ವಾಷಿಂಗ್ಟನ್ (ಅಮೆರಿಕ) : ಅಮೆರಿಕದಲ್ಲಿ ಒಂದು ತಿಂಗಳ ಅಂತರದಲ್ಲಿ ಐವರು ಭಾರತೀಯರ ಮೇಲೆ ದಾಳಿ ನಡೆದಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ. ಫೆಬ್ರವರಿ 2 ರಂದು ರಾತ್ರಿಯ ವೇಳೆ ಭಾರತದ ವ್ಯಕ್ತಿಯ ಮೇಲೆ ಗುಂಪೊಂದು ದಾಳಿ ಮಾಡಿತ್ತು. ಆತ ಗಂಭೀರವಾಗಿ ಗಾಯಗೊಂಡು ಫೆಬ್ರವರಿ 7 ರಂದು ಮೃತಪಟ್ಟಿದ್ದ. ಇಂತಹ ಘಟನೆಗಳು ಹೆಚ್ಚುತ್ತಿರುವುದು ಅನಿವಾಸಿ ಭಾರತೀಯರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
ಆಘಾತಕಾರಿ ಘಟನೆಗಳು ಹೆಚ್ಚುತ್ತಿರುವ ಕಾರಣ ಪ್ರತಿಕ್ರಿಯೆ ನೀಡಿರುವ ಅಮೆರಿಕ ಸರ್ಕಾರ, ಭಾರತೀಯರ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಅಧ್ಯಕ್ಷ ಜೋ ಬೈಡನ್ ಸರ್ಕಾರ ಯತ್ನಿಸುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಮಾತನಾಡಿ, ಜನಾಂಗ, ಲಿಂಗ ಭೇದ ಆಧಾರದ ಮೇಲೆ ನಡೆಯುವ ಯಾವುದೇ ದಾಳಿಗಳನ್ನು ಅಮೆರಿಕದ ಸರ್ಕಾರ ಸಹಿಸುವುದಿಲ್ಲ. ಯಾವುದೇ ಹಿಂಸಾಚಾರಕ್ಕೆ ಆಸ್ಪದ ನೀಡುವುದಿಲ್ಲ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ತಿಂಗಳಲ್ಲಿ ನಾಲ್ವರು ಭಾರತೀಯರ ಸಾವು: ಒಂದು ತಿಂಗಳ ಅಂತರದಲ್ಲಿ ಅಮೆರಿಕದಲ್ಲಿ ಭಾರತೀಯರ ಮೇಲೆ ಹಲ್ಲೆಯ ಐದು ಘಟನೆಗಳು ನಡೆದಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಮೂವರು ವಿದ್ಯಾರ್ಥಿಗಳಿದ್ದಾರೆ. ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಫೆಬ್ರವರಿ 2 ರಂದು ಡೌನ್‌ಟೌನ್ ವಾಷಿಂಗ್ಟನ್‌ನಲ್ಲಿ 41 ವರ್ಷದ ಭಾರತೀಯ ಮೂಲದ ವಿವೇಕ್ ತನೇಜಾ ಎಂಬುವರ ಮೇಲೆ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ತನೇಜಾ ಅವರು ಫೆಬ್ರವರಿ 7 ರಂದು ಸಾವಿಗೀಡಾಗಿದ್ದರು.
ಫೆಬ್ರವರಿ 4 ರಂದು ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರ ಮೇಲೆ ಕ್ರೂರವಾಗಿ ದಾಳಿ ನಡೆಸಲಾಗಿತ್ತು. ವಿದ್ಯಾರ್ಥಿಯನ್ನು ಗಂಭೀರವಾಗಿ ಥಳಿಸಲಾಗಿದ್ದು, ರಕ್ತಸ್ರಾವವಾಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬಳಿಕ ಚಿಕಾಗೋದಲ್ಲಿರುವ ಭಾರತೀಯ ದೂತಾವಾಸ ಅಧಿಕಾರಿಗಳು ಸಂತ್ರಸ್ತನ ನೆರವಿಗೆ ಬಂದಿದ್ದರು.
ಈ ತಿಂಗಳ ಆರಂಭದಲ್ಲಿ ಶ್ರೇಯಸ್ ರೆಡ್ಡಿ ಎಂಬ ಭಾರತೀಯ ವಿದ್ಯಾರ್ಥಿ ಓಹಿಯೋದ ಸಿನ್ಸಿನಾಟಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನ ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ. ಜನವರಿ 30 ರಂದು ಪರ್ಡ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ದಿಢೀರ್ ಕಾಣೆಯಾಗಿ, ಬಳಿಕ ಶವವಾಗಿ ಪತ್ತೆಯಾಗಿದ್ದ.
ಇದಕ್ಕೂ ಮೊದಲು, ವಿವೇಕ್ ಸೈನಿ ಎಂದು ಗುರುತಿಸಲಾದ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಯುಎಸ್ ಜಾರ್ಜಿಯಾದ ಲಿಥೋನಿಯಾದಲ್ಲಿ ಅಂಗಡಿಯೊಂದರಲ್ಲಿ ನಿರಾಶ್ರಿತ ವ್ಯಕ್ತಿಯಿಂದ ಸುತ್ತಿಗೆಯಿಂದ ಕ್ರೂರವಾಗಿ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಕೇರಳದ ದಂಪತಿ, ಅವಳಿ ಮಕ್ಕಳು ಶವವಾಗಿ ಪತ್ತೆ