ನವದೆಹಲಿ: ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಟೆಸ್ಟ್ ಪಂದ್ಯ ಆಡಲು ಭಾರತಕ್ಕೆ ಆಗಮಿಸಿವೆ. ಕಿವೀಸ್ ತಂಡದ ವಿರುದ್ಧ ಆತಿಥ್ಯ ವಹಿಸಲು ಭಾರತವು ನೋಯ್ಡಾದ ವಿಜಯ್ ಸಿಂಗ್ ಪಥಿಕ್ ಸ್ಟೇಡಿಯಂ ಅನ್ನು ಅಫ್ಘಾನಿಸ್ತಾನಕ್ಕೆ ನೀಡಿತ್ತು. ಈ ಪಂದ್ಯ ಸೆಪ್ಟೆಂಬರ್ 9 ರಿಂದ 13 ರವರೆಗೆ ನಡೆಯಬೇಕಿತ್ತು. ಆದರೆ ಎರಡು ದಿನಗಳ ನಂತರವೂ ಈ ಪಂದ್ಯವನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ.
ಈ ಕ್ರೀಡಾಂಗಣದ ಹೊರಾಂಗಣ ಇನ್ನೂ ತೇವದಿಂದ ಕೂಡಿದೆ. ವಿಸ್ಮಯಕಾರಿ ಸಂಗತಿಯೆಂದರೆ ಕಳೆದ ಎರಡು ದಿನಗಳಿಂದ ಮಳೆಯಿಲ್ಲ, ಆದರೂ ಈ ಕ್ರೀಡಾಂಗಣದ ಔಟ್ ಫೀಲ್ಡ್ ಮಾತ್ರ ತೇವಗೊಂಡಿದೆ. ಇನ್ನು ಕ್ರೀಡಾಂಗಣದ ಜತೆಗೆ ಸಿಬ್ಬಂದಿ ಬಗ್ಗೆಯೂ ಸಾಕಷ್ಟು ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಈ ನಡುವೆ ಗ್ರೇಟರ್ ನೋಯ್ಡಾ ಸ್ಪೋರ್ಟ್ಸ್ ಸ್ಟೇಡಿಯಂ ಕಾಂಪ್ಲೆಕ್ಸ್‌ನ ಸಿಬ್ಬಂದಿಗೆ ಸಂಬಂಧಿಸಿದ ಪೋಸ್ಟ್ ವೈರಲ್ ಆಗುತ್ತಿದೆ. ಈ ಸ್ಟೇಡಿಯಂನ ಸಿಬ್ಬಂದಿ ವಾಶ್‌ರೂಮ್‌ನ ವಾಶ್ ಬೇಸಿನ್‌ನಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ಈ ಪೋಸ್ಟ್‌ನಲ್ಲಿ ಕಾಣಬಹುದಾಗಿದೆ. ಕ್ರೀಡಾಂಗಣದ ಫೋಟೋ ಹೊರಬಂದ ನಂತರ, ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಇದನ್ನು ಸಾಕಷ್ಟು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ವೈರಲ್ ಫೋಟೋದಲ್ಲಿ, ಟಾಯ್ಲೆಟ್ ಬೇಸಿನ್‌ನಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇದಕ್ಕೂ ಮುನ್ನ ಕ್ರೀಡಾಂಗಣದಲ್ಲಿ ವಿದ್ಯುತ್ ಫ್ಯಾನ್‌ಗಳಿಂದ ಮೈದಾನ ಒಣಗಿಸುತ್ತಿರುವ ಫೋಟೋಗಳು ಕೂಡಾ ವೈರಲ್ ಆಗಿದ್ದವು. ಇಷ್ಟೇ ಅಲ್ಲ, ವಿಭಿನ್ನ ಮಟ್ಟದ ತಂತ್ರಜ್ಞಾನ ಬಳಸಿ ಕ್ರೀಡಾಂಗಣದ ತೇವ ಹೋಗಲಾಡಿಸುವ ಪ್ರಯತ್ನ ಮಾಡಲಾಗಿದೆ.
ಏನೇ ಆಗಲಿ ಎರಡು ದಿನ ಮಳೆ ಬಾರದಿದ್ದರೂ ಪಂದ್ಯ ಆರಂಭವಾಗದಿರುವುದು ಮಾತ್ರ ಕ್ರೀಡಾಸಕ್ತರ ನಿರಾಸೆಗೆ ಕಾರಣವಾಗಿದೆ. ಈ ಮೈದಾನದಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಟೆಸ್ಟ್ ಪಂದ್ಯದ ಆಯೋಜನೆ ಮಾಡಿದ್ದೇಕೆ ಎಂದು ಪ್ರಶ್ನಿಸಲಾಗುತ್ತಿದೆ. ಸದ್ಯ ಎರಡನೇ ದಿನದಾಟವನ್ನೂ ಮುಂದೂಡಲಾಗಿದ್ದು, ಉಭಯ ತಂಡಗಳಿಗೂ ಏಕೈಕ ಟೆಸ್ಟ್‌ಗೆ 3 ದಿನಗಳು ಮಾತ್ರ ಬಾಕಿ ಉಳಿದಿವೆ.
ಇದನ್ನು ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ಹೊಸ ಮುಖಗಳಿಗೆ ಅವಕಾಶ - BCCI Announced Indian Squad