ಬೈರುತ್: ತಕ್ಷಣವೇ ಜಾಗ ಖಾಲಿ ಮಾಡುವಂತೆ ಲೆಬನಾನ್ನ ಕೆಲ ಪ್ರದೇಶಗಳ ನಿವಾಸಿಗಳಿಗೆ ಇಸ್ರೇಲ್ ಸೂಚನೆ ನೀಡಿದೆ. ಲೆಬನಾನ್ನ ಆಗ್ನೇಯ ಭಾಗದಲ್ಲಿರುವ ವಝಾನಿ ಹೆಸರಿನ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶಗಳ ಮೇಲೆ ಇಸ್ರೇಲ್ ಡ್ರೋನ್ಗಳು ರವಿವಾರ ಬೆಳಗ್ಗೆ ಕರಪತ್ರಗಳನ್ನು ಎಸೆದಿದ್ದು, ಅಲ್ಲಿನ ನಿವಾಸಿಗಳು ಖಿಯಾಮ್ ಪಟ್ಟಣದ ಉತ್ತರಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ.
ಇಸ್ರೇಲಿ ರಕ್ಷಣಾ ಪಡೆಯ (ಐಡಿಎಫ್) ಸಹಿ ಹೊಂದಿರುವ ಕರಪತ್ರಗಳಲ್ಲಿ, "ನಿರಾಶ್ರಿತರ ಶಿಬಿರಗಳ ಪ್ರದೇಶದ ಎಲ್ಲಾ ನಿವಾಸಿಗಳು ಮತ್ತು ಸ್ಥಳಾಂತರಗೊಂಡ ಜನರಿಗೆ ತಿಳಿಸುವುದೇನೆಂದರೆ- ಹಿಜ್ಬುಲ್ಲಾ ಉಗ್ರರು ನೀವು ವಾಸಿಸುತ್ತಿರುವ ಸ್ಥಳದಿಂದ ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ನೀವು ತಕ್ಷಣವೇ ನಿಮ್ಮ ಮನೆಗಳನ್ನು ತೊರೆದು ಸಂಜೆ 4 ಗಂಟೆಯೊಳಗೆ (ಸ್ಥಳೀಯ ಸಮಯ) ಖಿಯಾಮ್ನ ಉತ್ತರಕ್ಕೆ ಹೋಗಬೇಕು ಮತ್ತು ಯುದ್ಧ ಮುಗಿಯುವವರೆಗೂ ಹಿಂತಿರುಗಬಾರದು" ಎಂದು ತಿಳಿಸಲಾಗಿದೆ ಎಂದು ಮಿಲಿಟರಿ ಮೂಲಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.
"ಈ ಸಮಯದ ನಂತರವೂ ಈ ಪ್ರದೇಶದಲ್ಲಿ ಉಳಿದುಕೊಳ್ಳುವ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಪರಿಗಣಿಸಲಾಗುವುದು ಮತ್ತು ಅವರನ್ನು ಕೊಲ್ಲಲಾಗುವುದು" ಎಂದು ಇಸ್ರೇಲ್ ಕರಪತ್ರದಲ್ಲಿ ಎಚ್ಚರಿಕೆ ನೀಡಿದೆ.
ಏತನ್ಮಧ್ಯೆ, ಇಸ್ರೇಲ್ ಯುದ್ಧವಿಮಾನಗಳು ಮತ್ತು ಡ್ರೋನ್ಗಳ ಮೂಲಕ ದಕ್ಷಿಣ ಲೆಬನಾನ್ನ ನಾಲ್ಕು ಗಡಿ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಭಾನುವಾರ ಐದು ಬಾರಿ ದಾಳಿ ನಡೆಸಿದೆ. ಅಲ್ಲದೆ ಇಸ್ರೇಲ್ ಫಿರಂಗಿಗಳು ಎಂಟು ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಶೆಲ್ ದಾಳಿ ನಡೆಸಿದ್ದು, ಅಡೈಸ್ಸೆ ಪಟ್ಟಣದಲ್ಲಿ ನಾಲ್ಕು ಜನ ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಮೂಲಗಳು ಕ್ಸಿನ್ಹುವಾಗೆ ತಿಳಿಸಿವೆ.
"ಇಂದು ಬೆಳಿಗ್ಗೆ ಲೆಬನಾನ್ ಕಡೆಯಿಂದ 40 ಕತ್ಯುಶಾ ರಾಕೆಟ್ಗಳು ಮತ್ತು ಹಲವಾರು ಡ್ರೋನ್ಗಳ ಮೂಲಕ ದಾಳಿ ನಡೆಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
2023 ರ ಅಕ್ಟೋಬರ್ 8 ರಂದು ಲೆಬನಾನ್ ಕಡೆಯಿಂದ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ನೂರಾರು ರಾಕೆಟ್ಗಳನ್ನು ಹಾರಿಸಿದ ನಂತರದಿಂದ ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಅದಕ್ಕೂ ಹಿಂದಿನ ದಿನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದನ್ನು ಬೆಂಬಲಿಸಿ ಹಿಜ್ಬುಲ್ಲಾ ಈ ದಾಳಿ ನಡೆಸಿತ್ತು. ನಂತರ ಇಸ್ರೇಲ್ ಆಗ್ನೇಯ ಲೆಬನಾನ್ ಕಡೆಗೆ ದೊಡ್ಡ ಪ್ರಮಾಣದ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು.
ಇದನ್ನೂ ಓದಿ : ಬೇಹುಗಾರಿಕೆ ಆರೋಪ: ಆರು ಬ್ರಿಟಿಷ್ ರಾಜತಾಂತ್ರಿಕರನ್ನು ಉಚ್ಚಾಟಿಸಿದ ರಷ್ಯಾ - Russia expels UK diplomats