ಹೈದರಾಬಾದ್: ಮಿಲಿಯನ್ ಡಾಲರ್ ಕ್ರಿಕೆಟ್ ಎಂದೇ ಪ್ರಸಿದ್ದಿ ಪಡೆದಿರುವ ಐಪಿಎಲ್ ದೇಶ ಮಾತ್ರವಲ್ಲದೇ ವಿಶ್ವಮಟ್ಟದಲ್ಲೂ ಖ್ಯಾತಿ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಆಟಗಾರರ ಆಸೆಯೂ ಆಗಿರುತ್ತದೆ. ಒಂದೊಮ್ಮೆ ಆಟಗಾರರು ಈ ಟೂರ್ನಿಯಲ್ಲಿ ಕ್ಲಿಕ್ ಆದರೇ ಅವರಿಗೆ ನೇಮ್ ಮತ್ತು ಫೇಮ್ ಜತೆಗೆ ಕೈತುಂಬ ಹಣ ಕೂಡ ಬರುತ್ತದೆ. ಹಾಗಾಗಿ ಈ ಟೂರ್ನಿಯನ್ನು ಆಡಲು ದೇಶಿಯರು ಮಾತ್ರವಲ್ಲದೇ ವಿದೇಶಿ ಆಟಗಾರರು ಆಸಕ್ತಿ ತೋರಿಸುತ್ತಾರೆ.
2008ರಲ್ಲಿ ಪ್ರಾರಂಭವಾದ ಈ ಮಹಾ ಟೂರ್ನಿ ಇದೂವರೆಗೆ ಶಯಸ್ವಿಯಾಗಿ 17 ಋತುಗಳನ್ನು ಪೂರ್ಣಗೊಳಿಸಿದೆ. ಮತ್ತೊಂದೆಡೆ ವರ್ಷಗಳು ಉರುಳಿದಂತೆ ಫ್ರಾಂಚೈಸಿಗಳ ಪರ್ಸ್ ಮಿತಿಯೂ ಕೂಡ ಹೆಚ್ಚಳವಾಗುತ್ತಿದೆ. ಈ ಹಿಂದೆ ಐಪಿಎಲ್‌ನ ಉದ್ಘಾಟನಾ ಋತುವಿನಲ್ಲಿ ಪ್ರತಿ ಫ್ರಾಂಚೈಸಿ 22.5 ಕೋಟಿಗಳ ಪರ್ಸ್ ಮಿತಿಯನ್ನು ಹೊಂದಿತ್ತು. ಇದೀಗ ಇದರ ಮಿತಿ 120 ಕೋಟಿ ರೂ.ಗೆ ಬಂದು ನಿಂತಿದೆ. ಅಂದರೆ 17 ವರ್ಷಗಳಲ್ಲಿ ಸುಮಾರು 600 ಪ್ರತಿಶತದಷ್ಟು ಹೆಚ್ಚಾಗಿದೆ. ಹಾಗಾದ್ರೆ ಬನ್ನಿ ಯಾವ ವರ್ಷದಲ್ಲಿ ಪರ್ಸ್ ಮಿತಿ ಹೆಚ್ಚಾಗುತ್ತ ಬಂದಿದೆ ಎಂದು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಪರ್ಸ್ ಮಿತಿ ಹೆಚ್ಚಳ: 2008ರಲ್ಲಿ ಆಟಗಾರರನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು 22.5 ಕೋಟಿ ರೂ ಪರ್ಸ್ ಮಿತಿಯನ್ನು ಹೊಂದಿದ್ದವು. ಆ ನಂತರ 2011ರ ವೇಳೆಗೆ ಇದು ರೂ.43.2 ಕೋಟಿಗೆ ಏರಿಕೆಯಾಗಿದೆ. ಅಂದರೆ ದ್ವಿಗುಣಗೊಂಡಿದೆ. ಅಲ್ಲದೆ, 2014ರ ವೇಳೆಗೆ ಆ ಮಿತಿ 60 ಕೋಟಿ ರೂಗೆ ತಲುಪಿದ್ದು 2018ಕ್ಕೆ 80 ಕೋಟಿ ಮತ್ತು 2022ಕ್ಕೆ ರೂ.90 ಕೋಟಿಗೆ ಬಂದು ನಿಂತಿದೆ. ಇನ್ನು ಮುಂದಿನ ವರ್ಷ ನಡೆಲಿರುವ 18ನೇ ಆವೃತ್ತಿಯ ಐಪಿಎಲ್ ಸೀಸನ್ಗೆ ತಲಾ ಫ್ರಾಂಚೈಸಿಗಳ ಮಿತಿ 120 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಆರಂಭಿಕ ಋತುವಿನಿಂದ ಇದು ಸುಮಾರು 600 ಪಟ್ಟು ಹೆಚ್ಚಳಗೊಂಡಿದೆ.
ಇತ್ತೀಚೆಗೆ 2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿಯು ರಿಟೇನ್ ನಿಯಮಗಳನ್ನು ಪ್ರಸ್ತಾಪಿಸಿದೆ. ಈ ನೂತನ ನಿಯಮದ ಪ್ರಕಾರ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದಿಂದ ಆರು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಿದೆ. ಜತೆಗೆ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಸಿಯೂ ಆಟಗಾರರನ್ನು ಮರಳಿ ತಂಡಕ್ಕೆ ಕರೆದುಕೊಳ್ಳಬಹುದಾಗಿದೆ. ರಿಟೇನ್ ಮಾಡಿಕೊಳ್ಳಲು ಆಟಗಾರರಿಗೆ ಹಣವನ್ನು ಕೂಡ ನಿಗದಿ ಪಡಿಸಿದೆ. ತಂಡದ ಬಳಿ ಪರ್ಸ್ ಮೊತ್ತ 120 ಕೋಟಿ ಆಗಿದ್ದರೆ, ಐದು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು 75 ಕೋಟಿ ರೂ. ವ್ಯಯಿಸಬೇಕಾಗಿದೆ. ಈ ಹಿಂದೆ 2022ರಲ್ಲಿ ನಡೆದೆ ಮೆಗಾ ಹರಾಜಿನಲ್ಲಿ ಆಯಾ ತಂಡಗಳು ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಬಾರಿ ಈ ಸಂಖ್ಯೆ ಆರಕ್ಕೆ ಏರಿಕಿಯಾಗಿದೆ.
ಐವರೂ ರಿಟೇನ್ಗೆ 75 ಕೋಟಿ ರೂ: ಐಪಿಎಲ್ ಆಡಳಿತ ಮಂಡಳಿ ನಿಯಮಗಳ ಪ್ರಕಾರ ಫ್ರಾಂಚೈಸಿಗಳು ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದರೇ ಮೊದಲ ಆಟಗಾರನಿಗೆ 18 ಕೋಟಿ ರೂ., ಎರಡನೇ ಆಟಗಾರನಿಗೆ ರೂ.14 ಕೋಟಿ, ಮೂರನೇ ಆಟಗಾರನಿಗೆ ರೂ.11 ಕೋಟಿ ಪಾವತಿಸಬೇಕಾಗುತ್ತದೆ. ನಾಲ್ಕು ಮತ್ತು ಐದನೇ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕಾದರೇ ಕ್ರಮವಾಗಿ 18 ಮತ್ತು 14 ಕೋಟಿ ವ್ಯಯಿಸಬೇಕಾಗುತ್ತದೆ. ಉಳಿದ 45 ಕೋಟಿ ರೂಗಳಲ್ಲಿ ಮಿಕ್ಕ ಆಟಗಾರರನ್ನು ಖರೀದಿಸಬೇಕಾಗುತ್ತದೆ.