ಭಾರತದಲ್ಲಿನ ಗ್ರಾಮೀಣ ಜನತೆ ವಿಶೇಷವಾಗಿ ಮಹಿಳೆಯರು ಸುಮಾರು 50 ವರ್ಷಗಳ ಹಿಂದೆ ಅಹಿಂಸಾತ್ಮಕ ಚಿಪ್ಕೊ ಚಳವಳಿಯ (ಗಿಡಮರಗಳನ್ನು ಅಪ್ಪಿಕೊಳ್ಳುವ ಚಳವಳಿ)ನ್ನು ಆರಂಭಿಸಿದ್ದರು. ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿ (ಆಗ ಉತ್ತರ ಪ್ರದೇಶದ ಭಾಗ) ಈ ಚಳವಳಿ ಹುಟ್ಟಿಕೊಂಡಿತು. ವಾಣಿಜ್ಯ ಮತ್ತು ಕೈಗಾರಿಕೆಗಾಗಿ ಹೆಚ್ಚುತ್ತಿರುವ ಕಾಡುಗಳ ನಾಶವನ್ನು ವಿರೋಧಿಸಿ ಇದನ್ನು ಆರಂಭಿಸಲಾಗಿತ್ತು.
ಸರ್ಕಾರದ ಕ್ರಮಗಳಿಂದ ನೈಸರ್ಗಿಕ ಸಂಪನ್ಮೂಲಗಳು ಹಾಳಾಗಿ ಭಾರತದ ಹಿಮಾಲಯ ಪ್ರದೇಶದ ಸ್ಥಳೀಯ ಜನರ ಜೀವನೋಪಾಯಕ್ಕೆ ಹೆಚ್ಚೆಚ್ಚು ಅಪಾಯ ಎದುರಾಗಲು ಆರಂಭವಾದಾಗ ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಅಥವಾ ಅಹಿಂಸಾತ್ಮಕ ಪ್ರತಿರೋಧದ ವಿಧಾನವನ್ನು ಬಳಸಿಕೊಂಡು ವಿನಾಶದ ತಡೆಗೆ ಅಪ್ಪಿಕೊ ಚಳವಳಿ ರೂಪಿಸಲಾಯಿತು.
ಶೀಘ್ರದಲ್ಲೇ ಇದು ದೇಶಾದ್ಯಂತ ಹರಡಲು ಪ್ರಾರಂಭಿಸಿತು ಮತ್ತು ಚಿಪ್ಕೊ ಚಳವಳಿ ಹೆಸರಿನಲ್ಲಿ ಸಂಘಟಿತ ಅಭಿಯಾನವಾಗಿ ಮಾರ್ಪಟ್ಟಿತು. 1980 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಧ್ಯಪ್ರವೇಶದ ಪರಿಣಾಮವಾಗಿ ಉತ್ತರಾಖಂಡ ಹಿಮಾಲಯದಲ್ಲಿ ವಾಣಿಜ್ಯ ಮರಗಳನ್ನು ಕಡಿಯುವುದನ್ನು 15 ವರ್ಷಗಳ ಕಾಲ ನಿಷೇಧಿಸಿದಾಗ ಈ ಆಂದೋಲನವು ಪ್ರಮುಖ ಯಶಸ್ಸು ಕಂಡಿತು.
ಪ್ರಸ್ತುತ 2023ರ ದಿನಮಾನಗಳನ್ನು ನೋಡುವುದಾದರೆ- ನವೆಂಬರ್ 12 ರ ದೀಪಾವಳಿ ದಿನದಂದು ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ 4.5 ಕಿ.ಮೀ ಉದ್ದದ ಸುರಂಗದ ಒಂದು ಭಾಗವೊಂದು ಕುಸಿಯಿತು. ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಮತ್ತು ಪೊಲೀಸರಿಗೆ ಎರಡು ವಾರಗಳಿಗಿಂತ ಹೆಚ್ಚು ಸಮಯ ಹಿಡಿಯಿತು.
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಘಟನೆಗಳು ಏಕೆ ಆಗಾಗ್ಗೆ ನಡೆಯುತ್ತಿವೆ ಎಂಬುದರ ಬಗ್ಗೆ ಚಿಂತನೆ ನಡೆಸುವುದು ಇಂದಿನ ಅಗತ್ಯವಾಗಿದೆ. ಪ್ರಕೃತಿ ಮಾತೆಯು ತನ್ನ ಕ್ರೋಧವನ್ನು ಹೊರಹಾಕುವ ಮಟ್ಟಕ್ಕೆ ನಾವು ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆಯೇ? ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಸೂಕ್ತ ಕಾನೂನುಗಳನ್ನು ಜಾರಿಗೆ ತರುವಲ್ಲಿ ಮತ್ತು ಅವುಗಳನ್ನು ಸರಿಯಾಗಿ ಕಾರ್ಯಗತಗೊಳಿಸುವಲ್ಲಿ ಸಾಕಷ್ಟು ಗಂಭೀರವಾಗಿಲ್ಲವೇ ಎಂಬೆಲ್ಲ ಪ್ರಶ್ನೆ್ಗಳು ಸಹಜವಾಗಿ ಕಾಡುತ್ತವೆ.
ವಾಸ್ತವವಾಗಿ, ಉತ್ತರಾಖಂಡ ಸುರಂಗ ಕುಸಿತದ ವಿಷಯವು ದುರ್ಬಲ ಹಿಮಾಲಯ ಪ್ರದೇಶ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಕೆಲವು ಮಾರಣಾಂತಿಕ ನೈಸರ್ಗಿಕ ವಿಪತ್ತುಗಳನ್ನು ನಮಗೆ ನೆನಪಿಸುತ್ತದೆ. ಅವು ಹೀಗಿವೆ:
- 1999 ರಲ್ಲಿ ಒಡಿಶಾದಲ್ಲಿ ಸೂಪರ್ ಸೈಕ್ಲೋನ್ (15,000 ಕ್ಕೂ ಹೆಚ್ಚು ಸಾವು)
- 2001 ರಲ್ಲಿ ಗುಜರಾತ್ ಭೂಕಂಪ (20,000 ಸಾವುಗಳು)
- 2004 ರಲ್ಲಿ ಹಿಂದೂ ಮಹಾಸಾಗರದ ಸುನಾಮಿ (2.30 ಲಕ್ಷ ಸಾವುಗಳು)
- 2007 ರಲ್ಲಿ ಬಿಹಾರ ಪ್ರವಾಹ ದುರಂತ (1287 ಸಾವುಗಳು)
- 2013 ರಲ್ಲಿ ಉತ್ತರಾಖಂಡ್ ಪ್ರವಾಹ (5700 ಸಾವುಗಳು)
- 2014 ರಲ್ಲಿ ಕಾಶ್ಮೀರ ಪ್ರವಾಹ (550 ಸಾವುಗಳು)
- 2015ರಲ್ಲಿ ಚೆನ್ನೈ ಪ್ರವಾಹ
- ಕೇರಳ ಪ್ರವಾಹ (2018)
- ಹಿಮಾಚಲ ಪ್ರದೇಶ ಪ್ರವಾಹ (2023)
- ಅಸ್ಸಾಂ ಪ್ರವಾಹ (ಬಹುತೇಕ ಪ್ರತಿ ವರ್ಷ)
ಇತ್ತೀಚಿನ ದಿನಗಳಲ್ಲಿ ಮಾನವರು ಮತ್ತು ಜಾನುವಾರುಗಳ ಅನೇಕ ಜೀವಗಳ ನಷ್ಟದ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ದೊಡ್ಡ ಪ್ರಮಾಣದ ನಷ್ಟ ಉಂಟುಮಾಡಿದ ಕೆಲ ನೈಸರ್ಗಿಕ ವಿಪತ್ತು ಇವಾಗಿವೆ. ಜಿನೀವಾ ಮೂಲದ ಆಂತರಿಕ ವಲಸೆ ಮೇಲ್ವಿಚಾರಣಾ ಕೇಂದ್ರದ ವರದಿಯ ಪ್ರಕಾರ, ನೈಸರ್ಗಿಕ ವಿಪತ್ತುಗಳು 2022 ರಲ್ಲಿ ಭಾರತದಲ್ಲಿ ಸುಮಾರು 25 ಲಕ್ಷ (2.5 ಮಿಲಿಯನ್) ಜನರು ಆಂತರಿಕವಾಗಿ ವಲಸೆ ಹೋಗಲು ಕಾರಣವಾಗಿವೆ. ದಕ್ಷಿಣ ಏಷ್ಯಾದಲ್ಲಿ 2022 ರಲ್ಲಿ ವಿಪತ್ತುಗಳಿಂದಾಗಿ 1.25 ಕೋಟಿ (12.5 ಮಿಲಿಯನ್) ಜನತೆ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ.
ಚಾರ್ ಧಾಮ್ ಯೋಜನೆ: ಸುಸ್ಥಿರ ಅಭಿವೃದ್ಧಿ ಮಾದರಿಗೆ ಒಂದು ಉದಾಹರಣೆಯಾಗಿರುವ ಗಂಗೋತ್ರಿ, ಯಮುನೋತ್ರಿ, ಬದರೀನಾಥ್ ಮತ್ತು ಕೇದಾರನಾಥದ ನಾಲ್ಕು ಧಾರ್ಮಿಕ ತೀರ್ಥಯಾತ್ರೆಗಳನ್ನು ಸಂಪರ್ಕಿಸುವ ಎಲ್ಲಾ ಹವಾಮಾನದ ರಸ್ತೆಗಳನ್ನು ನಿರ್ಮಿಸುವುದನ್ನು ಈ ಯೋಜನೆ ಒಳಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ವತಿಯಿಂದ ಉತ್ತರಾಖಂಡದಲ್ಲಿ ನಡೆಯುತ್ತಿರುವ ಚಾರ್ ಧಾಮ್ ಯೋಜನೆ (ಸಿಡಿಪಿ) ಪರಿಸರವನ್ನು ರಕ್ಷಿಸುವ ಭಾರತದ ವಿಧಾನಕ್ಕೆ ಸಂಬಂಧಿಸಿದಂತೆ, ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳನ್ನು ಎದುರಿಸುವಲ್ಲಿ ಕೆಲ ಪ್ರಮುಖ ಸಮಸ್ಯೆಗಳನ್ನು ಎತ್ತಿದೆ.
ಸುಂದರವಾದ ಹಿಮಾಲಯದ ಹಿಂದೆ ಭಯಂಕರ ಸವಾಲುಗಳು: ಹಿಮಾಲಯವು ಪರ್ವತಗಳ ಅತ್ಯಂತ ಕಿರಿಯ ಶ್ರೇಣಿಯಾಗಿದೆ ಮತ್ತು ಇನ್ನೂ ರಚನಾತ್ಮಕ ಹಂತದಲ್ಲಿದೆ. ಭೂವೈಜ್ಞಾನಿಕ ವಿಜ್ಞಾನಿಗಳು ಮತ್ತು ಭೂ-ತಾಂತ್ರಿಕ ತಜ್ಞರು ಸಿಡಿಪಿ ಯೋಜನೆಯು ಅಪಾಯಕಾರಿ ಮತ್ತು ಮಾರಣಾಂತಿಕವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರದೇಶವು ಭೂಕಂಪ ಸಂಭವಿಸುವ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ ಮತ್ತು ಘರ್ಷಣೆಯ ಶೀಯರ್ ಬಂಡೆಗಳು ಸಹ ಇಲ್ಲಿ ಅಸ್ತಿತ್ವದಲ್ಲಿವೆ. ಮೌಂಟ್ ಎವರೆಸ್ಟ್ ನಂತಹ ಭೂಮಿಯ ಅತ್ಯುನ್ನತ ಶಿಖರಗಳನ್ನು ಒಳಗೊಂಡಿರುವ ಹಿಮಾಲಯ ಪ್ರದೇಶವನ್ನು ಸಂರಕ್ಷಿಸುವುದು ಬಹಳ ಮುಖ್ಯವಾದ ಜಾಗತಿಕ ವಿಷಯವಾಗಿದೆ. ಹಿಮಾಲಯವು ಭಾರತದ ಜೊತೆಗೆ ನೇಪಾಳ, ಚೀನಾ, ಪಾಕಿಸ್ತಾನ ಮತ್ತು ಭೂತಾನ್ ದೇಶಗಳನ್ನು ಒಳಗೊಂಡಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಹೀಗಾಗಿ ಭೂವಿಜ್ಞಾನಿಗಳು ಮತ್ತು ಪರಿಸರವಾದಿಗಳು ಮೊದಲಿನಿಂದಲೂ ಎರಡು ಮೂಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಅವು: ಮೊದಲನೆಯದಾಗಿ, ಹಿಮನದಿ ಕರಗುವಿಕೆ ಮತ್ತು ಬದಲಾದ ಹವಾಮಾನ ಮಾದರಿಗಳು ಮತ್ತು ಮಿತಿಮೀರಿದ ನಗರೀಕರಣಕ್ಕೆ ಕಾರಣವಾಗುವ ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಭಾರತೀಯ ಹಿಮಾಲಯನ್ ಪ್ರದೇಶ (ಐಎಚ್ಆರ್) ವಿನಾಶದ ಅಲೆಯನ್ನು ಎದುರಿಸುತ್ತಿರುವಾಗ ಚಾರ್ ಧಾಮ್ ಯೋಜನೆಯಂತಹ ಭಾರಿ ಮೂಲಸೌಕರ್ಯ ಯೋಜನೆಗಳ ಹೊರೆಯನ್ನು ಈ ಪ್ರದೇಶ ಹೇಗೆ ತಡೆದುಕೊಳ್ಳಬಲ್ಲದು? ಎಷ್ಟು ಪ್ರವಾಸೋದ್ಯಮ, ಎಷ್ಟು ರಸ್ತೆಗಳು, ಎಷ್ಟು ಪರ್ವತಗಳನ್ನು ಕತ್ತರಿಸುವುದು ಮತ್ತು ಅವಶೇಷಗಳನ್ನು ನದಿಗಳಿಗೆ ಸೇರಿಸಬಹುದು?
ಎರಡನೆಯದಾಗಿ, ಅಂತಹ ಯೋಜನೆಗಳಿಂದ ಉಂಟಾಗುವ ಪರಿಸರ ಪರಿಣಾಮ ಮೌಲ್ಯಮಾಪನವನ್ನು (ಇಐಎ) ಸರ್ಕಾರಗಳು ಎಲ್ಲಾ ಗಂಭೀರತೆಯಿಂದ ಪರಿಗಣಿಸಿವೆಯೇ? ಚಾರ್ ಧಾಮ್ ಯೋಜನೆಯ ಮೂಲ ಕಲ್ಪನೆಯನ್ನು ಭೂವಿಜ್ಞಾನಿಗಳು ಮತ್ತು ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ. ಏಕೆಂದರೆ ಸುಮಾರು 900 ಕಿ.ಮೀ ಉದ್ದದ ಯೋಜನೆಗೆ ಒಂದೇ ಇಐಎ ಹೊಂದುವ ಬದಲು, ಅದನ್ನು 53 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಂದರೆ ಇಐಎ ಯನ್ನು ಕಡಿಮೆ ಪ್ರದೇಶಕ್ಕೆ ಮಾಡಲಾಗಿದೆ.
ಈ ಪ್ರಕ್ರಿಯೆಯಲ್ಲಿ 900 ಕಿ.ಮೀ.ಗಳಷ್ಟು ದೊಡ್ಡ ಪರಿಸರ ವ್ಯವಸ್ಥೆಗೆ ಆಗಿರುವ ಹಾನಿಯನ್ನು ಉದ್ದೇಶಪೂರ್ವಕವಾಗಿ ಮತ್ತು ತರ್ಕರಹಿತವಾಗಿ ರಾಜಿ ಮಾಡಿಕೊಳ್ಳಲಾಯಿತು. ಮಾಲಿನ್ಯಕ್ಕೆ ಕಾರಣವಾಗುವ ಬೇಜವಾಬ್ದಾರಿ ಪ್ರವಾಸೋದ್ಯಮ ಐಎಚ್ಆರ್ ಹತ್ತು ರಾಜ್ಯಗಳನ್ನು ಒಳಗೊಂಡಿದೆ. ಅದರಲ್ಲಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳು ಬೇಜವಾಬ್ದಾರಿ ಪ್ರವಾಸೋದ್ಯಮದ ಅತಿದೊಡ್ಡ ಹೊರೆಯನ್ನು ಹೊಂದಿವೆ. ಪ್ರವಾಸೋದ್ಯಮವು ಹಿಮಾಲಯ ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ಆರ್ಥಿಕ ಸಮೃದ್ಧಿಯನ್ನು ತಂದಿದ್ದರೂ, ಪರಿಸರ ವಿನಾಶವು ಅದಕ್ಕಿಂತ ಎಷ್ಟೋ ಪಟ್ಟು ದೊಡ್ಡದಾಗಿದೆ.
ಪ್ರವಾಸೋದ್ಯಮದಿಂದ ಪ್ರತಿವರ್ಷ ಸುಮಾರು 80 ಲಕ್ಷ (ಎಂಟು ಮಿಲಿಯನ್) ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಜೊತೆಗೆ ನಗರ ಜನಸಂಖ್ಯೆಯು ಹತ್ತು ಲಕ್ಷ (ಒಂದು ಮಿಲಿಯನ್) ಟನ್ ವಾರ್ಷಿಕ ತ್ಯಾಜ್ಯ ಉತ್ಪಾದಿಸುತ್ತದೆ. 2025 ರ ವೇಳೆಗೆ ಪ್ರತಿವರ್ಷ 24 ಕೋಟಿ (240 ಮಿಲಿಯನ್) ಪ್ರವಾಸಿಗರು ಹಿಮಾಲಯದ ಗುಡ್ಡಗಾಡು ರಾಜ್ಯಗಳಿಗೆ ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ, ಇದು 2018 ರಲ್ಲಿ 10 ಕೋಟಿ (100 ಮಿಲಿಯನ್) ಆಗಿತ್ತು.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ನಡೆಸಿದ ಅಧ್ಯಯನವು ಐಎಚ್ಆರ್ನಲ್ಲಿ ಶೇಕಡಾ 55ರಷ್ಟು ತ್ಯಾಜ್ಯವು ಜೈವಿಕ ವಿಘಟನೀಯವಾಗಿದೆ ಮತ್ತು ಹೆಚ್ಚಾಗಿ ಮನೆಗಳು ಮತ್ತು ರೆಸ್ಟೋರೆಂಟ್ಗಳಿಂದ ಉತ್ಪಾದನೆಯಾಗುತ್ತದೆ ಎಂದು ಕಂಡು ಹಿಡಿದಿದೆ. ಇದರಲ್ಲಿ ನಿರ್ಮಾಣ ಸಾಮಗ್ರಿಗಳಂತಹ ಶೇ 21ರಷ್ಟು ಮತ್ತು ಶೇ 8 ರಷ್ಟು ಪ್ಲಾಸ್ಟಿಕ್ ತ್ಯಾಜ್ಯವಿದೆ. ಘನತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸದಿದ್ದರೆ, ಹಿಮಾಲಯದ ದುರ್ಬಲ ಪರಿಸರ ವ್ಯವಸ್ಥೆಯ ಮೇಲೆ ಭರಿಸಲಾಗದ ಹಾನಿಯಾಗಲಿದೆ.
ಹಿಮಾಲಯನ್ ಪ್ರದೇಶದ ಖುಲ್ಲಾ ಪ್ರದೇಶಗಳಲ್ಲಿ ಜೈವಿಕ ವಿಘಟನೀಯ ತ್ಯಾಜ್ಯವನ್ನು ಎಸೆಯುವುದು ಅವೈಜ್ಞಾನಿಕವಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ತ್ಯಾಜ್ಯವು ಕೊಳೆಯದೆ ಹಾಗೆಯೇ ಉಳಿದುಕೊಳ್ಳುತ್ತದೆ. ಇದರಿಂದ ಮೀಥೇನ್ ಮತ್ತು ಕಾರ್ಬನ್ ಮಾನಾಕ್ಸೈಡ್ ನಂತಹ ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತವೆ. ನಿರ್ದಿಷ್ಟವಾಗಿ ಮಣ್ಣಿಗೆ ವಿಷಕಾರಿ ರಾಸಾಯನಿಕಗಳು ಸೇರುತ್ತವೆ ಮತ್ತು ಅಂತಹ ಮಣ್ಣು ಮಳೆಯಿಂದಾಗಿ ನದಿಗಳು ಮತ್ತು ತೊರೆಗಳಿಗೆ ಸೇರಿ ನದಿ ನೀರನ್ನು ಕಲುಷಿತಗೊಳಿಸುತ್ತದೆ.
ವಾಯುಮಾಲಿನ್ಯದಿಂದಾಗಿ (ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಅನ್ನು ಮುಕ್ತವಾಗಿ ಸುಡುವುದು) ಮಾಲಿನ್ಯಕಾರಕಗಳು, ಇಂಗಾಲ ಮತ್ತು ಇತರ ಬೆಳಕನ್ನು ಹೀರಿಕೊಳ್ಳುವ ಕಲ್ಮಶಗಳು ಹಿಮನದಿಯ ಹಿಮವನ್ನು ಕಪ್ಪಾಗಿಸುತ್ತದೆ ಮತ್ತು ಕರಗುವಿಕೆಯನ್ನು ಪ್ರಚೋದಿಸುತ್ತದೆ. 2016 ರಲ್ಲಿ, ಕೇಂದ್ರ ಸರ್ಕಾರವು ಘನ ತ್ಯಾಜ್ಯವನ್ನು ನಿರ್ವಹಿಸಲು ಹೊಸ ನಿಯಮಗಳನ್ನು ಹೊರಡಿಸಿತು. ಆದಾಗ್ಯೂ ಇದರ ಪರಿಣಾಮಕಾರಿ ಅನುಷ್ಠಾನವೇ ಸವಾಲಾಗಿದೆ.
ಪರಿಸರ ನಾಶ ತಡೆಗೆ ಸಮಗ್ರ ಕ್ರಿಯಾ ಯೋಜನೆ: ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಂಸದೀಯ ಸ್ಥಾಯಿ ಸಮಿತಿ (ಜೈರಾಮ್ ರಮೇಶ್ ನೇತೃತ್ವದ) ಮಾರ್ಚ್ 2023 ರಲ್ಲಿ ಸಲ್ಲಿಸಿದ ವರದಿಯಲ್ಲಿ, ಹಿಮಾಲಯ ಪ್ರದೇಶದಲ್ಲಿ ಪರಿಸರ ವಿನಾಶಕಾರಿ ಚಟುವಟಿಕೆಗಳನ್ನು ತಡೆಗಟ್ಟಲು ಕೇಂದ್ರ ಪರಿಸರ ಸಚಿವಾಲಯವು ಸ್ಪಷ್ಟ ಸಮಯದ ಗಡುವಿನೊಂದಿಗೆ ಪ್ರಾಯೋಗಿಕ ಮತ್ತು ಕಾರ್ಯಗತಗೊಳಿಸಬಹುದಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಶಿಫಾರಸು ಮಾಡಿದೆ. ಯಾವುದೇ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಅನ್ನು ಸಚಿವಾಲಯ ರೂಪಿಸಬೇಕಿದೆ.
ಈ ಪ್ರದೇಶಗಳಲ್ಲಿ ಪ್ರವಾಸಿ ಚಟುವಟಿಕೆಗಳ ವಿಪರೀತ ಹೆಚ್ಚಳವು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ದುರ್ಬಳಕೆ, ಹೋಮ್ ಸ್ಟೇಗಳು, ಅತಿಥಿ ಗೃಹಗಳು, ರೆಸಾರ್ಟ್ ಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಅಕ್ರಮ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಸದನ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಆರ್ಥಿಕ ಹಿತಾಸಕ್ತಿಗಿಂತ ಹೆಚ್ಚಾಗಿ ಪರಿಸರ ಹಿತಾಸಕ್ತಿಗಳನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಹೆಚ್ಚು ನಿಖರವಾದ ವಿಧಾನ, ಅಕ್ರಮ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಮತ್ತು ಸರಿಯಾದ ಪರಿಸರ ಸಮತೋಲನವನ್ನು ಸಾಧಿಸಲು ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅನುಮತಿ ನೀಡುವ ಮೊದಲು ಸಚಿವಾಲಯವು ಅನುಸರಿಸಬೇಕಾದ ವಿವರವಾದ ಕಾರ್ಯವಿಧಾನದ ಅಗತ್ಯವು ಸದನ ಸಮಿತಿಯ ಕೆಲವು ಪ್ರಮುಖ ಶಿಫಾರಸುಗಳಾಗಿವೆ.
ಸ್ಥಾಯಿ ಸಮಿತಿ ಅಧ್ಯಕ್ಷ ಜೈರಾಮ್ ರಮೇಶ್ ಅವರು ಮೂರು ಪ್ರಮುಖ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ಸಮಿತಿಗೆ ಕಳುಹಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಂತಹ ಎರಡು ಮಸೂದೆಗಳು ಜೀವವೈವಿಧ್ಯ ಕಾಯ್ದೆ, 2002 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ, 1980 ಅನ್ನು ಆಮೂಲಾಗ್ರವಾಗಿ ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಿದ್ದವು.
ಜಾಗತಿಕವಾಗಿ ಕೊನೆಯ ಸ್ಥಾನದಲ್ಲಿ ಭಾರತ: ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (ಇಪಿಐ)ವು ದೇಶಗಳ ಪರಿಸರ ಆರೋಗ್ಯವನ್ನು ಅಳೆಯುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಶ್ರೇಯಾಂಕ ನೀಡುತ್ತದೆ. 2002 ರಲ್ಲಿ ವಿಶ್ವ ಆರ್ಥಿಕ ವೇದಿಕೆ ಪ್ರಾರಂಭಿಸಿದ ಇಪಿಐ, ಸುಸ್ಥಿರ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿ ಮಾಡಲು ವಿಶ್ವದಾದ್ಯಂತದ ದೇಶಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಡೆನ್ಮಾರ್ಕ್, ಯುಕೆ, ಫಿನ್ಲ್ಯಾಂಡ್, ಮಾಲ್ಟಾ ಮತ್ತು ಸ್ವೀಡನ್ 2022 ರಲ್ಲಿ ಇಪಿಐನಲ್ಲಿ ಅಗ್ರ ದೇಶಗಳಾಗಿವೆ. ವಿಪರ್ಯಾಸವೆಂದರೆ, ವಿಶ್ವದ ನಾಲ್ಕು ಪ್ರಮುಖ ಧರ್ಮಗಳ ಜನ್ಮಸ್ಥಳವಾದ ಮತ್ತು ಮರಗಳು ಮತ್ತು ನದಿಗಳಂತಹ ಪ್ರಕೃತಿಯ ವಿವಿಧ ಅಂಶಗಳನ್ನು ಜನರು ಪೂಜಿಸುವ ಭಾರತ ದೇಶವು 180 ದೇಶಗಳಲ್ಲಿ ಕೊನೆಯ ಸ್ಥಾನದಲ್ಲಿದೆ. ಪರಿಸರವಾದಿಯಾಗಿರುವ ಸುನೀತಾ ನಾರಾಯಣ್ ಅವರು 2013 ರಲ್ಲಿ ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳು, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಆಧರಿಸಿದ ಪ್ಯಾನ್-ಹಿಮಾಲಯನ್ ಅಭಿವೃದ್ಧಿ ಕಾರ್ಯತಂತ್ರವನ್ನು ಪ್ರತಿಪಾದಿಸಿದ್ದರು.
ಅಭಿವೃದ್ಧಿ ಕಾರ್ಯತಂತ್ರವು ತಮ್ಮ ಕೃಷಿ ಮತ್ತು ಮೂಲಭೂತ ಅಗತ್ಯಗಳಿಗಾಗಿ ಅರಣ್ಯಗಳನ್ನು ಅವಲಂಬಿಸಿರುವ ಸ್ಥಳೀಯ ಸಮುದಾಯಗಳ ಧ್ವನಿ ಮತ್ತು ಕಾಳಜಿಗಳನ್ನು ಸಹ ಒಳಗೊಂಡಿದೆ. ಅಂತಹ ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಸಲಹೆಯನ್ನು ಕೇಳಲು ನಮ್ಮ ಸರ್ಕಾರಗಳು ಸಿದ್ಧವಾಗಿವೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಲೇಖನ: ಡಾ. ಎನ್.ವಿ.ಆರ್.ಜ್ಯೋತಿ ಕುಮಾರ್, ಪ್ರೊಫೆಸರ್ ಇನ್ ಕಾಮರ್ಸ್, ಮಿಜೋರಾಂ ಸೆಂಟ್ರಲ್ ಯೂನಿವರ್ಸಿಟಿ
ಇದನ್ನೂ ಓದಿ : ಮುಖ್ಯಮಂತ್ರಿಯೊಬ್ಬರು ಜೈಲಿನಿಂದ ಆಡಳಿತ ನಡೆಸುವುದು ಎಷ್ಟು ಸರಿ?: ಒಂದು ಅವಲೋಕನ - Arvind Kejriwal