ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಮಂಡಿಸಲಿದ್ದಾರೆ. ಜೊತೆಗೆ ಅವರು ಸತತ 7ನೇ ಬಾರಿಗೆ ಹಣಕಾಸು ಲೆಕ್ಕವನ್ನು ದೇಶದ ಮುಂದೆ ಪ್ರಸ್ತುತಪಡಿಸಲಿದ್ದಾರೆ. ಬಜೆಟ್‌ನಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬುದು ಭಾರಿ ನಿರೀಕ್ಷೆ ಮೂಡಿಸಿದೆ.
ದೇಶವನ್ನು ಬಾಹ್ಯ ಶಕ್ತಿಗಳಿಂದ ರಕ್ಷಿಸಲು ಗಡಿ ಭದ್ರತೆಯು ಅಗತ್ಯವಾಗಿದೆ. ಸೇನಾ ಪಡೆಗಳ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಶಸ್ತ್ರಾಸ್ತ್ರ ಪೂರೈಕೆಯು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ. ಪಾಕಿಸ್ತಾನ, ಚೀನಾವು ಎರಡೂ ಕಡೆಗಳಲ್ಲಿ ಗುಪ್ತವಾಗಿ ದೇಶದ ಮೇಲೆ ಕೆಂಡಕಾರುತ್ತಿವೆ. ಹೀಗಾಗಿ ಭದ್ರತೆಯ ವಿಚಾರದಲ್ಲಿ ಸೂಕ್ಷ್ಮವಾಗಿರುವ ಕಾಲಘಟ್ಟದಲ್ಲಿ ಈ ಬಜೆಟ್‌ನಲ್ಲಿ ರಕ್ಷಣಾ ಬಜೆಟ್ ಎಷ್ಟಿರಲಿದೆ ಎಂಬುದು ಎಲ್ಲರ ಗಮನ ಸೆಳೆದಿದೆ.
ಪ್ರತಿ ವರ್ಷ ಅನುದಾನ ಹೆಚ್ಚಳ: 2020 ರಲ್ಲಿ ₹4.71 ಲಕ್ಷ ಕೋಟಿ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ಮೀಸಲಿಟ್ಟಿದ್ದರೆ, 2021 ರಲ್ಲಿ ಅದು ₹4.78 ಲಕ್ಷ ಕೋಟಿ, 2022 ರಲ್ಲಿ ₹5.25 ಲಕ್ಷ ಕೋಟಿ, 2023 ರಲ್ಲಿ ₹5.94 ಲಕ್ಷ ಕೋಟಿ, 2024-25 ರ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ₹6,21 ಲಕ್ಷ ಕೋಟಿಗಳನ್ನು ಮೀಸಲಿಡಲಾಗಿದೆ. ಇದು ಈ ಹಿಂದಿನ ಎಲ್ಲಕ್ಕಿಂತ ಹೆಚ್ಚಳವಾಗಿದೆ. ಅಂದರೆ, 2023-24 ರ ಹಂಚಿಕೆಗಿಂತ ಶೇಕಡಾ 4.7 ಹೆಚ್ಚಾಗಿದೆ.
ಇದರಲ್ಲಿ ಬಂಡವಾಳ ಸ್ವಾಧೀನ ₹72 ಲಕ್ಷ ಕೋಟಿ, ಸಶಸ್ತ್ರ ಪಡೆಗಳಿಗೆ ವೇತನ ಹೊರತುಪಡಿಸಿ ಆದಾಯ ವೆಚ್ಚಕ್ಕಾಗಿ ₹92,088 ಕೋಟಿ, ಪಿಂಚಣಿಗಾಗಿ ₹1.41 ಲಕ್ಷ ಕೋಟಿ, ಗಡಿ ಮೂಲಸೌಕರ್ಯಕ್ಕಾಗಿ ₹6,500 ಕೋಟಿ, ಭಾರತೀಯ ಕೋಸ್ಟ್ ಗಾರ್ಡ್ಗೆ ₹7,651.80 ಕೋಟಿ, ಡಿಆರ್ಡಿಒಗೆ ₹23,855 ಕೋಟಿ ಇದೆ ಎಂದು ಮಧ್ಯಂತರ ಬಜೆಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಸಲದ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಬಜೆಟ್ ಶೇಕಡಾ 7 ರಿಂದ 9 ರಷ್ಟು ವರ್ಧಿಸುವ ಸಾಧ್ಯತೆಯಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರಕ್ಷಣಾ ಉತ್ಪಾದನೆ ಮತ್ತು ರಫ್ತು, ಆಧುನೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಮತ್ತು ಅಗ್ನಿಪಥ್ ಯೋಜನೆಗೆ ಟೀಕೆ ನಡುವೆ ಬಜೆಟ್ ನಿರೀಕ್ಷೆ ಹೆಚ್ಚಿಸಿದೆ.
ಚೀನಾ- ಪಾಕ್ ಗಡಿ ಪ್ರದೇಶದಲ್ಲಿ ಭದ್ರತೆ ಹೆಚ್ಚಳ: ಬಜೆಟ್‌ನಲ್ಲಿ ರಕ್ಷಣಾ ವೆಚ್ಚವು ಸರ್ಕಾರದ ಒಟ್ಟು ವೆಚ್ಚದಲ್ಲಿ ಕನಿಷ್ಠ 25% ರಷ್ಟು ಇರಲಿದೆ ಎನ್ನಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಅನಿವಾರ್ಯವಾಗಿದೆ. ಪಾಕಿಸ್ತಾನದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸುತ್ತಿರುವುದು ಹೆಚ್ಚಿನ ವೆಚ್ಚವಾಗಿದೆ. ಚೀನಾದ ಬೆದರಿಕೆ ನಡುವೆ ಮೂಲಸೌಕರ್ಯ ಅಭಿವೃದ್ಧಿ, ಹೂಡಿಕೆಗಳು ಮತ್ತು ಹೊಸ ಉಪಕರಣಗಳ ತುರ್ತು ಖರೀದಿಗಳ ಅಗತ್ಯವಿದೆ. ಗಡಿಯ ಸಮೀಪವಿರುವ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ನಿರ್ಮಾಣಕ್ಕಾಗಿ ವಿಶೇಷ ಅನುದಾನವನ್ನು ನಿರೀಕ್ಷಿಸಲಾಗಿದೆ.
ಚೀನಾ ಭಾಗದಲ್ಲಿ ಅಭಿವೃದ್ಧಿ ಮತ್ತು ರಕ್ಷಣಾ ವೆಚ್ಚಕ್ಕಾಗಿ ನಿಗದಿ ಮಾಡಿರುವ 75 ಮಿಲಿಯನ್ ಡಾಲರ್ ಸದ್ಯಕ್ಕೆ ಸಾಕಾಗುವುದಿಲ್ಲ. 2024 ರ ಚೀನಾದ ರಕ್ಷಣಾ ಬಜೆಟ್ ಸುಮಾರು 231.4 ಬಿಲಿಯನ್ ಡಾಲರ್ ಆಗಿದೆ. ಚೀನಾಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆಯು ಕಡಿಮೆಯಿದ್ದರೂ, ರಕ್ಷಣಾ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಭಾರತ ಮುಂದಾಗಬೇಕಿದೆ.
ಕ್ರಿಸಿಲ್‌ನ ಪೂಶನ್ ಶರ್ಮಾ ಅವರ ಪ್ರಕಾರ, ಆತ್ಮನಿರ್ಭರ, ಮೇಕ್ ಇನ್ ಇಂಡಿಯಾದ ಕಲ್ಪನೆಯು ಬಜೆಟ್ನ ವ್ಯಾಪ್ತಿಯನ್ನು ಹೆಚ್ಚಿಸಿದೆ. 2022-23 ರಲ್ಲಿ ಶೇಕಡಾ 68 ರಿಂದ 2025 ರಲ್ಲಿ ಶೇಕಡಾ 75 ಕ್ಕೆ ರಕ್ಷಣಾ ವೆಚ್ಚ ಏರಿದೆ. ಇದರಲ್ಲಿ ಖಾಸಗಿ ವಲಯದಿಂದಲೇ ಶೇಕಡಾ 25ರಷ್ಟು ಉತ್ಪಾದನೆಯಾಗಿದೆ. 2024 ರಲ್ಲಿ ಭಾರತದ ರಕ್ಷಣಾ ಉತ್ಪಾದನೆಯು ₹1, 26,887 ಕೋಟಿಗೆ ತಲುಪಿದೆ. ಖಾಸಗಿ ವಲಯದ ಕಂಪನಿಗಳು 26,506 ಕೋಟಿ ರೂಪಾಯಿಯಷ್ಟು ಕೊಡುಗೆ ನೀಡಿವೆ. ಇದು ಒಟ್ಟು ಒಟ್ಟಾರೆ ಉತ್ಪಾದನೆಯ ಶೇಕಡಾ 21 ರಷ್ಟಿದೆ. 2028-29ರ ವೇಳೆಗೆ ₹3 ಲಕ್ಷ ಕೋಟಿ ತಲುಪುವ ಗುರಿ ಹೊಂದಲಾಗಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ರಕ್ಷಣಾ ಸಚಿವಾಲಯವು ರಕ್ಷಣಾ ಯೋಜನೆಗಳಿಗಾಗಿ 122 ಒಪ್ಪಂದಗಳಿಗೆ ಸಹಿ ಹಾಕಿದೆ. ಇವುಗಳಲ್ಲಿ 100 ಒಪ್ಪಂದಗಳು ಒಟ್ಟು ಮೌಲ್ಯದ ಶೇಕಡಾ 87ರಷ್ಟು ಭಾಗವನ್ನು ಹೊಂದಿದೆ.
ಆತ್ಮನಿರ್ಭರ್ ಯೋಜನೆಯ ಉತ್ಪಾದನೆ: 2022-2023ರಲ್ಲಿ ಉತ್ಪಾದನೆಯು ₹1.09 ಟ್ರಿಲಿಯನ್ ಇತ್ತು. 2023-24ರಲ್ಲಿ ಭಾರತದ ರಕ್ಷಣಾ ಉತ್ಪಾದನೆಯು ₹74,739 ಕೋಟಿ ಆಗಿತ್ತು. 2023-24ರಲ್ಲಿ ರಕ್ಷಣಾ ರಫ್ತು ದಾಖಲೆಯ ₹21,083 ಕೋಟಿ ತಲುಪಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2028-29 ರ ವೇಳೆಗೆ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆಯು ₹3 ಟ್ರಿಲಿಯನ್‌ಗೆ ತಲುಪುವ ನಿರೀಕ್ಷೆಯಿದೆ. ಮಿಲಿಟರಿ ಹಾರ್ಡ್‌ವೇರ್ ರಫ್ತು ₹50,000 ಕೋಟಿಗೆ ತಲುಪಬಹುದು ಎಂದು ಈ ವರ್ಷದ ಫೆಬ್ರವರಿಯಲ್ಲಿ ಹೇಳಿದ್ದರು.
ಅಗ್ನಿಪಥ್ ಯೋಜನೆಯು ಕಾಂಗ್ರೆಸ್, ಅದರ ಮಿತ್ರಪಕ್ಷಗಳು, ಬಿಜೆಪಿ ಮತ್ತು ಅದರ ಕೆಲ ಮಿತ್ರಪಕ್ಷಗಳು, ಕೆಲವು ಸೈನಿಕರಿಂದ ಸಾಕಷ್ಟು ಖಂಡನೆಗೆ ಒಳಗಾಗಿದೆ. ಪಿಂಚಣಿ ವೆಚ್ಚವನ್ನು ಕಡಿತ ಮಾಡಲು ಜಾರಿ ಮಾಡಲಾದ ಈ ಯೋಜನೆಯು ಚೀನಾ ಮತ್ತು ಪಾಕಿಸ್ತಾನದೊಂದಿಗಿನ ತಿಕ್ಕಾಟದಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಓಆರ್ಎಫ್ನ ಅಧ್ಯಯನದ ಪ್ರಕಾರ, "ಒಬ್ಬ ಅಗ್ನಿವೀರ್ ಯೋಧನ ನೇಮಕದಿಂದ ಪೂರ್ಣ ಸಮಯದಲ್ಲಿ ಸರ್ಕಾರಕ್ಕೆ ವಾರ್ಷಿಕ ₹1.75 ಲಕ್ಷ ಕಡಿಮೆ ವೆಚ್ಚವಾಗುತ್ತದೆ.
60 ಸಾವಿರ ಅಗ್ನಿವೀರ್‌ಗಳ ಬ್ಯಾಚ್‌ಗೆ ಸಂಬಳದ ಮೇಲಿನ ಒಟ್ಟು ಉಳಿತಾಯವು ₹1,054 ಕೋಟಿಗಳಷ್ಟಿರುತ್ತದೆ. 2022 ರಲ್ಲಿ ಈ ಯೋಜನೆಯ ಅನುಷ್ಠಾನದ ನಂತರ, ಅಗತ್ಯ ಬಂಡವಾಳ ವೆಚ್ಚದ ಹಂಚಿಕೆಯು ₹1.43 ಟ್ರಿಲಿಯನ್ ಅಂದರೆ 2022-23 ರಲ್ಲಿ ಒಟ್ಟು ಶೇಕಡಾ 24.9 ರಿಂದ ₹1.72 ಟ್ರಿಲಿಯನ್ ಅಂದರೆ 2024-25 ರಲ್ಲಿ ಶೇಕಡಾ 27.7 ಕ್ಕೆ ಏರಿತು. ಹೀಗಾಗಿ ಈ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಎಷ್ಟು ಬಜೆಟ್ ಮೀಸಲಿಡಲಾಗುತ್ತದೆ. 2047 ರ ವೇಳೆಗೆ ವಿಕಸಿತ ಭಾರತ ಕಲ್ಪನೆಗೆ ಹೇಗೆ ಇಂಬು ನೀಡಲಾಗುತ್ತದೆ ಎಂಬುದು ನಿರೀಕ್ಷೆಯ ಆಗರವಾಗಿದೆ.
ಇದನ್ನೂ ಓದಿ: ವಿಶ್ವವ್ಯಾಪಿಯಾಗಿರುವ ಅಮೆರಿಕದ ಡಾಲರ್ಗೆ ಬೇಕಿದೆ ಪೈಪೋಟಿ ನೀಡುವ ಇನ್ನೊಂದು ಕರೆನ್ಸಿ! - US dollar currency