ಗ್ರಿಂಡವಿಕ್ (ಐಸ್ಲ್ಯಾಂಡ್): ಐಸ್‌ಲ್ಯಾಂಡ್‌ನ ರೆಜೆನ್ ಪೆನಿನ್ಸುಲಾದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದ ನಂತರ ದೇಶದ ದಕ್ಷಿಣ ಭಾಗದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದು ಈ ಪ್ರದೇಶದಲ್ಲಿ ಅತಿದೊಡ್ಡ ಜ್ವಾಲಾಮುಖಿ ಸ್ಫೋಟ ಎಂದು ಹೇಳಲಾಗುತ್ತಿದೆ. ಗ್ರಿಂಡವಿಕ್ ನಗರದತ್ತ ಜ್ವಾಲಾಮುಖಿಯ ಲಾವಾ ಹರಿದು ಬಂದಿದೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಬ್ಲೂ ಲಗೂನ್ ಮತ್ತು ಗ್ರಿಂಡ್ವಿಕ್ ಪಟ್ಟಣವನ್ನು ಸ್ಥಳಾಂತರಿಸಲಾಗಿದೆ.
ಡಿಸೆಂಬರ್‌ನಿಂದ ರೀಜೆನ್ಸ್ ಪರ್ಯಾಯ ದ್ವೀಪದಲ್ಲಿ ಜ್ವಾಲಾಮುಖಿಯು ನಾಲ್ಕನೇ ಬಾರಿ ಸ್ಫೋಟಗೊಂಡಿದೆ. ಇದಕ್ಕೂ ಮುನ್ನ ಫೆಬ್ರವರಿ 8ರಂದು ಕೂಡ ಇಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಐಸ್‌ಲ್ಯಾಂಡ್‌ನಲ್ಲಿ ಜ್ವಾಲಮುಖಿಯ ಸ್ಫೋಟದಿಂದ ಲಾವಾರಸ ಮತ್ತು ಅಪಾಯಕಾರಿ ಅನಿಲಗಳು ಹೊರಹೊಮ್ಮುತ್ತಿವೆ.
ನಗರದ ರಕ್ಷಣಾ ಗೋಡೆಗಳನ್ನು ತಲುಪಿದ ಲಾವಾರಸ: ಐಸ್‌ಲ್ಯಾಂಡ್‌ನ ನಾಗರಿಕ ರಕ್ಷಣಾ ಸೇವೆಯ ಪ್ರಕಾರ, ಗ್ರಿಂಡವಿಕ್‌ನ ಉತ್ತರದಲ್ಲಿರುವ ಹೊಗಾಫೆಲ್ ಮತ್ತು ಸ್ಟೋರಾ-ಸ್ಕೋಗಾಫೆಲ್ ನಡುವೆ ಶನಿವಾರ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ ಸ್ಫೋಟಗೊಂಡಿದೆ. ಹೊರಹೊಮ್ಮುತ್ತಿರುವ ಸ್ಫೋಟದ ದೃಶ್ಯಗಳಲ್ಲಿ, ಹೊಗೆಯ ಮೋಡಗಳು ಮತ್ತು ಹೊಳೆಯುವ ಮತ್ತು ಕುದಿಯುವ ಶಿಲಾಪಾಕವು ಭೂಮಿಯ ಒಳಗಿನಿಂದ ಹೊರಬರುವುದನ್ನು ಕಾಣಬಹುದು. ವರದಿಗಳ ಪ್ರಕಾರ, ಕೆಫ್ಲಾವಿಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇತರ ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ಜ್ವಾಲಾಮುಖಿ ಸ್ಫೋಟದಿಂದ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಶನಿವಾರದ ಜ್ವಾಲಾಮುಖಿ ಸ್ಫೋಟವು ಹಿಂದೆಂದೂ ಕಂಡಿರದ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಭೂವಿಜ್ಞಾನಿ ಮ್ಯಾಗ್ನಸ್ ತುಮಿ ಗುಡ್‌ಮಂಡ್ಸನ್‌ರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಹೆಲಿಕಾಪ್ಟರ್ ಮೂಲಕ ಪ್ರದೇಶದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದವರಲ್ಲಿ ಭೂವಿಜ್ಞಾನಿ ಮ್ಯಾಗ್ನಸ್ ಕೂಡ ಸೇರಿದ್ದಾರೆ. ಲಾವಾರಸವು ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳತ್ತ ಚಲಿಸುತ್ತಿವೆ. ಲಾವಾರಸದ ಒಂದು ಭಾಗವು ಗ್ರಿಂಡವಿಕ್‌ನ ಪೂರ್ವ ರಕ್ಷಣಾ ಗೋಡೆಗಳನ್ನು ತಲುಪಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ.
800 ವರ್ಷಗಳ ಬಳಿಕ ಸ್ವರ್ಟ್ಸೆಂಗಿ ಜ್ವಾಲಾಮುಖಿ ಜಾಗೃತ: 800 ವರ್ಷಗಳ ನಂತರ ಸ್ವರ್ಟ್ಸೆಂಗಿ ಜ್ವಾಲಾಮುಖಿಯು ಜಾಗೃತಗೊಂಡಿದೆ. ಗ್ರಿಂಡವಿಕ್ ಪ್ರದೇಶದಲ್ಲಿ ಕಳೆದ ನವೆಂಬರ್ನಲ್ಲಿ ಜ್ವಾಲಾಮುಖಿ ಸ್ಫೋಟದ ಸುಳಿವು ಲಭಿಸಿತ್ತು. ಇದಾದ ಬಳಿಕ ನಗರದ ಉತ್ತರ ಭಾಗದಲ್ಲಿ ಬಿರುಕುಗಳು ಕಂಡಬಂದಿದ್ದವು. ಜ್ವಾಲಾಮುಖಿಯು ಅಂತಿಮವಾಗಿ ಡಿಸೆಂಬರ್ 18 ರಂದು ಸ್ಫೋಟಿಸಿತ್ತು.
ಗ್ರಿಂಡವಿಕ್‌ನಿಂದ ಜ್ವಾಲಾಮುಖಿಯ ಲಾವಾರಸ ಹರಿಯಿತು. ನಗರವನ್ನು ರಕ್ಷಿಸಲು ರಕ್ಷಣಾತ್ಮಕ ಗೋಡೆಯನ್ನು ನಿರ್ಮಿಸಲಾಯಿತು. ಜನವರಿ 14 ರಂದು ಎರಡನೇ ಸ್ಫೋಟ ಸಂಭವಿಸಿತ್ತು. ಮತ್ತು ಲಾವಾ ನಗರದ ರಕ್ಷಣಾ ಗೋಡೆಯನ್ನು ತಲುಪಿತು. ಗೋಡೆಯು ಕೆಲವು ಲಾವಾರಸದ ಹರಿವನ್ನು ತಡೆಯಿತು. ಆದರೆ, ಅನೇಕ ಕಟ್ಟಡಗಳು ಲಾವಾದಿಂದ ಬೂದಿಯಾಗಿವೆ.
ಮೂರನೇ ಸ್ಫೋಟವು ಫೆಬ್ರವರಿ 8 ರಂದು ಪ್ರಾರಂಭವಾಯಿತು. ಆದ್ರೆ, ಇದು ಕೆಲವೇ ಗಂಟೆಗಳಲ್ಲಿ ಕಡಿಮೆಯಾಗಿತ್ತು. ಆದರೆ, ಜ್ವಾಲಾಮುಖಿಯ ಲಾವಾರಸ ಹರಿದಿತ್ತು. ಸಾವಿರಾರು ಜನರು ತೊಂದರೆಗೆ ಒಳಗಾಗಿದ್ದರು. ಐಸ್ಲ್ಯಾಂಡ್ ದೇಶದಲ್ಲಿ ಅನೇಕ ಸಕ್ರಿಯ ಜ್ವಾಲಾಮುಖಿ ಪ್ರದೇಶಗಳಿವೆ. ಅದರಲ್ಲಿ ಜ್ವಾಲಾಮುಖಿ ಸ್ಫೋಟಗಳು ಪ್ರತಿದಿನ ಸಂಭವಿಸುತ್ತವೆ. ಮತ್ತು ಅವುಗಳನ್ನು ಎದುರಿಸಲು ಸಾಕಷ್ಟು ಅನುಭವ ಕೂಡ ಐಸ್ಲ್ಯಾಂಡ್ನವರಿಗಿದೆ.
ಇದನ್ನೂ ಓದಿ: 31,645ಕ್ಕೇರಿದ ಪ್ಯಾಲೆಸ್ಟೈನಿಯರ ಸಾವಿನ ಸಂಖ್ಯೆ: ಕದನವಿರಾಮಕ್ಕೆ ಮೂಡದ ಒಮ್ಮತ