Tamil Nadu Wedding Style Kalyana Rasam: ಇನ್ನೇನು ಚಳಿಗಾಲ ಆರಂಭವಾಗುತ್ತದೆ. ಹೆಚ್ಚಿನ ಜನರು ಚಳಿಯಿಂದ ಬಚಾವ್ ಆಗಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ವಿಶೇಷವಾಗಿ ತಿನ್ನುವ ವಿಷಯದಲ್ಲೂ ಕೂಡ ಬಿಸಿ ಬಿಸಿ ಆಹಾರ ಪದಾರ್ಥಗಳ ಮೊರೆಹೋಗುತ್ತಾರೆ. ಈ ನಿಟ್ಟಿನಲ್ಲಿ ಬಿಸಿಯಾದ ರಸಂ, ಸೂಪ್‌ಗಳು ಮುಂತಾದವುಗಳನ್ನು ಇರಿಸಿಕೊಳ್ಳುತ್ತಾರೆ. ಅಂತಹವರಿಗಾಗಿಯೇ ವಿಶೇಷ ರೆಸಿಪಿ ತಂದಿದ್ದೇವೆ. ಅದೇ ತಮಿಳು ವೆಡ್ಡಿಂಗ್ ಸ್ಟೈಲ್ "ಕಲ್ಯಾಣ ರಸಂ''.
ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತುಂಬಾ ಇಷ್ಟಪಟ್ಟು ಅನ್ನದಲ್ಲಿ ಸೇರಿಸಿ ತಿನ್ನುತ್ತಾರೆ. ಕೇವಲ ತಿನ್ನುವುದಷ್ಟೇ ಅಲ್ಲ, ಕುಡಿಯಲೂಬಹುದು. ಈ ರಸಂಅನ್ನು ತಯಾರಿಸುವುದು ತುಂಬಾ ಸರಳ. ಮತ್ತೆ ಇನ್ನೇಕೆ ತಡ, ಈ ಸೂಪರ್ ಟೇಸ್ಟಿ ಕಲ್ಯಾಣ ರಸಂಅನ್ನು ಹೇಗೆ ಮಾಡಬೇಕು ಅನ್ನೋದನ್ನು ತಿಳಿಯೋಣ..
ಅಗತ್ಯ ಪದಾರ್ಥಗಳು:
- ಎಣ್ಣೆ - 2 ಟೇಬಲ್ ಸ್ಪೂನ್
- ಸಾಸಿವೆ - 1 ಟೀ ಸ್ಪೂನ್
- ಅರಿಶಿಣ - ಮುಕ್ಕಾಲು ಟೀ ಸ್ಪೂನ್
- ಹಸಿ ಮೆಣಸಿನಕಾಯಿ -4
- ಟೊಮೆಟೊ - 1
- ಉಪ್ಪು - ರುಚಿಕಿ ತಕ್ಕಷ್ಟು
- ಬೇಯಿಸಿದ ತೊಗರಿ ಬೇಳೆ - 100 ಗ್ರಾಂ
- ನೀರು - 250 ಎಂಎಲ್
- ಹುಣಸೆಹಣ್ಣು - ರುಚಿಗೆ ತಕ್ಕಷ್ಟು
- ಕರಿಬೇವು - ಅಗತ್ಯಕ್ಕೆ ತಕ್ಕಷ್ಟು
- ಕಾಳು ಮೆಣಸು - 1 ಟೀ ಸ್ಪೂನ್
- ಬೆಳ್ಳುಳ್ಳಿ - 8 ಎಸಳು
- ಇಂಗು - ಕಾಲು(1/4) ಟೀ ಸ್ಪೂನ್
ತಯಾರಿಕೆಯ ವಿಧಾನ:
- ಮೊದಲು ದೊಡ್ಡ ಗಾತ್ರದ ಟೊಮೆಟೊ ತೆಗೆದುಕೊಂಡು ಅದರ ತುಂಡುಗಳನ್ನು ಕತ್ತರಿಸಿ ಪಕ್ಕಕ್ಕೆ ಇಡಿ.
- ಆ ನಂತರ ಮೆಣಸು, ಬೆಳ್ಳುಳ್ಳಿ ಎಸಳನ್ನು ತೆಗೆದುಕೊಳ್ಳಬೇಕು.
- ಹಾಗೆಯೇ ತೊಗರಿಬೇಳೆಯನ್ನು ತೆಗೆದುಕೊಳ್ಳಿ. ಹುಣಸೆಹಣ್ಣು ಸ್ವಚ್ಛಗೊಳಿಸಿ ನೀರಲ್ಲಿ ನೆನಸಿಡಿ.
- ಈಗ ಸ್ಟೌವ್ ಆನ್ ಮಾಡಿ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಸಾಸಿವೆಯನ್ನು ಹಾಕಿ
- ಆ ನಂತರ ಅರಿಶಿಣ, ಒಣಗಿದ ಮೆಣಸಿನಕಾಯಿ ತುಂಡುಗಳನ್ನು ಸುವಾಸನೆ ಬರುವವರೆಗೆ ಬೇಯಿಸಬೇಕು.
- ಆ ನಂತರ ಕಟ್ ಮಾಡಿದ ಟೊಮೆಟೊ ತುಂಡುಗಳು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಚೆನ್ನಾಗಿ ಕಲಿಸಿ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ಅಂದರೆ ಆ ತುಂಡುಗಳನ್ನು ಮೃದುವಾಗಿ ಬೇಯಿಸಿಕೊಳ್ಳಬೇಕು.
- ಟೊಮೆಟೊ ಮೃದುವಾಗಿ ಬೆಂದ ನಂತರ ನೀರು ಮತ್ತು ತೊಗರಿಬೇಳೆಯನ್ನು ಹಾಕಿ ಚೆನ್ನಾಗಿ ಕಲಿಸಿ.
- ರಸಂ ಕುದಿಯುತ್ತಿರುವಾಗ ಅದಕ್ಕೆ ಹುಣಸೆಹಣ್ಣನ್ನು ಹಿಂಡಿರಿ. ಆ ನಂತರ ಕರಿಬೇವು ಸೇರಿಸಿ, ಕಾಳು ಮೆಣಸು, ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿದ ನಂತರ ಕೊತ್ತಂಬರಿ ಸೊಪ್ಪು ಬೆರೆಸಿ ಸೇರಿಸಿ ಕಡಾಯಿಯನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.
- ಆ ನಂತರ ಸ್ವಲ್ಪ ಇಂಗು ಹಾಕಿ ಇನ್ನೊಂದು ನಿಮಿಷದ ಜೊತೆಗೆ ಕುದಿಸಿದರೆ ಸಾಕು. ಈಗ ಘುಮ ಘುಮಿಸುವ ತಮಿಳುನಾಡು ಶೈಲಿಯ ಸ್ಪೆಷಲ್ ಕಲ್ಯಾಣ ರಸಂ ರೆಡಿ. ಇದನ್ನು ಬಿಸಿಯಾಗಿರುವಾಗಲೇ ಬಳಸಿದರೆ ಊಟದ ರುಚಿ ಹೆಚ್ಚಾಗುತ್ತದೆ.
ಇಷ್ಟವಾದರೆ ನೀವು ಒಮ್ಮೆ ಟ್ರೈ ಮಾಡಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಕುಳಿತು ಒಟ್ಟಿಗೆ ಸವಿಯಿರಿ..
ಇದನ್ನೂ ಓದಿ: ಈ ಫ್ರೂಟ್ ಹಣ್ಣುಗಳ 'ರಾಣಿ', ಕ್ಯಾನ್ಸರ್ & ಮಧುಮೇಹಿಗಳಿಗೆ ವರದಾನ: ಸಂಶೋಧಕರು ತಿಳಿಸಿದ ಲಾಭಗಳಿವು