ETV Bharat / opinion

ಇರಾನ್-ಇಸ್ರೇಲ್ ಸಂಘರ್ಷ: ಶಾಂತಿಯ ಆರಂಭವಾ? ಸುನಾಮಿ ಬರುವ ಮುಂಚಿನ ಸಮುದ್ರದ ಶಾಂತತೆಯಾ? - Iran Israel Conflict

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

Iran-Israel conflict
Iran-Israel conflict
author img

By ETV Bharat Karnataka Team

Published : Apr 15, 2024, 7:49 PM IST

ಡಮಾಸ್ಕಸ್​ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಕಾಂಪೌಂಡ್ ಮೇಲೆ ಇಸ್ರೇಲ್ ದಾಳಿ ನಡೆಸಿ ಕುಡ್ಸ್ ಪಡೆಯ ಕಮಾಂಡರ್ ಸೇರಿದಂತೆ ಏಳು ಮಿಲಿಟರಿ ಸಿಬ್ಬಂದಿಯನ್ನು ಕೊಂದ ಸುಮಾರು ಎರಡು ವಾರಗಳ ನಂತರ ಟೆಹ್ರಾನ್ ಪ್ರತೀಕಾರ ತೀರಿಸಿಕೊಂಡಿದೆ. ಇದಕ್ಕಾಗಿ ಅದು ತನ್ನ ಪರವಾಗಿ ಹೋರಾಡುವ 'ಛಾಯಾ' ಸಂಘಟನೆಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ತನ್ನ ನೆಲದಿಂದಲೇ ಇಸ್ರೇಲ್ ಮೇಲೆ ವೈಮಾನಿಕ ದಾಳಿ ನಡೆಸಿರುವುದು ಗಮನಾರ್ಹ.

ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ ಕ್ರಮಕ್ಕೆ ಪ್ರತಿಯಾಗಿ ನಾವು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ ಎಂದು ಇರಾನಿನ ವಕ್ತಾರರು ಹೇಳಿದ್ದಾರೆ. ಆಕ್ರಮಿತ ಇಸ್ರೇಲ್ ಪ್ರದೇಶಗಳಲ್ಲಿನ ನಿರ್ದಿಷ್ಟ ಗುರಿಗಳನ್ನು ಹೊಡೆಯಲು ಕ್ಷಿಪಣಿಗಳು ಮತ್ತು ಡ್ರೋನ್​ಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಇರಾನ್ ಹೇಳಿದೆ.

ಇರಾನ್ ಉಡಾವಣೆ ಮಾಡಿದ ಎಲ್ಲಾ 185 ಡ್ರೋನ್​​ಗಳು ಮತ್ತು 35 ಕ್ರೂಸ್ ಕ್ಷಿಪಣಿಗಳು ಹಾರಾಟದ ಮಧ್ಯದಲ್ಲೇ ನಾಶವಾಗಿವೆ ಹಾಗೂ ಇನ್ನುಳಿದ 110 ಕ್ಷಿಪಣಿಗಳ ಪೈಕಿ 103 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಯುಎಸ್, ಯುಕೆ, ಫ್ರಾನ್ಸ್, ಜೋರ್ಡಾನ್ ಮತ್ತು ಇಸ್ರೇಲ್​ನ ಸಂಘಟಿತ ಕ್ರಮಗಳ ಮೂಲಕ ಇರಾನ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಕೆಲ ಕ್ಷಿಪಣಿಗಳು ನೆವಾಟಿಮ್ ವಾಯುನೆಲೆಯ ಮೇಲೆ ಬಿದ್ದರೂ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಇಸ್ರೇಲ್ ರಕ್ಷಣಾ ವಕ್ತಾರರು ಹೇಳಿದ್ದಾರೆ. ಕ್ಷಿಪಣಿ ದಾಳಿಯ ನಂತರವೂ ವಾಯುನೆಲೆಯಿಂದ ವಿಮಾನ ಹಾರಾಟ ನಡೆಯುತ್ತಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದೆ.

ಇಸ್ರೇಲ್ ಮೇಲೆ ದಾಳಿ ನಡೆಸಲು ಇರಾನ್ ತೀವ್ರ ಒತ್ತಡದಲ್ಲಿತ್ತು. ಅಲ್ಲದೆ ಇರಾನ್ ದಾಳಿ ನಡೆಸಲಿದೆ ಎಂಬುದು ಯುಎಸ್ ಮತ್ತು ಇಸ್ರೇಲ್​ಗೆ ಖಚಿತವಾಗಿಯೇ ಗೊತ್ತಿತ್ತು. ಈ ಬಗ್ಗೆ ಮಾತನಾಡಿದ್ದ ಅಧ್ಯಕ್ಷ ಬೈಡನ್, "ನಾನು ತೀರಾ ಆಂತರಿಕ ಮಾಹಿತಿಯ ಬಗ್ಗೆ ಹೇಳಲು ಇಷ್ಟ ಪಡಲ್ಲ, ಆದರೆ ಶೀಘ್ರದಲ್ಲೇ ಇರಾನ್ ದಾಳಿ ಮಾಡಲಿದೆ" ಎಂದು ಹೇಳಿದ್ದರು. ಇರಾನ್​ನ ಉನ್ನತ ಅಧಿಕಾರಿಗಳು ಅನುಮೋದನೆ ನೀಡಲು ತಡ ಮಾಡಿದ್ದರಿಂದ ದಾಳಿ ಒಂದು ದಿನ ವಿಳಂಬವಾಗಿದೆ ಎಂದು ಇಸ್ರೇಲ್ ಹೇಳಿದೆ. "ಇರಾನ್ ವೈಮಾನಿಕ ದಾಳಿ ನಮಗೆ ಆಶ್ಚರ್ಯ ತರಲಿಲ್ಲ. ನಾವು ದಾಳಿಯನ್ನು ಹಿಮ್ಮೆಟ್ಟಿಸಿದ್ದೇವೆ. ಒಟ್ಟಾಗಿ ನಾವು ಗೆಲ್ಲುತ್ತೇವೆ" ಎಂದು ನೆತನ್ಯಾಹು ಟ್ವೀಟ್ ಮಾಡಿದ್ದಾರೆ.

ಇರಾನ್​ ದಾಳಿ ಮಾಡುವ ಬಗ್ಗೆ ಗುಪ್ತಚರ ಮಾಹಿತಿಯಿಂದ ವಾಷಿಂಗ್ಟನ್ ಮತ್ತು ಇಸ್ರೇಲ್​ಗೆ ತಿಳಿದಿತ್ತಾ? ಅಥವಾ ಇರಾನ್ ತಾನಾಗಿಯೇ ಈ ಮಾಹಿತಿಯನ್ನು ಲೀಕ್ ಮಾಡಿತ್ತಾ ಎಂಬ ಬಗ್ಗೆ ಖಚಿತತೆಯಿಲ್ಲ. ಈ ವರ್ಷದ ಜನವರಿಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಇದೇ ಮಾದರಿಯನ್ನು ಅನುಸರಿಸಿತ್ತು. ಆಗ ಇರಾನ್ ಮೊದಲಿಗೆ ದಾಳಿ ಮಾಡಿತ್ತು. ನಂತರ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡಿತು. ಇದರ ನಂತರ ರಾಜತಾಂತ್ರಿಕ ಮಾತುಕತೆಗಳ ಮೂಲಕ ಎರಡೂ ದೇಶಗಳ ಮಧ್ಯದ ಉದ್ವಿಗ್ನತೆಯನ್ನು ಶಮನಗೊಳಿಸಿ ಸಾಮಾನ್ಯ ಸ್ಥಿತಿಯನ್ನು ಪುನಃ ಸ್ಥಾಪಿಸಲಾಯಿತು. ಎರಡೂ ರಾಷ್ಟ್ರಗಳು ಪರಸ್ಪರ ದಾಳಿ ಮಾಡಿದಾಗ ತಮ್ಮದೇ ದೇಶದ ನಾಗರಿಕರನ್ನು ಕೊಂದವೇ ಹೊರತು ಬೇರೆ ದೇಶದ ನಾಗರಿಕರಿಗೆ ಹಾನಿ ಮಾಡಲಿಲ್ಲ.

ಈ ಪ್ರದೇಶದಲ್ಲಿ ಸಂಘರ್ಷ ಉಲ್ಬಣಿಸದಂತೆ ತಡೆಗಟ್ಟಲು ಇಸ್ರೇಲ್​ನ ನೆರೆಹೊರೆಯ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ತಮ್ಮ ದೇಶಗಳಲ್ಲಿನ ನೆಲೆಗಳಿಂದ ಅಮೆರಿಕವು ಇರಾನ್ ಮೇಲೆ ದಾಳಿ ಮಾಡದಂತೆ ಸೌದಿ ಅರೇಬಿಯಾ, ಯುಎಇ, ಒಮಾನ್ ಮತ್ತು ಕುವೈತ್ ಮತ್ತು ಕತಾರ್ ನಿರ್ಬಂಧಿಸಿವೆ.

ಇರಾನ್​ ತನ್ನ ದಾಳಿ ಮುಗಿದ ತಕ್ಷಣವೇ 'ಈ ವಿಷಯ ಈಗ ಮುಗಿದು ಹೋಗಿದೆ (ಡಮಾಸ್ಕಸ್ ದಾಳಿಗೆ ಪ್ರತೀಕಾರ)' ಎಂದು ಘೋಷಿಸಿತು. ಆದರೆ ಇಸ್ರೇಲ್ ಏನಾದರೂ ಪ್ರತಿದಾಳಿ ಮಾಡಿದರೆ ಇರಾನ್ ಇನ್ನಷ್ಟು ತೀವ್ರವಾಗಿ ಪ್ರತಿಕ್ರಿಯಿಸಲಿದೆ ಎಂದು ಹೇಳಿತು. ಅಲ್ಲದೆ ಇದು ತನ್ನ ಮತ್ತು ಇಸ್ರೇಲ್ ನಡುವಿನ ವಿವಾದವಾಗಿದ್ದು ಅಮೆರಿಕ ಇದರಿಂದ ದೂರವಿರಬೇಕೆಂದು ಅದು ಎಚ್ಚರಿಕೆ ನೀಡಿತು.

ಈ ದಾಳಿಯು ಇರಾನ್​ನ ಪರಮಾಣು ಸ್ಥಾವರಗಳ ಮೇಲೆ ನೇರವಾಗಿ ದಾಳಿ ಆರಂಭಿಸಲು ಇಸ್ರೇಲ್​ಗೆ ಒಂದು ಅವಕಾಶ ನೀಡಿದಂತಾಗಿದೆ. ಇಂಥದೊಂದು ದಾಳಿ ನಡೆಸಲು ಬಹಳ ದೀರ್ಘ ಕಾಲದಿಂದ ಇಸ್ರೇಲ್ ಬಯಸುತ್ತಿದೆಯಾದರೂ ವಾಯುಪ್ರದೇಶ ನಿರ್ಬಂಧಗಳು ಮತ್ತು ಯುಎಸ್ ಸಹಾಯ ಮಾಡಲು ಒಪ್ಪದ ಕಾರಣದಿಂದ ಇದು ಸಾಧ್ಯವಾಗಿಲ್ಲ. ಆದರೆ ಇಸ್ರೇಲ್​ನ ಇಂಥ ಯಾವುದೇ ಕ್ರಮದಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಸ್ಥಿತಿ ಉಲ್ಬಣಿಸಲಿದೆ.

ಇರಾನಿನ ಪ್ರತಿಕ್ರಿಯೆಯನ್ನು ಬಾಲಾಕೋಟ್ ದಾಳಿಗೆ ಹೋಲಿಸಬಹುದು. ಭಾರತವು ಬಾಲಾಕೋಟ್ ಮೇಲೆ ದಾಳಿ ನಡೆಸಿ ಪಾಕಿಸ್ತಾನವು ತನ್ನ ಮುಖ ಉಳಿಸಿಕೊಳ್ಳುವಂತೆ ಒತ್ತಡ ಹೇರಿತು. ಇದಕ್ಕೆ ಪ್ರತೀಕಾರವಾಗಿ ಅದು ಭಾರತದ ನೆಲದಲ್ಲಿ ಹುಸಿ ಬಾಂಬ್ ಗಳನ್ನು ಎಸೆದು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು. ಆದರೆ ಇದರ ನಂತರ ಭಾರತ ಮೌನವಾಗಿ ಉಳಿದಿದ್ದರಿಂದ ತಾನು ವಿಜಯ ಸಾಧಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತು. ಆದಾಗ್ಯೂ ಪಾಕಿಸ್ತಾನದ ಹೃದಯಭಾಗಕ್ಕೇ ಏಟು ಕೊಟ್ಟ ಭಾರತ ಕಠಿಣ ಸಂದೇಶ ರವಾನಿಸಿತು. ಇರಾನ್ ದಾಳಿಯನ್ನು ಸಂಭ್ರಮಿಸುತ್ತಿರುವ ಅರಬ್ ದೇಶಗಳ ಜನರ ಮನಸ್ಥಿತಿಯೂ ಹೀಗೆಯೇ ಇದೆ.

ಈಗ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿರುವುದರಿಂದ ಯುಎಸ್ ಕಾಂಗ್ರೆಸ್ ಇನ್ನು ಮುಂದೆ ಇಸ್ರೇಲ್​ಗೆ ಶಸ್ತ್ರಾಸ್ತ್ರ ನೀಡುವುದನ್ನು ತಡೆಯಲು ಸಾಧ್ಯವಿಲ್ಲ. ಈ ಮಟ್ಟಿಗೆ ನೆತನ್ಯಾಹು ಅವರಿಗೆ ಬಹುದೊಡ್ಡ ಲಾಭವಾಗಿದೆ. ಇಸ್ರೇಲ್​ಗೆ ಯುರೋಪ್ ಬೆಂಬಲ ನೀಡಿದ್ದು, ಇರಾನ್​ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ. ಅದೇ ಸಮಯಕ್ಕೆ ಇಸ್ರೇಲ್ ಇರಾನ್ ಮೇಲೆ ಪ್ರತಿದಾಳಿ ಮಾಡದಂತೆ ಒತ್ತಡದಲ್ಲಿದೆ. ಬೈಡನ್ ಆಡಳಿತವು ಇಸ್ರೇಲ್​ನ ಸುರಕ್ಷತೆಯನ್ನು ಕಾಪಾಡಲು ಬದ್ಧನಾಗಿರುವುದಾಗಿ ಹೇಳಿದ್ದರೂ ಇರಾನ್ ಮೇಲಿನ ಯಾವುದೇ ದಾಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಘರ್ಷ ಇರುವವರೆಗೆ ಮಾತ್ರ ತಮ್ಮ ಸರ್ಕಾರ ಅಧಿಕಾರದಲ್ಲಿರಬಹುದು ಎಂಬುದು ನೆತನ್ಯಾಹು ಅವರಿಗೆ ತಿಳಿದಿದೆ. ನೆತನ್ಯಾಹು ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದೆ. ಆದರೆ ಇರಾನ್​ ಜೊತೆಗಿನ ಸಂಘರ್ಷ ಉಲ್ಬಣಿಸಿ ಅಧಿಕಾರ ಉಳಿಸಿಕೊಳ್ಳುವಂತೆ ಕೆಲ ಸಲಹೆಗಾರರು ನೆತನ್ಯಾಹು ಅವರಿಗೆ ಸಲಹೆ ನೀಡುತ್ತಿದ್ದಾರೆ. ಟೆಲ್ ಅವೀವ್ ಪ್ರತೀಕಾರ ತೀರಿಸಿಕೊಳ್ಳದಿದ್ದರೆ, ಇಸ್ರೇಲ್ ಮೇಲೆ ದಾಳಿ ನಡೆಸಿ ಅದನ್ನು ಮೌನಕ್ಕೆ ತಳ್ಳಿದ ಏಕೈಕ ಅರಬ್ ರಾಷ್ಟ್ರ ಎಂದು ಇರಾನ್ ಹೆಮ್ಮೆಪಡುತ್ತದೆ. ಆದರೆ ಪ್ರತೀಕಾರವನ್ನು ಇಸ್ರೇಲ್ ತಳ್ಳಿಹಾಕಿಲ್ಲ, ಸರಿಯಾದ ಸಮಯ ಬಂದಾಗ ಪ್ರತಿದಾಳಿ ನಡೆಸುವುದಾಗಿ ಹೇಳಿದೆ.

ಸದ್ಯ ಇಸ್ರೇಲ್​ನ ಆದ್ಯತೆಗಳ ಬಗ್ಗೆ ನೆತನ್ಯಾಹು ಸ್ಪಷ್ಟವಾಗಿರಬೇಕಾಗುತ್ತದೆ. ಒಂದೋ ಇಸ್ರೇಲ್ ಗಾಜಾದತ್ತ ಗಮನ ಹರಿಸಬೇಕು ಮತ್ತು ತನ್ನ ಸೆರೆಯಾಳುಗಳನ್ನು ಬಿಡುಗಡೆ ಮಾಡಿಸಿಕೊಳ್ಳಬೇಕು ಅಥವಾ ಇರಾನ್​ನೊಂದಿಗೆ ಸಂಘರ್ಷ ಹೆಚ್ಚಿಸಬೇಕು. ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಬಹುದು ಮತ್ತು ಅನಿವಾರ್ಯವಾಗಿ ಅಮೆರಿಕ ಇದರಲ್ಲಿ ಭಾಗಿಯಾಗುವಂತೆ ಮಾಡಬಹುದು.

ಎರಡೂ ದೇಶಗಳು ಸಂಯಮದಿಂದ ವರ್ತಿಸುವಂತೆ ಭಾರತ ಕರೆ ನೀಡಿದೆ. "ಉದ್ವಿಗ್ನತೆಯನ್ನು ತಕ್ಷಣವೇ ಕಡಿಮೆ ಮಾಡಲು, ಸಂಯಮ ಕಾಪಾಡಿಕೊಳ್ಳಲು, ಹಿಂಸಾಚಾರದಿಂದ ಹಿಂದೆ ಸರಿಯಲು ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಕರೆ ನೀಡುತ್ತೇವೆ" ಎಂದು ಭಾರತದ ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಜೈಶಂಕರ್ ಅವರು ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳ ವಿದೇಶಾಂಗ ಸಚಿವರೊಂದಿಗೆ ಮಾತನಾಡಿ ಸಂಯಮದಿಂದ ವರ್ತಿಸಲು ಮನವಿ ಮಾಡಿದರು. ಕತಾರ್, ಪಾಕಿಸ್ತಾನ, ವೆನೆಜುವೆಲಾ ಮತ್ತು ಚೀನಾ ಕೂಡ ಶಾಂತಿಗೆ ಕರೆ ನೀಡಿವೆ. ಆದರೆ ಈ ರಾಷ್ಟ್ರಗಳು ಇರಾನ್​ ಕ್ರಮವನ್ನು ಖಂಡಿಸಿಲ್ಲ.

ಯುರೋಪಿಯನ್ ಒಕ್ಕೂಟ, ಬ್ರಿಟನ್, ಫ್ರಾನ್ಸ್, ಮೆಕ್ಸಿಕೊ, ಜೆಕ್ ಗಣರಾಜ್ಯ, ಡೆನ್ಮಾರ್ಕ್, ನಾರ್ವೆ ಮತ್ತು ನೆದರ್ಲ್ಯಾಂಡ್ಸ್ ಇರಾನ್ ದಾಳಿಯನ್ನು ಖಂಡಿಸಿವೆ. ಇರಾನ್ ಮತ್ತು ಅದರ ಛಾಯಾ ಸಂಘಟನೆಗಳು ತಮ್ಮ ದಾಳಿಯನ್ನು ನಿಲ್ಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಜಿ 7 ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ಯುಎನ್ಎಸ್​ಸಿ ತುರ್ತು ಸಭೆ ನಡೆಸಲಾಯಿತು. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡುವುದರ ಹೊರತಾಗಿ ಯಾವುದೇ ಸ್ಪಷ್ಟ ಸಂದೇಶ ಈ ಸಭೆಯಲ್ಲಿ ಹೊರಹೊಮ್ಮಲಿಲ್ಲ. ಇರಾನ್ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡರೆ, ಪಶ್ಚಿಮ ದೇಶಗಳು ಮತ್ತು ಇಸ್ರೇಲ್ ದೇಶಗಳು ಇರಾನ್​ ಅನ್ನು ದೂಷಿಸಿವೆ. ರಷ್ಯಾ ಮತ್ತು ಚೀನಾ ಯುಎನ್ಎಸ್​ಸಿ ಯಲ್ಲಿ ಇರುವುದರಿಂದ ಇರಾನ್ ವಿರುದ್ಧ ಯಾವುದೇ ನಿರ್ಣಯ ಮಂಡನೆ ಸಾಧ್ಯವಿಲ್ಲ. ಇರಾನ್​ನ ರಾಜತಾಂತ್ರಿಕ ಕಾಂಪೌಂಡ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಕೂಡ ಯುಎನ್ಎಸ್​ಸಿ ಖಂಡಿಸಲಿಲ್ಲ.

ಇರಾನ್-ಪಾಕಿಸ್ತಾನ ಪೈಪ್ ಲೈನ್​ಗೆ ಸಹಾಯ ಕೋರಿದ್ದ ಪಾಕಿಸ್ತಾನಕ್ಕೆ ಇನ್ನು ಮುಂದೆ ಅದು ಸಿಗಲಾರದು. ಸೆಪ್ಟೆಂಬರ್ 2024 ರೊಳಗೆ ಪೈಪ್ ಲೈನ್ ಪೂರ್ಣಗೊಳ್ಳದಿದ್ದರೆ, ಪಾಕಿಸ್ತಾನ 18 ಬಿಲಿಯನ್ ಡಾಲರ್ ದಂಡ ಪಾವತಿಸಬೇಕಾಗುತ್ತದೆ.

ಏತನ್ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಮಾತುಕತೆಗಳು ಮತ್ತೆ ಸ್ಥಗಿತಗೊಂಡಿವೆ. ಇಸ್ರೇಲ್​ಗೆ ಏಳು ತಿಂಗಳ ಸುದೀರ್ಘ ಸಂಘರ್ಷವನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. 17 ಭಾರತೀಯರೊಂದಿಗೆ ಭಾರತಕ್ಕೆ ತೆರಳುತ್ತಿದ್ದ ಇಸ್ರೇಲ್ ಸಂಬಂಧಿತ ಹಡಗನ್ನು ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಬಳಿ ವಶಪಡಿಸಿಕೊಂಡಿದೆ. ಇದರಲ್ಲಿನ ಭಾರತೀಯ ಸಿಬ್ಬಂದಿಯ ಬಿಡುಗಡೆಗಾಗಿ ಮಾತುಕತೆ ನಡೆಯುತ್ತಿವೆ.

ಇರಾನ್ ಮತ್ತು ಇಸ್ರೇಲ್ ಎರಡೂ ವಾಣಿಜ್ಯ ವಿಮಾನ ಹಾರಾಟಕ್ಕೆ ತಮ್ಮ ವಾಯುಪ್ರದೇಶವನ್ನು ಮತ್ತೆ ತೆರೆದಿರುವುದರಿಂದ ಉದ್ವಿಗ್ನತೆಯು ಶಮನವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಇದು ನಿಜವಾಗಿಯೂ ಶಾಂತಿಯ ಆರಂಭವಾ ಅಥವಾ ಸುನಾಮಿ ಬರುವ ಮುಂಚಿನ ಸಮುದ್ರದ ಶಾಂತತೆಯಾ ಎಂಬುದು ಗೊತ್ತಿಲ್ಲ.

ಲೇಖನ : ಹರ್ಷ ಕಾಕರ್, ಮೇಜರ್ ಜನರಲ್ (ನಿವೃತ್ತ)

ಇದನ್ನೂ ಓದಿ : ಭಾರತ-ಚೀನಾ ಗಡಿ ಬಿಕ್ಕಟ್ಟು ಆರಂಭವಾಗಿದ್ದು ಹೇಗೆ? ಈಗ ಯಾವ ಹಂತದಲ್ಲಿದೆ? - India China Border Dispute

ETV Bharat Logo

Copyright © 2024 Ushodaya Enterprises Pvt. Ltd., All Rights Reserved.