ ಆಲ್ರೌಂಡರ್ಗಳ ಸ್ಥಾನಗಳನ್ನು ತುಂಬಿದ್ದಾರೆ.
ಟಿ20 ತಂಡದ ಹಂಗಾಮಿ ನಾಯಕರಾಗಿದ್ದ ಮಿಚೆಲ್ ಮಾರ್ಷ್ಗೆ ಪೂರ್ಣಾವಧಿ ನಾಯಕತ್ವ ನೀಡಲಾಗಿದೆ. ಬಹು ಮಹತ್ವದ ಟೂರ್ನಿಗೆ ಏಕದಿನ ವಿಶ್ವಕಪ್ ಗೆದ್ದ ಪ್ಯಾಟ್ ಕಮಿನ್ಸ್ರನ್ನು ಬೌಲರ್ ಆಗಿ ಮಾತ್ರ ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ ನಾಥನ್ ಎಲ್ಲಿಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಇರಲಿದ್ದಾರೆ.
ಸ್ಪಿನ್ ವಿಭಾಗದಲ್ಲಿ ಯುವ ಆಟಗಾರ ಆ್ಯಡಂ ಜಂಪಾ, ಆಸ್ಟನ್ ಅಗರ್ ಆಯ್ಕೆಯಾಗಿದ್ದಾರೆ. ಐಪಿಎಲ್‌ನಲ್ಲಿ ಸಿಡಿಯುತ್ತಿರುವ ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಹಿರಿಯ ಆಟಗಾರ ಡೇವಿಡ್ ವಾರ್ನರ್ ಮೇಲೆ ಬ್ಯಾಟಿಂಗ್ ಹೊಣೆ ಇದೆ.
ತಂಡ ಪ್ರಕಟಿಸಿದ ಬಳಿಕ ಮಾತನಾಡಿರುವ ಜಾರ್ಜ್ ಬೈಲಿ, "ಆಸ್ಟ್ರೇಲಿಯಾ ತಂಡವು ಸಮತೋಲಿತವಾಗಿದೆ. ಒಂಬತ್ತನೇ ಆವೃತ್ತಿಯ ಟಿ-20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಟ್ರೋಫಿ ಗೆಲ್ಲುವ ವಿಶ್ವಾಸವಿದೆ. ತಂಡದಲ್ಲಿನ ಆಟಗಾರರು ವಿಶ್ವಕಪ್ ಆಡಿದ ಅನುಭವ ಹೊಂದಿದ್ದಾರೆ. ವೆಸ್ಟ್ ಇಂಡೀಸ್ನ ಪಿಚ್ಗಳಲ್ಲಿ ಹೊಂದಿಕೊಂಡು ಆಡುವ ಚಾಕಚಕ್ಯತೆ ಇದೆ" ಎಂದಿದ್ದಾರೆ.
"ಸತತ ಗಾಯದಿಂದ ಬಳಲುತ್ತಿದ್ದ ಆಸ್ಟನ್ ಅಗರ್ ತಂಡಕ್ಕೆ ಮರಳಿದ್ದಾರೆ. ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ಮಿಚೆಲ್ ಮಾರ್ಷ್ ಆಲ್ರೌಂಡರ್ಗಳಾಗಿದ್ದಾರೆ. ಕೆಲ ಉತ್ತಮ ಆಟಗಾರರು ತಂಡದಲ್ಲಿ ಸ್ಥಾನ ಪಡೆಯದೇ ಇರುವುದು ದುರದೃಷ್ಟಕರ" ಎಂದರು.
ಆಸ್ಟ್ರೇಲಿಯಾ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಜೂನ್ 5ರಂದು ಓಮನ್ ವಿರುದ್ಧ ಬಾರ್ಬಡೋಸ್‌ನಲ್ಲಿ ಆರಂಭಿಸಲಿದೆ. ಇಂಗ್ಲೆಂಡ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ: ಮಿಚೆಲ್ ಮಾರ್ಷ್ (ನಾಯಕ), ಆಸ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ
ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ: ಸ್ಯಾಮ್ಸನ್, ಚಹಲ್, ದುಬೆಗೆ ಛಾನ್ಸ್; ಕೆ.ಎಲ್.ರಾಹುಲ್ ಮಿಸ್ - T20 World Cup