ಬೆಂಗಳೂರು: ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಹಿರಿಯ ನಾಯಕರೇ ಬಂಡಾಯದ ಕಹಳೆ ಮೊಳಗಿಸುತ್ತಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಪ್ರಧಾನಿ ನರೇಂದ್ರ ಮೋದಿಯೇ ರಾಜ್ಯ ಪ್ರವಾಸಕ್ಕೆ ಬಂದಿದ್ದರೂ ರೆಬೆಲ್ ನಾಯಕರು ಅತ್ತ ಸುಳಿಯದೆ ಕೇಸರಿ ಪಾಳಯದೊಳಗೆ ಕೆಂಪು ಬಾವುಟ ಪ್ರದರ್ಶಿಸುತ್ತಿದ್ದಾರೆ. ಮನವೊಲಿಕೆಯಂತಹ ಪ್ರಯತ್ನಗಳು ವ್ಯರ್ಥವಾಗಿದ್ದು, ಬಿಜೆಪಿ ನಾಯಕರ ಕಂಗೆಡುವಂತೆ ಮಾಡಿದೆ.
ಹೌದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಯಕರೇ ಬಂಡಾಯ ಏಳುತ್ತಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಗಣನೀಯ ಕೊಡುಗೆ ನೀಡಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದಿದ್ದು, ಸಮಾಧಾನದಲ್ಲಿದ್ದ ಸದಾನಂದಗೌಡರು ರೆಬೆಲ್ ಆಗುತ್ತಿದ್ದಾರೆ. ಮಾಧುಸ್ವಾಮಿ ಮುನಿಸಿಕೊಂಡಿದ್ದು, ಬಿಎಸ್ವೈ ಮಾನಸಪುತ್ರ ರೇಣುಕಾಚಾರ್ಯ ಕ್ರೋಧ ವ್ಯಕ್ತಪಡಿಸಿದ್ದಾರೆ.
ಸಂಗಣ್ಣ ಕರಡಿ ಕಣ್ಣೀರು ಹಾಕುತ್ತಿದ್ದರೆ, ಪ್ರತಾಪ್ ಸಿಂಹ ಆಕ್ರೋಶವನ್ನು ಒಡಲಲ್ಲಿಟ್ಟುಕೊಂಡು ಮೌನವಾಗಿದ್ದಾರೆ. ಇನ್ನು ರೆಬೆಲ್ ನಾಯಕ ಎಂದೇ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್ವೈ ಕುಟುಂಬದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಮೊದಲ ಪಟ್ಟಿ ಬಿಡುಗಡೆ ನಂತರ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ಟಿಕೆಟ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಘೋಷಣೆಯಾಗುತ್ತಿದ್ದಂತೆ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಪುತ್ರನ ವಿರುದ್ಧ ಸ್ಪರ್ಧೆಯ ನಿರ್ಧಾರ ಪ್ರಕಟಿಸಿದ್ದಾರೆ.
ಸಂಘ ಪರಿವಾರ ಮಧ್ಯಪ್ರವೇಶ ಮಾಡದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರೇ ಈಶ್ವರಪ್ಪ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದರೂ ಫಲ ಸಿಕ್ಕಿಲ್ಲ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಖುದ್ದಾಗಿ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದರೂ ಸಂಧಾನಕ್ಕೆ ಒಪ್ಪದ ಈಶ್ವರಪ್ಪ ಬಂಡಾಯ ಸ್ಪರ್ಧೆಯ ನಿರ್ಧಾರ ಅಚಲ ಎಂದು ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದರೂ ಕಾರ್ಯಕ್ರಮದಿಂದ ದೂರ ಉಳಿದು ಪಕ್ಷೇತರರಾಗಿ ಕಣಕ್ಕಿಳಿಯುವ ನಿಲುವನ್ನು ಪುನರುಚ್ಚರಿಸಿದ್ದಾರೆ. ಅಲ್ಲದೇ ಹೈಕಮಾಂಡ್ ನಾಯಕರ ಭೇಟಿ ಮಾಡುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಹಾಗಾಗಿ ಆರ್ ಎಸ್ ಎಸ್. ಮಧ್ಯಪ್ರವೇಶದ ಹೊರತು ಈಶ್ವರಪ್ಪ ಸಂಧಾನ ಅಸಾಧ್ಯ ಎನ್ನುವಂತಾಗಿದೆ.
ಇನ್ನು ಇಷ್ಟು ದಿನ ಮೌನವಾಗಿದ್ದ ಮಾಜಿ ಸಿಎಂ ಡಿ ವಿ ಸದಾನಂದಗೌಡ ಇಂದು ರೆಬೆಲ್ ಆಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜೊತೆ ಸಭೆಗಳಲ್ಲಿ ಭಾಗಿಯಾಗಿ ಸಹಕಾರದ ಭರವಸೆ ನೀಡಿದ್ದ ಸದಾನಂದಗೌಡರು ಇಂದು ರೆಬೆಲ್ ಆ್ಯಕ್ಟಿವಿಟಿ ಶುರು ಮಾಡಿದ್ದಾರೆ. ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ನಾಳೆ ಸುದ್ದಿಗೋಷ್ಠಿ ಕರೆದು ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಈಶ್ವರಪ್ಪ ರೀತಿ ಬಂಡಾಯವಾಗಿ ಸ್ಪರ್ಧಿಸುವ ಇಲ್ಲವೇ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ನಿರ್ಧಾರ ಕೈಗೊಂಡರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಅರಿತ ನಾಯಕರು ಡಿವಿಎಸ್ ನಿವಾಸಕ್ಕೆ ದೌಡಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಳೆಯೇ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಮಾತನಾಡುವುದಾಗಿ ತಿಳಿಸಿ, ರಾಜ್ಯ ಬಿಜೆಪಿ ನಾಯಕರಿಗೆ ನಿರಾಶೆ ಮೂಡಿಸಿ ಬಂಡಾಯದ ಬಾವುಟ ಪ್ರದರ್ಶನ ಮಾಡಿದ್ದಾರೆ.
ಮಾಧುಸ್ವಾಮಿ ಮುನಿಸು: ಇನ್ನು ತುಮಕೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಜೆ ಸಿ ಮಾಧುಸ್ವಾಮಿ ಟಿಕೆಟ್ ಕೈತಪ್ಪಿರುವುದಕ್ಕೆ ಮುನಿಸಿಕೊಂಡಿದ್ದಾರೆ. ರಾಜ್ಯಸಭಾ ಟಿಕೆಟ್ ಕೇಳಿದ್ದ ಸೋಮಣ್ಣಗೆ ಲೋಕಸಭಾ ಟಿಕೆಟ್ ಕೊಡಲಾಗಿದೆ. ಹೊರಗಿನವರಿಗೆ ಇಲ್ಲಿ ಟಿಕೆಟ್ ಕೊಡುವ ಅಗತ್ಯ ಏನಿತ್ತು. ಅವರ ಸೋತಂತೆ ನಾನೂ ಸೋತಿಲ್ಲವೇ? ಇಲ್ಲಿನ ಸ್ಥಳೀಯ ನಾವೇನು ಮಾಡಬೇಕು ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದೇ ಮೊದಲ ಬಾರಿಗೆ ಯಡಿಯೂರಪ್ಪ ವಿರುದ್ಧವೇ ಬೇಸರ ವ್ಯಕ್ತಪಡಿಸಿದ್ದು, ಟಿಕೆಟ್ ಭರವಸೆ ನೀಡಿ ಕಡೆಗೆ ಕೈಚಲ್ಲಿದ್ದಾರೆ.
ಶೋಭಾ ಕರಂದ್ಲಾಜೆಗೆ ಟಿಕೆಟ್ ಕೇಳಿದಂತೆ ನಮ್ಮ ವಿಚಾರದಲ್ಲಿ ಯಾಕೆ ಮಾಡಲಿಲ್ಲ ಎನ್ನುವ ಅಸಮಧಾನ ಹೊರಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಮಣ್ಣ ಜೊತೆ ಮಾತುಕತೆ ನಡೆಸಲು ನಿರಾಕರಿಸಿರುವ ಮಾಧುಸ್ವಾಮಿ ತಮ್ಮ ಹಿತೈಷಿಗಳ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಇದು ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ತರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ರೇಣುಕಾಚಾರ್ಯ ಕೆಂಡ: ದಾವಣಗೆರೆ ಕ್ಷೇತ್ರದಲ್ಲಿ ಜಿ ಎಂ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದಕ್ಕೆ ಯಡಿಯೂರಪ್ಪ ಮಾನಸ ಪುತ್ರ ರೇಣುಕಾಚಾರ್ಯ ಆಕ್ರೋಶಗೊಂಡಿದ್ದಾರೆ. ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ ಎನ್ನುವ ಘೋಷಣೆ ಮಾಡಿದ್ದಾರೆ. ಖುದ್ದಾಗಿ ಯಡಿಯೂರಪ್ಪ ದೂರವಾಣಿ ಕರೆ ಮಾಡಿದರೂ ಸಮಾಧಾನವಾಗದ ರೇಣುಕಾಚಾರ್ಯ ಸಿದ್ದೇಶ್ವರ ಕುಟುಂಬದ ಪರ ನಾವು ನಿಲ್ಲಲ್ಲ ಎನ್ನುವ ಸ್ಪಷ್ಟನೆ ನೀಡಿದ್ದಾರೆ. ಇದರಿಂದಾಗಿ ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆಯಲ್ಲಿ ಈ ಬಾರಿ ಬಣ ರಾಜಕೀಯ ಬಿಜೆಪಿಗೆ ಹಿನ್ನಡೆ ತರುವ ಸಾಧ್ಯತೆ ಸೃಷ್ಟಿಸಿದೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೇಲೆ ಕಣ್ಣೀಟ್ಟಿದ್ದ ಸಿಟಿ ರವಿ ಟಿಕೆಟ್ ಸಿಗದೆ ಅಸಮಧಾನಗೊಂಡಿದ್ದರೂ ಶೋಭಾ ಕರಂದ್ಲಾಜೆ ಅವರನ್ನು ಕ್ಷೇತ್ರದಿಂದ ಹೊರ ಕಳುಹಿಸುವಲ್ಲಿ ಸಫಲವಾಗಿದ್ದಕ್ಕೆ ಸಮಾಧಾನಿತರಾಗಿದ್ದರೆ. ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ವಿರೋಧಿಸಲು ಯಾವ ಕಾರಣವೂ ಇಲ್ಲ. ಹಾಗಾಗಿ ತಮಗೆ ಟಿಕೆಟ್ ಸಿಗದಿದ್ದರೂ ಅಭ್ಯರ್ಥಿ ಪರ ಕೆಲಸ ಮಾಡಬೇಕಾದ ಅನಿವಾರ್ಯತೆ ಸಿಟಿ ರವಿ ಅವರಿಗೆ ಎದುರಾಗಿದೆ.
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಿಚಾರವೂ ಇದಕ್ಕಿಂತ ಭಿನ್ನವಾಗಿಲ್ಲ. ಎರಡು ಬಾರಿ ಸಂಸದರಾಗಿ ಮೂರನೇ ಬಾರಿ ಟಿಕೆಟ್ ನಿರೀಕ್ಷೆಯಿಲ್ಲದ ಪ್ರತಾಪ್ ಸಿಂಹ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡಿದ್ದರೂ ಮೋದಿ ವಿರುದ್ಧ ಮಾತನಾಡುವ, ನಿಲುವು ತಳೆಯುವ ಧೈರ್ಯ ಮಾಡುತ್ತಿಲ್ಲ. ಬೇಸರ, ಅಸಮಾಧಾನದ ನಡುವೆಯೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿರುವುದು ಬಿಜೆಪಿಗೆ ಸ್ಪಲ್ಪ ಸಮಾಧಾನ ತರುವಂತೆ ಮಾಡಿದೆ.
ಇನ್ನು ಕೊಪ್ಪಳದಲ್ಲಿ ಕರಡಿ ಸಂಗಣ್ಣ ಟಿಕೆಟ್ ಕೈತಪ್ಪಿದ್ದಕ್ಕೆ ಬಹಿರಂಗವಾಗಿ ರಾಜ್ಯ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಟಿಕೆಟ್ ನೀಡುವುದಿಲ್ಲ ಎನ್ನುವುದನ್ನು ಮೊದಲೇ ಹೇಳಲಿಲ್ಲ. ಸೌಜನ್ಯಕ್ಕಾದರೂ ಯಾರೊಬ್ಬ ನಾಯಕರೂ ಟಿಕೆಟ್ ಕೈತಪ್ಪಿದ ಕುರಿತು ಮಾತನಾಡಲಿಲ್ಲ.ಸಮಾಧಾನ ಪಡಿಸಲಿಲ್ಲ. ಕಾರಣವನ್ನು ತಿಳಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕೋ ಬೇಡವೋ ನಿರ್ಧಾರ ಮಾಡಬೇಕು ಎನ್ನುವ ನಿಲುವು ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರಿಗೆ ಬಂಡಾಯದ ಬಿಸಿ ತಟ್ಟುವಂತೆ ಮಾಡಿದ್ದಾರೆ. ಸದ್ಯ ಇನ್ನು ಕರಡಿ ಸಂಗಣ್ಣ ಅಸಮಾಧಾನಿತರಾಗಿದ್ದು, ಎಲ್ಲ ನಾಯಕರ ಜೊತೆ ರಾಜ್ಯ ನಾಯಕರು ಮೋದಿ ಪ್ರವಾಸದ ನಂತರ ಸಂಪರ್ಕ ಮಾಡಿ ಮನವೊಲಿಕೆ ಮಾಡುವ ಪ್ರಯತ್ನ ಮಾಡಲಿದ್ದಾರೆ. ಆದರೆ, ಇದರಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ.ಈ ಬಾರಿ ಬಿಜೆಪಿಗೆ ರೆಬೆಲ್ಗಳೇ ಡ್ಯಾಮೇಜ್ ಮಾಡುತ್ತಾರಾ ಕಾದು ನೋಡಬೇಕಿದೆ.
ಇದನ್ನೂಓದಿ:ಲೋಕಸಭೆ ಮೇಲೆ ರಾಜ್ಯಸಭಾ ಚುನಾವಣೆ ಫಲಿತಾಂಶದ ಛಾಯೆ: ಅಪಾಯಕ್ಕೆ ಸಿಲುಕಲಿವೆಯೇ ಪ್ರತಿಪಕ್ಷಗಳು?