ಹೈದರಾಬಾದ್: ತಂತ್ರಜ್ಞಾನ ಬೆಳೆದಷ್ಟು ಅಪರಾಧ ಜಗತ್ತು ಕೂಡ ವಿಸ್ತಾರ ಪಡೆಯುತ್ತಿದೆ. ನಮ್ಮ ಯಾವುದೇ ವೈಯಕ್ತಿಕ ಮಾಹಿತಿಯು ಇಂದು ಗೌಪ್ಯವಾಗಿ ಉಳಿದಿಲ್ಲ. ಸೈಬರ್ ಕಳ್ಳರು ನಮ್ಮೆಲ್ಲಾ ಮಾಹಿತಿಯನ್ನು ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ನಿತ್ಯವೂ ನಡೆಯುತ್ತಿರುತ್ತವೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದಾಗ್ಯೂ ಕೆಲವರು ಮೋಸದ ಜಾಲಕ್ಕೆ ಬೀಳುವುದು ತಪ್ಪಿಲ್ಲ.
ಆನ್ಲೈನ್ ವ್ಯಾಪಾರ ವಹಿವಾಟುಗಳಿಂದ ನಮ್ಮ ಮಾಹಿತಿಯು ಸೈಬರ್ ಕಳ್ಳರಿಗೆ ಸಲೀಸಾಗಿ ಸಿಗುತ್ತಿದೆ. ಇದನ್ನೇ ಬಳಸಿಕೊಂಡು ಅಸಂಖ್ಯಾತ ಗ್ರಾಹಕರ ಹೆಸರು, ವಿಳಾಸ, ಫೋನ್ ಸಂಖ್ಯೆ, ಮತ್ತು ಕ್ರೆಡಿಟ್ ಕಾರ್ಡ್ ವಿವರದಂತಹ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದರ ಪರಿಣಾಮ ಜನರು ಹಣಕಾಸಿನ ವಂಚನೆಯ ಜಾಲಕ್ಕೆ ಸಿಲುಕುವಂತಾಗಿದೆ.
ಚಿಲ್ಲರೆ ವ್ಯಾಪಾರಿಗಳ ಭದ್ರತಾ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನೇ ಬಳಸಿಕೊಳ್ಳುವ ಸೈಬರ್ ಕಳ್ಳರು, ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಗ್ರಾಹಕರ ಮಾಹಿತಿಯನ್ನು ರಕ್ಷಿಸುವ ಎನ್‌ಕ್ರಿಪ್ಶನ್ ಮತ್ತು ಫೈರ್‌ವಾಲ್ ತಂತ್ರಜ್ಞಾನವನ್ನೂ ಹ್ಯಾಕರ್‌ಗಳು ಬೇಧಿಸಿ ಅಲ್ಲಿನ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. ಇದರಿಂದ ಸೈಬರ್ ವಂಚನೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಗ್ರಾಹಕರ ಮಾಹಿತಿಯನ್ನು ಕದ್ದು ಅನಧಿಕೃತ ವಹಿವಾಟು, ಸಾಲಗಳಿಗೆ ಅರ್ಜಿ ಸಲ್ಲಿಸಲು, ಸೈಬರ್ ಬೇಹುಗಾರಿಕೆಗೆ ಬಳಸಲಾಗುತ್ತಿದೆ. ಸೈಬರ್ ವಂಚನೆಗೆ ಬಲಿಯಾಗುವ ಸಾಧ್ಯತೆ ಇರುವ ಕಾರಣ, ಅನುಮಾನ ಬಂದಲ್ಲಿ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್, ಕ್ರೆಡಿಟ್ ಚಾಟ್ ಅನ್ನು ಆಗಾಗ ಪರಿಶೀಲಿಸಬೇಕು. ಆನ್ಲೈನ್ ವಹಿವಾಟು ನಡೆಸುತ್ತಿದ್ದಲ್ಲಿ ಪಾಸ್ವರ್ಡ್ ಅನ್ನು ಬದಲಿಸುತ್ತಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹೊಸ ಮಾದರಿಯ ವಂಚನೆ "ಫೆಡ್ಎಕ್ಸ್ ಕೊರಿಯರ್": ಡೇಟಾ ಸೋರಿಕೆಯ ನಡುವೆ 'ಫೆಡ್ಎಕ್ಸ್ ಕೊರಿಯರ್' ಎಂಬ ವಂಚನೆಯು ಸದ್ದು ಮಾಡುತ್ತಿದೆ. ಇದು ಹೊಸ ಮಾದರಿಯ ಸೈಬರ್ ಅಪರಾಧವಾಗಿದೆ. ಅಂದರೆ, ನಿಮ್ಮ ಹೆಸರು ಮತ್ತು ವಿಳಾಸದಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಸ್ತುಗಳು ಬಂದಿವೆ ಎಂದು ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುವುದಾಗಿದೆ.
ಈಚೆಗೆ ಹೈದರಾಬಾದ್ನಲ್ಲಿ ಶಿಕ್ಷಕರೊಬ್ಬರು ಇಂಥದ್ದೇ ಕರೆಯನ್ನು ಸ್ವೀಕರಿಸಿದ್ದಾರೆ. ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಆತ, ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳುಳ್ಳ ಪಾರ್ಸೆಲ್ ಪತ್ತೆಯಾಗಿದೆ. ಸಿಬಿಐ ಇದರ ತನಿಖೆ ಮುಂದಾಗಿದೆ. ನಿಮ್ಮ ವಿರುದ್ಧ ಪ್ರಕರಣದ ದಾಖಲಿಸಲಾಗಿದ್ದು, ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ದಿಗ್ಭ್ರಮೆಗೊಂಡ ಶಿಕ್ಷಕರು ಅಂತಹ ಯಾವುದೇ ಪಾರ್ಸೆಲ್ ಅನ್ನು ನಾನು ಕಳುಹಿಸಲಿಲ್ಲ ಎಂದಾಗ, ಕರೆ ಮಾಡಿದ ವ್ಯಕ್ತಿ ಶಿಕ್ಷಕರ ಪೂರ್ಣ ಹೆಸರು, ವಿಳಾಸ ಮತ್ತು ಇತರ ವೈಯಕ್ತಿಕ ವಿವರಗಳನ್ನು ಹೇಳಿದ್ದಾನೆ.
ಇದಾದ ಬಳಿಕ ಮತ್ತೊಬ್ಬ ವ್ಯಕ್ತಿ ವಿಡಿಯೋ ಕರೆ ಮಾಡಿ ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿದ್ದ ತನ್ನನ್ನು ಸಿಬಿಐ ಅಧಿಕಾರಿ ಎಂದು ತಿಳಿಸಿ, ನಿಮ್ಮ ಮೇಲೆ ಅಕ್ರಮ ವಸ್ತುಗಳ ಸಾಗಾಟ ಆರೋಪ ಬಂದಿದೆ. ಈ ಬಗ್ಗೆ ಪುರಾವೆಗಳಿವೆ ಎಂದು ಬೆದರಿಕೆ ಹಾಕಿದ್ದಾನೆ. ಭಯಭೀತರಾದ ಶಿಕ್ಷಕರು ಇದರಿಂದ ತಪ್ಪಿಸಿಕೊಳ್ಳಲು ಪರಿಹಾರ ಕೋರಿದಾಗ, ಆ ನಕಲಿ ಅಧಿಕಾರಿ 99 ಲಕ್ಷ ರೂಪಾಯಿ ಕೊಟ್ಟರೆ ಬಂಧನದಿಂದ ತಪ್ಪಿಸುವುದಾಗಿ ತಿಳಿಸಿದ್ದಾನೆ. ಆ ಶಿಕ್ಷಕರು ಹಣ ವರ್ಗಾಯಿಸಿದ್ದಾರೆ. ಇದಾದ ಬಳಿಕ ಅವರು ಮೋಸ ಹೋದ ಬಗ್ಗೆ ಅರಿತುಕೊಂಡಿದ್ದರು.
ಇಂಥದ್ದೇ ಪ್ರಕರಣದಲ್ಲಿ ಪ್ರಾಧ್ಯಾಪಕರು 45 ಲಕ್ಷ, ಉದ್ಯಮಿ 80 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಮಹಿಳೆಯೊಬ್ಬರಿಗೆ ಸ್ಕೈಪ್ ಕರೆ ಮಾಡಿ ಬೆದರಿಕೆ ಹಾಕಿ 60 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದರು. ತಕ್ಷಣವೇ ಅವರು 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ಸೈಬರ್ ಭದ್ರತಾ ಪೊಲೀಸರು ಹಣ ಬಳಸದಂತೆ ಸ್ಥಗಿತ ಮಾಡಿದ್ದರು.
ಈ ವರ್ಷವೊಂದೇ ಸೈಬರ್ ಭದ್ರತಾ ಕೇಂದ್ರಕ್ಕೆ 1026 ದೂರುಗಳು ಬಂದಿದ್ದು, ಇದರಲ್ಲಿ 36.74 ಕೋಟಿ ರೂಪಾಯಿ ವಂಚನೆ ನಡೆದಿತ್ತು. ತಕ್ಷಣವೇ ನೀಡಿದ ದೂರುಗಳಲ್ಲಿ 7.46 ಕೋಟಿ ರೂಪಾಯಿ ಹಣ ವಾಪಸ್ ಪಡೆಯಲಾಗಿದೆ. ಉಳಿದ ವಂಚನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸೈಬರ್ ಕಳ್ಳರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸೈಬರ್ ಸೆಕ್ಯುರಿಟಿ ಬ್ಯೂರೋದ ಹೆಚ್ಚುವರಿ ಡಿಜಿ ಮತ್ತು ನಿರ್ದೇಶಕಿ ಶಿಖಾ ಗೋಯೆಲ್ ಅವರು ಹೇಳುವಂತೆ, ವಂಚಕರು ಯಾವುದೇ ಸುಳಿವನ್ನೂ ಬಿಡುವುದಿಲ್ಲ. ಇಂತಹ ಅಪರಾಧಗಳ ವೇಳೆ ಸಂತ್ರಸ್ತರು ತಕ್ಷಣವೇ ಮಾಹಿತಿ ನೀಡಿದಲ್ಲಿ ಹಣವನ್ನು ಫ್ರೀಜ್ ಮಾಡಲು ಮತ್ತು ಅಪರಾಧಿಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಫೆಡ್ಎಕ್ಸ್ ವಂಚನೆ ಹೇಗೆ ನಡೆಯುತ್ತೆ?: ನೀವು ಕಳುಹಿಸಿದ ಫೆಡ್ಎಕ್ಸ್ ಕೊರಿಯರ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ, ಡ್ರಗ್ಸ್, ಪಿಸ್ತೂಲ್ಗಳು, ಬುಲೆಟ್ ಪಾರ್ಸೆಲ್ ಬಂದಿವೆ. ಕಸ್ಟಮ್ಸ್ ವಿಚಾರಣೆಯಲ್ಲಿ ಅವು ಪತ್ತೆಯಾಗಿವೆ ಎಂದು ನಕಲಿ ಅಧಿಕಾರಿ ತಿಳಿಸಿಸುತ್ತಾನೆ. ಸಿಬಿಐ ಅಥವಾ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣವನ್ನು ದಾಖಲಿಕೊಂಡಿದ್ದಾರೆ. ನಿಮ್ಮನ್ನು ಬಂಧಿಸಲಾಗುವುದು ಎಂದು ಬೆದರಿಸುತ್ತಾನೆ. ತಕ್ಷಣವೇ ಇನ್ನೊಬ್ಬ ವಿಡಿಯೋ ಕರೆ ಮಾಡಿ ತನ್ನನ್ನು ಮುಂಬೈ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ಕೊರಿಯರ್‌ನಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಮುಂಬೈಗೆ ವಿಚಾರಣೆಗ ಹಾಜರಾಗಲು ಸೂಚಿಸುತ್ತಾನೆ. ಇಲ್ಲದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕುತ್ತಾನೆ. ಕೇಸ್ನಲ್ಲಿ ಜಾಮೀನು ಸಿಗುವುದಿಲ್ಲ ಎಂದು ಹೆದರಿಸುತ್ತಾನೆ.
ಸಂತ್ರಸ್ತರು ಭಯದಲ್ಲಿದ್ದಾಗಲೇ ಮೂರನೇ ವ್ಯಕ್ತಿ ಕರೆ ಮಾಡಿ ಕಸ್ಟಮ್ಸ್ ಅಧಿಕಾರಿ ಎಂದು ತಿಳಿಸಿ, ಕೊರಿಯರ್ ಕಾನೂನುಬಾಹಿರವಾಗಿದೆ. ನಿಮ್ಮ ವಿಳಾಸದಿಂದಲೇ ಬಂದಿದೆ ಎಂದು ನಕಲಿ ದಾಖಲೆಗಳನ್ನು ತೋರಿಸುತ್ತಾನೆ. ಇದರಲ್ಲಿ ಕೋಟಿಗಟ್ಟಲೆ ಅಕ್ರಮ ವ್ಯವಹಾರ ನಡೆದಿದೆ ಎಮದು ತಿಳಿಸುತ್ತಾನೆ. ಈ ಬಗ್ಗೆ ನೀವು ಏನೇ ಸಮಜಾಯಿಸಿ ನೀಡಿದರೂ ಕೇಳದ ಆತ, ಬಂಧಿಸುವ ಬೆದರಿಕೆ ಹಾಕುತ್ತಾನೆ. ಇಲ್ಲವಾದಲ್ಲಿ ಇಂತಿಷ್ಟು ಹಣ ನೀಡಿದಲ್ಲಿ ಬಿಡುವುದಾಗಿ ಆಫರ್ ನೀಡುತ್ತಾನೆ. ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.
ಪೊಲೀಸರು ಹೇಳೋದೇನು?: ಯಾವುದೇ ಅಪರಾಧ ನಡೆದಲ್ಲಿ ತನಿಖಾ ಸಂಸ್ಥೆಗಳ ಅಧಿಕಾರಿಗಳು ವಿಡಿಯೋ ಕರೆಗಳನ್ನು ಮಾಡುವುದಿಲ್ಲ. ವೀಡಿಯೊ ಕರೆಯಲ್ಲಿ ವಿಚಾರಣೆಗೆ ಬನ್ನಿ, ಹೇಳಿಕೆ ನೀಡಿ ಎಂದು ಹೇಳಿದಾಗ ಅದು ವಂಚನೆಯ ಕರೆ ಎಂದು ಅರಿತುಕೊಳ್ಳಬೇಕು. ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಪ್ರಕರಣದ ವಿಚಾರಣೆ ನಡೆಸುವುದಿಲ್ಲ. ನ್ಯಾಯಾಂಗ ಮಾತ್ರ ವಿಶೇಷ ಸನ್ನಿವೇಶದಲ್ಲಿ ಇಂತಹ ವಿಚಾರಣೆ ನಡೆಸುತ್ತದೆ. ಪೊಲೀಸ್ ತನಿಖೆಯಲ್ಲಿ ಹೀಗೆ ನಡೆಯುವುದಿಲ್ಲ ಎಂದು ಅಧಿಕಾರಿ ಗೋಯಲ್ ಅವರು ತಿಳಿಸುತ್ತಾರೆ. ಹಾಗಾಗಿ ಇಂತಹ ಯಾವುದೇ ಕರೆಯನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಸುರಕ್ಷಿತವಾಗಿರುವುದು ಹೇಗೆ?: ಯಾವುದೇ ಸೈಬರ್ ಅಪರಾಧವನ್ನು ತಡೆಯಲು ನೀವು ಯಾವುದೇ ಅಪರಿಚಿತ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬೇಡಿ. ಯಾವುದೇ ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಪರಾಧ ಮಾಡಿದ್ದೀರಿ ಎಂದು ಕರೆ ಮಾಡಿದರೆ ಅದನ್ನು ನಂಬಬೇಡಿ. ವಿದೇಶದಲ್ಲಿ ನಿಮ್ಮವರು ಯಾರಾದರೂ ಇದ್ದರೆ, ಅಲ್ಲಂದ ಪಾರ್ಸೆಲ್ ಬಂದಿದೆ ಎಂದಾಗ ಅದನ್ನು ಮೊದಲು ಪರಿಶೀಲಿಸಿ. ಇಂತಹ ಯಾವುದೇ ವಂಚನೆಯ ಕರೆಗಳು ಬಂದಾಗ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ.