Pav Bhaji Masala Recipe: ಪಾವ್ ಬಾಜಿ ಹೆಸರು ಕೇಳಿದರೆ ಸಾಕು ಬಹುತೇಕರ ಬಾಯಲ್ಲಿ ನೀರು ಬರುವುದು ಸಾಮಾನ್ಯ. ಪಾವ್ ಅಂದರೆ ಬನ್ ಹಾಗೂ ಬಾಜಿ ಅಂದರೆ ತರಕಾರಿ. ಇವುಗಳಿಂದ ತಯಾರಿಸಿದ ಪಾವ್ ಬಾಜಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾ ಇಷ್ಟವಾಗುತ್ತದೆ. ಹವಾಮಾನವು ತಂಪಾಗಿರುವಾಗ, ಈ ರೆಸಿಪಿಯನ್ನು ತಯಾರಿಸಿ, ಬಿಸಿಯಾಗಿರುವಾಗಲೇ ಸೇವಿಸಿದರೆ ಸಖತ್ ಅನುಭವ ದೊರೆಯುತ್ತದೆ.
ಈ ಪಾವ್ ಬಾಜಿ ತಯಾರಿಸಲು ಮಸಾಲಾ ಪುಡಿ ಬೇಕಾಗುತ್ತದೆ. ಪಾವ್ ಬಾಜಿ ಮಸಾಲಾ ಪುಡಿಗಾಗಿ ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಲ್ಲಿಯೇ ಸರಳವಾಗಿ ತಯಾರಿಸಬಹುದು. ಈ ಮಸಾಲೆ ಪುಡಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು? ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಪಾವ್ ಬಾಜಿ ಮಸಾಲಾ ಪುಡಿಗೆ ಬೇಕಾಗುವ ಪದಾರ್ಥಗಳು:
- ಧನಿಯಾ - 3 ಟೀಸ್ಪೂನ್
- ಜೀರಿಗೆ - ಎರಡೂವರೆ ಚಮಚ
- ಕಾಳುಮೆಣಸು - 2 ಟೀಸ್ಪೂನ್
- ಆಮ್ಚೂರ್ ಪುಡಿ (ಮಾವಿನಕಾಯಿ ಪುಡಿ) - 1 ಟೀಸ್ಪೂನ್
- ಬಡೆಸೋಂಪು - 1 ಟೀಸ್ಪೂನ್
- ಒಣಮೆಣಸಿನಕಾಯಿ - 12
- ಲವಂಗ - 10
- ಏಲಕ್ಕಿ - 4
- ದಾಲ್ಚಿನ್ನಿ - 3 ಇಂಚಿನ ತುಂಡು
- ಕಪ್ಪು ಏಲಕ್ಕಿ - 2
- ಬಿರಿಯಾನಿ ಎಲೆಗಳು - 2
- ಮರಾಠಿ ಮೊಗ್ಗು - 1
- ಒಣ ಶುಂಠಿ ಪುಡಿ - ಅರ್ಧ ಚಮಚ
ಪಾವ್ ಬಾಜಿ ಮಸಾಲಾ ಪುಡಿ ತಯಾರಿಸುವ ವಿಧಾನ:
- ಮೊದಲು ಕಡಾಯಿಯನ್ನು ಒಲೆಯ ಮೇಲೆ ಇಡಬೇಕು. ಅದರೊಳಗೆ ದಾಲ್ಚಿನ್ನಿ, ಮರಾಠಿ ಮೊಗ್ಗು, ಧನಿಯಾ, ಕಪ್ಪು ಏಲಕ್ಕಿ, ಕಾಳುಮೆಣಸು ಮತ್ತು ಬಿರಿಯಾನಿ ಎಲೆಗಳನ್ನು ಒಂದಾದ ನಂತರ ಒಂದರಂತೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕಾಗುತ್ತದೆ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಡಿ.
- ನಂತರ ಅದೇ ಕಡಾಯಿಯಲ್ಲಿ ಲವಂಗ, ಜೀರಿಗೆ, ಮೆಣಸು, ಸೋಂಪು ಹಾಗೂ ಏಲಕ್ಕಿ ಸೇರಿಸಿ, ವಾಸನೆ ಹೋಗುವವರೆಗೆ ಹುರಿದು ಪಕ್ಕಕ್ಕೆ ಇಡಿ.
- ನಂತರ ಆಮ್ಚೂರ್ ಪುಡಿ ಹಾಗೂ ಒಣ ಶುಂಠಿ ಪುಡಿಯನ್ನು ಕೆಲವು ಹೊತ್ತು ಫ್ರೈ ಮಾಡಿದ ನಂತರ ಸ್ಟೌ ಆಫ್ ಮಾಡಿ.
- ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದರಲ್ಲಿ ಈ ಮೊದಲೇ ಹುರಿದ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
- ನಂತರ ಈ ಪುಡಿಯನ್ನು ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಬಾಟಲಿಯಲ್ಲಿ ಸಂಗ್ರಹಿಸಿ ಇಡಿ. ಪಾವ್ ಬಾಜಿ ಮಸಾಲಾ ಪುಡಿ ಈಗ ಸಿದ್ಧವಾಗಿದೆ. ನೀವು ಪಾವ್ ಬಾಜಿ ಪ್ರಿಯರಾಗಿದ್ದರೆ, ಮತ್ತೇಕೆ ತಡ, ಅಗತ್ಯವಿರುವ ಮಸಾಲಾ ಪುಡಿಯನ್ನು ಈ ರೀತಿ ಸುಲಭವಾಗಿ ತಯಾರಿಸಿ.
- ನಿಮಗೆ ಪಾವ್ ಬಾಜಿ ಸೇವಿಸಬೇಕು ಅನಿಸಿದರೆ, ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ, ಆಲೂಗಡ್ಡೆ ಮತ್ತು ಬಟಾಣಿಗಳೊಂದಿಗೆ ಮಾಡಿದ ಬಾಜಿಗೆ ಈ ಮಸಾಲವನ್ನು ಸೇರಿಸಿ. ಆಗ ಪಾವ್ಗಳನ್ನು ಬೆಣ್ಣೆಯೊಂದಿಗೆ ಹುರಿದು ಬಾಜಿಯೊಂದಿಗೆ ತಿಂದರೆ ಆ ಅನುಭವವೇ ಸೂಪರ್ ಆಗಿರುತ್ತದೆ.