ಅಂಕಾರಾ, ಟರ್ಕಿ: ಟರ್ಕಿಯ ಅಂಕಾರದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ - TUSASನ ಪ್ರಧಾನ ಕಚೇರಿಯ ಮೇಲೆ ಬುಧವಾರ ಭಯೋತ್ಪಾದಕ ದಾಳಿ ನಡೆದಿದೆ. ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯರ್ಲಿಕಾಯಾ ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ
ಟರ್ಕಿಯ ಆಂತರಿಕ ವ್ಯವಹಾರಗಳ ಸಚಿವ ಅಲಿ ಯರ್ಲಿಕಾಯಾ, ಈ ಬಗ್ಗೆ ಎಕ್ಸ್‌ನಲ್ಲಿನ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ, ದುಃಖದ ಸಂಗತಿಯೆಂದರೆ, ನಮ್ಮಲ್ಲಿ 5 ಹುತಾತ್ಮರು ಮತ್ತು 22 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, 19 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಾಳಿ ಖಂಡಿಸಿದ ಟರ್ಕಿ ಅಧ್ಯಕ್ಷರು: ದಾಳಿಯ ಸಮಯದಲ್ಲಿ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಎರ್ಡೋಗನ್ ದಾಳಿಯನ್ನು ಖಂಡಿಸಿದ್ದು, ಹೇಯ ಭಯೋತ್ಪಾದಕ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಮಧ್ಯಾಹ್ನ 3:30 ಕ್ಕೆ ನಡೆದ ದಾಳಿಯ ನಂತರ ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಸಾರ ಮಾಡಿವೆ. ಕಹ್ರಾಮಂಕಾಜಾನ್‌ನಲ್ಲಿನ ಸ್ಥಳದಲ್ಲಿ ದೊಡ್ಡ ಪ್ರಮಾಣದ ಹೊಗೆ ಮತ್ತು ದೊಡ್ಡ ಬೆಂಕಿ ಉರಿಯುತ್ತಿರುವುದನ್ನು ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರಿಸಿರುವುದು ಕಂಡು ಬಂದಿದೆ. ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ. ಆ ಬಳಿಕ ಅಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಭದ್ರತಾ ಕ್ಯಾಮರಾ ಚಿತ್ರಗಳು ವ್ಯಕ್ತಿಯೊಬ್ಬ ಬೆನ್ನಿನ ಮೇಲೆ ಭಾರವಾದ ವಸ್ತು ಹೊತ್ತೊಯ್ಯುತ್ತಿರುವುದನ್ನು ಮತ್ತು ಆಕ್ರಮಣಕಾರಿ ರೈಫಲ್ ಹಿಡಿದಿರುವುದನ್ನು ತೋರಿಸಿದೆ. ಚಿತ್ರಗಳಲ್ಲಿ ಮಹಿಳೆಯೊಬ್ಬಳು ಆಯುಧವನ್ನು ಹಿಡಿದಿರುವಂತೆ ತೋರುತ್ತಿದೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.
ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ: ಈವರೆಗೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದಾಗ್ಯೂ, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಟರ್ಕಿಯ ಕಾನೂನು ಸಚಿವರು ಹೇಳಿದ್ದಾರೆ. ಸರ್ಕಾರದ ವಿರುದ್ಧ ದಶಕಗಳ ಕಾಲದ ದಂಗೆಯಲ್ಲಿ ತೊಡಗಿರುವ ಕಾನೂನುಬಾಹಿರ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಯೊಂದಿಗೆ ಈ ದಾಳಿಯು ಬಹುಶಃ ಸಂಬಂಧ ಹೊಂದಿದೆ ಎಂದು ಅಲ್ಲಿನ ಸಚಿವರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ ಎಂದು ವರದಿಯಾಗಿದೆ.
ಇದನ್ನು ಓದಿ: ಐದು ವರ್ಷಗಳ ಬಳಿಕ ಭಾರತ-ಚೀನಾ ಮಧ್ಯೆ ದ್ವಿಪಕ್ಷೀಯ ಮಾತುಕತೆ: ಗಡಿ ಶಾಂತಿಗೆ ಅನುಮೋದನೆ