ರಾಜ್ಕೋಟ್: ಟೆಸ್ಟ್ ಕ್ರಿಕೆಟ್ನಲ್ಲಿ ಬಾಜ್ಬಾಲ್ ಪರಿಚಯಿಸಿರುವ ಇಂಗ್ಲೆಂಡ್ಗೆ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕಂಟಕವಾದರು. ನಡೆಯುತ್ತಿರುವ ಮೂರನೇ ಟೆಸ್ಟ್ನಲ್ಲಿ ದ್ವಿಶತ ಬಾರಿಸುವ ಮೂಲಕ ಸರಣಿಯಲ್ಲಿ 2ನೇ ಡಬಲ್ ಸೆಂಚುರಿ ದಾಖಲಿಸಿದರು. ಇನ್ನೊಂದೆಡೆ, ಸರ್ಫರಾಜ್ ಖಾನ್ ಪಾದಾರ್ಪಣೆ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲೂ ಅರ್ಧಶತಕ ಬಾರಿಸಿ ಗಮನ ಸೆಳೆದರು. ಇದರಿಂದ ಭಾರತ 557 ರನ್ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ಗೆ ನೀಡಿತು.
ಬೆನ್ನು ನೋವಿನ ಕಾರಣ 3ನೇ ದಿನದಾಟದಲ್ಲಿ ಶತಕದ ಬಳಿಕ ವಿಶ್ರಾಂತಿ ಪಡೆದಿದ್ದ ಜೈಸ್ವಾಲ್, 4ನೇ ದಿನದಾಟದಲ್ಲಿ ತಮ್ಮ ಲಯವನ್ನು ಮುಂದುವರಿಸಿದರು. ಇಂಗ್ಲೆಂಡ್ನ ಪ್ರತಿ ಬೌಲರ್ಗಳನ್ನು ಬೆಂಡೆತ್ತಿದ ಯುವ ಬ್ಯಾಟರ್ ಎರಡನೇ ಶತಕವನ್ನು 103 ಎಸೆತಗಳಲ್ಲಿ ಪೂರೈಸಿದರು. 236 ಎಸೆತಗಳಲ್ಲಿ ಔಟಾಗದೇ 214 ರನ್ ಗಳಿಸಿದ ಜೈಸ್ವಾಲ್ ಇನಿಂಗ್ಸ್ನಲ್ಲಿ 14 ಬೌಂಡರಿ, 12 ಸಿಕ್ಸರ್ಗಳು ಸಿಡಿದವು.
ಸರ್ಫರಾಜ್ ಖಾನ್ ಫಿಫ್ಟಿ: ವರ್ಷಗಳ ಕಾಯುವಿಕೆ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಸರ್ಫರಾಜ್ ಖಾನ್ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಜೈಸ್ವಾಲ್ ಜೊತೆಗೂಡಿ ಟೆಸ್ಟ್ ಪಂದ್ಯವಾಗಿದ್ದರೂ ಹೊಡಿಬಡಿ ಆಟವಾಡಿ ಎರಡನೇ ಅರ್ಧಶತಕ ಬಾರಿಸಿದರು. ಖಾನ್ 72 ಎಸೆತಗಳಲ್ಲಿ 68 ರನ್ ಸಿಡಿಸಿದರು. ಇದರಲ್ಲಿ 3 ಸಿಕ್ಸರ್, 6 ಬೌಂಡರಿ ದಾಟಿದ್ದವು. ಮೊದಲ ಇನಿಂಗ್ಸ್ನಲ್ಲಿ ಖಾನ್ ಅಚಾನಕ್ ರನೌಟ್ಗೆ ಬಲಿಯಾಗಿದ್ದರೂ, 62 ರನ್ ಬಾರಿಸಿದ್ದರು.
ಶತಕ ತಪ್ಪಿಸಿಕೊಂಡ ಗಿಲ್: ಇದಕ್ಕೂ ಮೊದಲು 65 ರನ್ಗಳಿಂದ ಬ್ಯಾಟಿಂಗ್ ಉಳಿಸಿಕೊಂಡಿದ್ದ ಶುಭ್ಮನ್ ಗಿಲ್ 4ನೇ ದಿನದಾಟವನ್ನು ಭರ್ಜರಿಯಾಗಿ ಆರಂಭಿಸಿದರು. 91 ರನ್ ಗಳಿಸಿದ್ದಾಗ ರನ್ ಕದಿಯಲು ಹೋಗಿ ರನೌಟ್ ಆದರು. ಇದರಿಂದ ಸರಣಿಯಲ್ಲಿ 2ನೇ ಶತಕದಿಂದ ವಂಚಿತರಾದರು. ನೈಟ್ವಾಚ್ಮನ್ ಆಗಿ ಬಂದಿದ್ದ ಕುಲದೀಪ್ ಯಾದವ್ 27 ರನ್ ಪೇರಿಸಿದರು.
ಡಿಕ್ಲೇರ್ ಗೊಂದಲ: ಯಶಸ್ವಿ ಜೈಸ್ವಾಲ್ ದ್ವಿಶತಕ ಗಳಿಸಿದ ಬಳಿಕ ನಾಯಕ ರೋಹಿತ್ ಶರ್ಮಾ ಎದ್ದು ನಿಂತು ಫೀಲ್ಡಿಂಗ್ಗೆ ಬರುವಂತೆ ಕಂಡುಬಂದರು. ಇದರಿಂದ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲಾಯಿತು ಎಂದು ಇಂಗ್ಲೆಂಡ್ ಆಟಗಾರರು ಪೆವಿಲಿಯನ್ನತ್ತ ತೆರಳಿದರು. ಜೈಸ್ವಾಲ್, ಸರ್ಫರಾಜ್ ಮೈದಾನ ತೊರೆಯುತ್ತಿದ್ದರು. ಆದರೆ, ಶರ್ಮಾ ಇನಿಂಗ್ಸ್ ಮುಂದುವರಿಸುವಂತೆ ಸೂಚಿಸಿದರು. ಇದರಿಂದ ಗೊಂದಲ ಉಂಟಾಯಿತು.
ಭಾರತದ ಬೃಹತ್ ಗುರಿ ಬೆನ್ನತ್ತಲು ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 17 ಓವರ್ಗಳಲ್ಲಿ 41 ರನ್ಗೆ 4 ವಿಕೆಟ್ ಕಳೆದುಕೊಂಡಿದೆ.
ಇದನ್ನೂ ಓದಿ: ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್: 4ನೇ ದಿನದಾಟದಲ್ಲಿ ಮೈದಾನಕ್ಕಿಳಿಯಲಿರುವ ಸ್ಪಿನ್ನರ್