ನವದೆಹಲಿ: ಪೋಕ್ಸೊ ಕಾಯ್ದೆಯಡಿ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಅರ್ಜುನ ಪ್ರಶಸ್ತಿ ವಿಜೇತ ಭಾರತೀಯ ಹಾಕಿ ಆಟಗಾರ ವರುಣ್ ಕುಮಾರ್ ಅವರು ಕಾನೂನು ಹೋರಾಟ ಕೈಗೊಳ್ಳುವ ಸಲುವಾಗಿ ಭುವನೇಶ್ವರದ ಎಫ್‌ಐಎಚ್ ಪ್ರೊ ಲೀಗ್‌ನಿಂದ ಹಿಂದೆ ಸರಿದಿದ್ದಾರೆ.
''ತಮ್ಮಿಂದ ಹಣ ಸುಲಿಗೆ ಮಾಡುವ ಲೆಕ್ಕಾಚಾರದಿಂದ ಈ ರೀತಿಯ ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಘಟನೆಯು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ" ಎಂದು ಹಾಕಿ ಆಟಗಾರ ವರುಣ್ ಕುಮಾರ್ ಹೇಳಿಕೆ ನೀಡಿದ್ದಾರೆ. ತಾನು ಅಪ್ರಾಪ್ತಳಾಗಿದ್ದಾಗ ವರುಣ್ ಕುಮಾರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿಯೊಬ್ಬರು ಆರೋಪಿಸಿರುವ ಹಿನ್ನೆಲೆಯಲ್ಲಿ ವರುಣ್ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಹಾಕಿ ಇಂಡಿಯಾ ರಾಷ್ಟ್ರೀಯ ಕರ್ತವ್ಯದಿಂದ ತುರ್ತು ರಜೆ ಪಡೆದುಕೊಂಡಿದ್ದಾರೆ.
ವರುಣ್ ಕುಮಾರ್ ಹೇಳಿದ್ದೇನು?: 2018ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ವರುಣ್‌ನ ಸಂಪರ್ಕಕ್ಕೆ ಬಂದಿದ್ದಾಗಿ 22 ವರ್ಷದ ಯುವತಿ ಸೋಮವಾರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ''17 ವರ್ಷದವಳಿದ್ದಾಗ ಮದುವೆಯ ಭರವಸೆ ನೀಡಿ ಈ ಹಾಕಿ ಆಟಗಾರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ಬರೆದ ಪತ್ರದಲ್ಲಿ ಯುವತಿ ತಿಳಿಸಿದ್ದಾರೆ. ಆದರೆ ವರುಣ್ ಅವರು, ತಮ್ಮ ವಿರುದ್ಧದ ಆರೋಪ ಸುಳ್ಳು ಮತ್ತು ಹಣ ವಸೂಲಿ ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
"ಈ ಹಿಂದೆ ಹುಡುಗಿಯೊಬ್ಬರು ನನ್ನ ವಿರುದ್ಧ ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಮಾಧ್ಯಮ ವರದಿಗಳ ಮೂಲಕ ನನಗೆ ತಿಳಿದಿದೆ. ಈ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಈ ಸಂಬಂಧ ಯಾವುದೇ ಪೊಲೀಸ್ ಅಧಿಕಾರಿ ನನ್ನನ್ನು ಸಂಪರ್ಕಿಸಿಲ್ಲ'' ಎಂದು ವರುಣ್ ಬುಧವಾರ ಟಿರ್ಕೆಗೆ ಕಳುಹಿಸಿರುವ ಪತ್ರದ ಬಗ್ಗೆ ತಿಳಿಸಿದ್ದಾರೆ.
"ಈ ಪ್ರಕರಣದ ಮೂಲಕ ನನ್ನಿಂದ ಹಣವನ್ನು ಸುಲಿಗೆ ಮಾಡುವ ಮತ್ತು ನನ್ನ ಖ್ಯಾತಿ ಮತ್ತು ಇಮೇಜ್ ಹಾಳುಮಾಡುವ ಲೆಕ್ಕಾಚಾರದ ಪ್ರಯತ್ನವಲ್ಲದೇ ಬೇರೇನೂ ಅಲ್ಲ, ಏಕೆಂದರೆ ನಾನು ಭಾರತಕ್ಕಾಗಿ ಆಡಿದ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತನಾಗಿದ್ದೇನೆ. ಈ ಪ್ರಕರಣದಿಂದ ನನಗೆ ಅಡ್ಡಿಯಾಗಬಹುದು ಎಂದು ಅವಳು ತಿಳಿದಿದ್ದಾಳೆ. ಆದರೆ ನಾನು ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ'' ಎಂದು ವರುಣ್ ಹೇಳಿದ್ದಾರೆ.
"ನನ್ನ ಕಾನೂನು ಪರಿಹಾರಗಳು ಮತ್ತು ಕಾನೂನು ಹಕ್ಕುಗಳನ್ನು ಪಡೆಯಲು ನನಗೆ ಅಕಾಡೆಮಿಯಿಂದ ತುರ್ತು ರಜೆ ಅಗತ್ಯವಿರುತ್ತದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ, ದುರದೃಷ್ಟವಶಾತ್ ನಾನು ಪ್ರೊ ಲೀಗ್‌ನಲ್ಲಿ ಭಾಗವಹಿಸದಂತಹ ಸ್ಥಿತಿಯಲ್ಲಿ ಇದ್ದೇನೆ'' ಎಂದು ವರುಣ್ ಹಾಕಿ ಇಂಡಿಯಾಗೆ ಪತ್ರ ಬರೆದಿದ್ದಾರೆ.
"ಈ ಘಟನೆಯು ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮತ್ತು ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಅಗ್ನಿ ಪರೀಕ್ಷೆಯ ಸಮಯವಾಗಿದೆ. ಕ್ರೀಡಾಪಟುವಾಗಿ ನಾನು ಯಾವಾಗಲೂ ಕೊನೆಯವರೆಗೂ ಹೋರಾಡಲು ಕಲಿತಿದ್ದೇನೆ ಮತ್ತು ಕಷ್ಟದ ಸಮಯದಲ್ಲಿ ನಾನು ನಿಮ್ಮ ಬೆಂಬಲವನ್ನು ಕೋರುತ್ತೇನೆ'' ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿವಿಧ ಜೈಲುಗಳಲ್ಲಿ ಗರ್ಭಿಣಿಯರಾಗಿ 196 ಶಿಶುಗಳಿಗೆ ಜನ್ಮಕೊಟ್ಟ ಕೈದಿಗಳು: ಕೋಲ್ಕತ್ತಾ ಹೈಕೋರ್ಟ್ ಆತಂಕ