ಬೈರುತ್, ಲೆಬನಾನ್: ಗಾಜಾದಲ್ಲಿನ ಹೋರಾಟವನ್ನು ಬೆಂಬಲಿಸುವ ಮೂಲಕ ತನ್ನ ಪೂರ್ವಾಧಿಕಾರಿ ಸಯ್ಯದ್ ಹಸನ್ ನಸ್ರಲ್ಲಾ ಅಳವಡಿಸಿಕೊಂಡ ಯುದ್ಧ ಕಾರ್ಯತಂತ್ರವನ್ನು ಮುಂದುವರಿಸುವುದಾಗಿ ಹಿಜ್ಬುಲ್ಲಾದ ಹೊಸ ನಾಯಕ ಶೇಖ್ ನಯೀಮ್ ಖಾಸಿಮ್ ಬುಧವಾರ ಹೇಳಿದ್ದಾರೆ ಎಂದು ಲೆಬನಾನ್ ಟಿವಿ ಚಾನೆಲ್ ಅಲ್-ಮನಾರ್ ವರದಿ ಮಾಡಿದೆ.
"ರಾಜಕೀಯ, ಜಿಹಾದಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಯ್ಯದ್ ಹಸನ್ ನಸ್ರಲ್ಲಾ ಅವರ ಕಾರ್ಯಸೂಚಿಯನ್ನು ಮುಂದುವರಿಸಿಕೊಂಡು ಹೋಗುವೆ" ಎಂದು ಖಾಸಿಮ್ ಹಿಜ್ಬುಲ್ಲಾದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ದೂರದರ್ಶನ ಭಾಷಣದಲ್ಲಿ ಅವರು ಹೇಳಿದರು.
‘ಹೊರಟು ಹೋಗಿ ಇಲ್ಲವೇ ಭಾರಿ ಬೆಲೆ ತೆರಬೇಕಾಗುತ್ತದೆ’: ಈ ಪ್ರದೇಶದಲ್ಲಿ ಇಸ್ರೇಲ್ ಒಡ್ಡಿರುವ ಬೆದರಿಕೆ ಎದುರಿಸಲು ಗಾಜಾವನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಖಾಸಿಮ್ ಒತ್ತಿ ಹೇಳಿದರು. "ಇದು ನಮ್ಮ ಭೂಮಿಯಾಗಿರುವುದರಿಂದ ನೀವು ಖಂಡಿತವಾಗಿಯೂ ಸೋಲುವಿರಿ. ನಮ್ಮ ದೇಶಗಳಿಂದ ಹೊರಟು ಹೋಗಿ; ನೀವು ಅಲ್ಲಿಯೇ ಇದ್ದರೆ, ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಅವರು ಇಸ್ರೇಲಿಗಳನ್ನು ಉದ್ದೇಶಿಸಿ ಹೇಳಿದರು. ಇರಾನ್ ಯಾವುದೇ ಗುಪ್ತ ಅಜೆಂಡಾಗಳಿಲ್ಲದೇ ಹಿಜ್ಬುಲ್ಲಾವನ್ನು ಬೆಂಬಲಿಸುತ್ತಿದೆ ಎಂದು ಖಾಸಿಮ್ ಹೇಳಿದರು.
"ನಮ್ಮ ಗಡಿಗಳಲ್ಲಿ ಲೆಬನಾನ್ ಯೋಧರೊಂದಿಗೆ ಕೈಜೋಡಿಸಿ ಇಸ್ರೇಲ್ ವಿರುದ್ಧ ಹೋರಾಡಿ ಲೆಬನಾನ್ ಭೂಮಿಯನ್ನು ಮುಕ್ತಗೊಳಿಸುತ್ತಿದ್ದೇವೆ; ಕೆಲವರು ಹೇಳಿದಂತೆ ಇಸ್ರೇಲ್ ವಿರುದ್ಧ ಹೋರಾಡಲು ಇರಾನ್ ನಮ್ಮನ್ನು ಬಳಸುತ್ತಿಲ್ಲ" ಎಂದು ಅವರು ಹೇಳಿದರು.
ಹಿಜ್ಬುಲ್ಲಾ ಮೇಲೆ ವ್ಯತಿರಿಕ್ತ ಪರಿಣಾಮ: ನಸ್ರಲ್ಲಾ ಹತ್ಯೆಯಿಂದ ಹಿಜ್ಬುಲ್ಲಾ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಎಂಬುದನ್ನು ಒಪ್ಪಿಕೊಂಡ ಖಾಸಿಮ್, ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಲು ಈ ಗುಂಪು ಸಮರ್ಥವಾಗಿದೆ ಎಂದು ಪುನರುಚ್ಚರಿಸಿದರು.
ಸೆಪ್ಟೆಂಬರ್ 23 ರಿಂದ ಇಸ್ರೇಲ್ ಸೇನೆಯು ಲೆಬನಾನ್ ವಿರುದ್ಧ ಅಭೂತಪೂರ್ವ ಮತ್ತು ತೀವ್ರವಾದ ವಾಯು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದೆ. ವ್ಯಾಪಕ ಸಂಘರ್ಷದ ಆತಂಕದ ನಡುವೆ 2023 ರ ಅಕ್ಟೋಬರ್ 8 ರಿಂದ ಹಿಜ್ಬುಲ್ಲಾ ಮತ್ತು ಇಸ್ರೇಲ್ ಸೈನ್ಯಗಳು ಲೆಬನಾನ್-ಇಸ್ರೇಲ್ ಗಡಿ ಉದ್ದಕ್ಕೂ ಗುಂಡಿನ ಚಕಮಕಿ ನಡೆಸುತ್ತಿವೆ. ಆಗ್ನೇಯ ಲೆಬನಾನ್ನ ಖಿಯಾಮ್ ಗ್ರಾಮದ ಒಂದು ಭಾಗವನ್ನು ಇಸ್ರೇಲ್ ಪದಾತಿ ಪಡೆಗಳು ಬುಧವಾರ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಏತನ್ಮಧ್ಯೆ ಲೆಬನಾನ್ನಿಂದ ಹಾರಿ ಬಂದ ಡ್ರೋನ್ ದಾಳಿಯಲ್ಲಿ ಇಬ್ಬರು ಇಸ್ರೇಲಿ ರೈತರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನೋಡಿ ತಲೆತಗ್ಗಿಸುವಂತಾಗಿದೆ: ಮರಿಯಮ್ ನವಾಜ್