ಒಟ್ಟಾವಾ (ಕೆನಡಾ): ಭಾರತಕ್ಕೆ ಅಪರಾಧಗಳಡಿ ಬೇಕಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವೇಳೆಯ ದೃಶ್ಯಾವಳಿಗಳು ಈಗ ಹೊರಬಂದಿವೆ. ಕೆನಡಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ನಿಜ್ಜರ್ನನ್ನು ಹತ್ಯೆ ಮಾಡಿ ಪರಾರಿಯಾಗುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ಅಲ್ಲಿನ ಮಾಧ್ಯಮಗಳು ಪೂರ್ವನಿಯೋಜಿತ ಕೃತ್ಯ ಎಂದು ವರದಿ ಮಾಡಿವೆ.
ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯಿಂದ ಭಯೋತ್ಪಾದಕ ಎಂದು ಘೋಷಿಸಲಾಗಿರುವ ಹರ್ದೀಪ್ ಸಿಂಗ್, 2023 ರ ಜೂನ್ 18 ರಂದು ಕೆನಡಾದಲ್ಲಿನ ಗುರುದ್ವಾರದಿಂದ ಹೊರಬರುತ್ತಿರುವಾಗ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಗೆ ಸಿಲುಕಿ ಹತ್ಯೆಗೀಡಾಗಿದ್ದರು. ಇದರಲ್ಲಿ ಭಾರತದ ಕೈವಾಡವಿದೆ ಎಂದು ಅಲ್ಲಿನ ಸರ್ಕಾರ ಆಪಾದಿಸಿತ್ತು. ಆದರೆ, ಭಾರತ ಸರ್ಕಾರ ಇದನ್ನು ನಿರಾಕರಿಸಿತ್ತು ಜೊತೆಗೆ ಸಾಕ್ಷ್ಯ ನೀಡುವಂತೆ ತಾಕೀತು ಮಾಡಿದೆ.
ವಿಡಿಯೋದಲ್ಲೇನಿದೆ?: ಈಗ ಹೊರಬಂದಿರುವ ವಿಡಿಯೋದಲ್ಲಿ ಎರಡು ವಾಹನಗಳಲ್ಲಿ 6 ಮಂದಿ ಇದ್ದು, ಗುರುದ್ವಾರದಲ್ಲಿದ್ದ ನಿಜ್ಜರ್ ಹೊರಬರುವುದನ್ನೇ ಕಾಯುತ್ತಿದ್ದರು. ಪಾರ್ಕಿಂಗ್ ಸ್ಥಳದಿಂದ ನಿಜ್ಜರ್ ವಾಹನದಲ್ಲಿ ಹೊರಡುತ್ತಿದ್ದಾಗ, ವಾಹನವೊಂದು ಆತನ ಎದುರಿಗೆ ಬಂದು ನಿಲ್ಲುತ್ತದೆ. ತಕ್ಷಣವೇ ಅದರಿಂದ ಇಬ್ಬರು ವ್ಯಕ್ತಿಗಳು ಓಡಿಬಂದು ಉಗ್ರ ನಿಜ್ಜರ್ ಮೇಲೆ ಗುಂಡಿನ ದಾಳಿ ನಡೆಸಿ ಮತ್ತೊಂದು ಕಾರಿನಲ್ಲಿ ಪರಾರಿಯಾಗುತ್ತಾರೆ. ಘಟನೆ ನಡೆದ ಸ್ಥಳದಿಂದ ಸಮೀಪದ ಮೈದಾನದಲ್ಲಿ ಸಾಕರ್ (ಫುಟ್ಬಾಲ್) ಆಡುತ್ತಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಗುಂಡಿನ ಸದ್ದು ಕೇಳಿ ಓಡಿ ಬಂದು ದಾಳಿಕೋರರನ್ನು ಹಿಂಬಾಲಿಸಲು ಪ್ರಯತ್ನಿಸಿದ್ದಾರೆ.
ಅವರ ಹೇಳಿಕೆಯನ್ನೂ ದಾಖಲಿಸಿರುವ ಅಲ್ಲಿನ ಮಾಧ್ಯಮಗಳು, ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡಿನ ದಾಳಿ ಮಾಡಿದ ಬಳಿಕ ಇಬ್ಬರು ಆರೋಪಿಗಳು ಓಡಿಹೋಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬರಾದ ಭೂಪಿಂದರ್ಜಿತ್ ಸಿಂಗ್ ಸಿಧು ಹೇಳಿದ್ದಾರೆ. ಗುಂಡಿನ ಸದ್ದು ಕೇಳಿ ಬಂದ ತಕ್ಷಣ ಅತ್ತ ಕಡೆ ಓಡಿ ಬಂದೆವು. ತಾನು ಗುಂಡೇಟು ತಿಂದ ವ್ಯಕ್ತಿಗೆ ಸಹಾಯ ಮಾಡುತ್ತಿದ್ದಾಗ, ಸ್ನೇಹಿತ ಮಲ್ಕಿತ್ ಸಿಂಗ್‌ಗೆ ಅವರನ್ನು ಹಿಡಿಯಲು ಸೂಚಿಸಿದೆ ಎಂದು ಭೂಪಿಂದರ್ಜಿತ್ ಸಿಂಗ್ ಸಿಧು ಹೇಳಿದ್ದಾರೆ.
ಗುಂಡೇಟಿಗೆ ಕುಸಿದು ಬಿದ್ದು, ಉಸಿರು ನಿಲ್ಲಿಸಿದ್ದ ನಿಜ್ಜರ್ನ ಎದೆಯನ್ನು ಒತ್ತಿದೆ. ಆದರೆ, ಆತ ಪ್ರತಿಕ್ರಿಯಿಸಲಿಲ್ಲ. ಇಬ್ಬರು ಗುಂಡಿನ ದಾಳಿ ಮಾಡಿ ಓಡಿ ಹೋದ ಬಳಿಕ, ಇನ್ನೊಂದು ಕಾರಿನಲ್ಲಿ ಇನ್ನೂ ಮೂವರು ಕುಳಿತಿದ್ದನ್ನು ತಾವು ನೋಡಿದ್ದಾಗಿ ಮಲ್ಕಿತ್ ಸಿಂಗ್ ಹೇಳಿದ್ದಾರೆ.
ಕೆನಡಾ- ಭಾರತ ರಾಜತಾಂತ್ರಿಕ ಬಿಕ್ಕಟ್ಟು: ಖಲಿಸ್ತಾನ್ ಉಗ್ರನ ಹತ್ಯೆಯ ವಿಚಾರವಾಗಿ ಭಾರತ ಮತ್ತು ಕೆನಡಾಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಹತ್ಯೆಯಲ್ಲಿ ಭಾರತ ಸರ್ಕಾರ ರಹಸ್ಯ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟ್ರಿನ್ ಟ್ರುಡೋ ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದರು. ಆದರೆ, ಇದನ್ನು ಭಾರತ ಸರ್ಕಾರ ನಿರಾಕರಿಸಿದೆ. ಇದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲು ಸೂಚಿಸಿದೆ. ಈವರೆಗೂ ನಿಜ್ಜರ್ ಹತ್ಯೆ ಕೇಸ್ನಲ್ಲಿ ಆರೋಪಿಗಳನ್ನು ಗುರುತಿಸಲಾಗಿಲ್ಲ.
ಇದನ್ನೂ ಓದಿ: ನಿಜ್ಜರ್ ಹತ್ಯೆಯ ಕುರಿತು ಅಮೆರಿಕ ಗುಪ್ತಚರ ಸಂಸ್ಥೆಗಳಿಂದ ಕೆನಡಾಕ್ಕೆ ಮಾಹಿತಿ: ವರದಿ