ಪೋರ್ಟ್ ಸುಡಾನ್ : ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ನಡುವೆ 2023 ರ ಏಪ್ರಿಲ್ 15 ರಂದು ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 13 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಪತ್ರಕರ್ತರ ಸಿಂಡಿಕೇಟ್ ಪ್ರಕಟಿಸಿದೆ.
"ಸುಡಾನ್ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಪುರುಷ ಮತ್ತು ಮಹಿಳಾ ಪತ್ರಕರ್ತರ ಮೇಲೆ ದೌರ್ಜನ್ಯಗಳು ವಿಪರೀತವಾಗಿ ಹೆಚ್ಚಾಗಿವೆ. ಇಬ್ಬರು ಮಹಿಳಾ ಪತ್ರಕರ್ತರು ಸೇರಿದಂತೆ 13 ಪತ್ರಕರ್ತರು ಈವರೆಗೆ ಕೊಲ್ಲಲ್ಪಟ್ಟಿದ್ದಾರೆ" ಎಂದು ಸಿಂಡಿಕೇಟ್ ಹೇಳಿದೆ. ಪ್ರತಿ ವರ್ಷ ನವೆಂಬರ್ 2 ರಂದು 'ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ಕೊನೆಗೊಳಿಸುವ ಅಂತರರಾಷ್ಟ್ರೀಯ ದಿನ'ವಾಗಿ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸುಡಾನ್ ಪತ್ರಕರ್ತರ ಸಿಂಡಿಕೇಟ್ ಪತ್ರಕರ್ತರ ಮೇಲಿನ ದೌರ್ಜನ್ಯಗಳ ಬಗ್ಗೆ ಆತಂಕಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದೆ.
ಇದಲ್ಲದೆ ಮೂವರು ಮಹಿಳಾ ಪತ್ರಕರ್ತರು ಸೇರಿದಂತೆ ಇತರ 11 ಪತ್ರಕರ್ತರ ಮೇಲೆ ದೈಹಿಕ ಹಲ್ಲೆಗಳು ನಡೆದಿದ್ದು, ಅವರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿರುವುದಾಗಿ ಸಿಂಡಿಕೇಟ್ ಹೇಳಿದೆ.
ಸಂಘರ್ಷ ಆರಂಭವಾದಾಗಿನಿಂದ ಸುಡಾನ್ನಲ್ಲಿ 10 ಮಹಿಳಾ ಪತ್ರಕರ್ತರು ಸೇರಿದಂತೆ ಒಟ್ಟು 30 ಪತ್ರಕರ್ತರು ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ಸಿಲುಕಿದ್ದು, ಇದರಲ್ಲಿ ಪತ್ರಕರ್ತರ 15 ಸಂಬಂಧಿಕರು ಸಾವಿಗೀಡಾಗಿದ್ದು, ಅವರ ಮನೆಗಳಿಗೆ ತೀವ್ರವಾಗಿ ಹಾನಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೇಳಿಕೆಯ ಪ್ರಕಾರ, ಪತ್ರಕರ್ತರ ವಿರುದ್ಧ ವೈಯಕ್ತಿಕ ಬೆದರಿಕೆ ಹಾಕಿದ 58 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 26 ಮಹಿಳಾ ಪತ್ರಕರ್ತರಿಗೆ ಬೆದರಿಕೆ ಹಾಕಿದ ಪ್ರಕರಣಗಳಾಗಿದ್ದು, 27 ಪ್ರಕರಣಗಳಲ್ಲಿ ದೈಹಿಕ ಹಲ್ಲೆ ನಡೆಸಲಾಗಿದೆ ಅಥವಾ ಆಸ್ತಿ ಪಾಸ್ತಿಗಳನ್ನು ಲೂಟಿ ಮಾಡಲಾಗಿದೆ.
ಪತ್ರಕರ್ತರನ್ನು ರಕ್ಷಿಸುವ ಮತ್ತು ಅವರ ಕೆಲಸದಲ್ಲಿ ಅವರ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವಂತೆ ಸಂಘರ್ಷದಲ್ಲಿರುವ ಎರಡೂ ಪಕ್ಷಗಳಿಗೆ ಸಿಂಡಿಕೇಟ್ ಕರೆ ನೀಡಿದೆ.
ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಲು, ಆಕ್ರಮಣಕಾರರನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಜಗತ್ತಿಗೆ ಸತ್ಯವನ್ನು ವರದಿ ಮಾಡಲು ಸುಡಾನ್ ಪತ್ರಕರ್ತರನ್ನು ತಕ್ಷಣದ ಅಪಾಯಗಳಿಂದ ರಕ್ಷಿಸಲು ಮುಂದಾಗಬೇಕೆಂದು ಸಂಬಂಧಪಟ್ಟ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಪಕ್ಷಗಳಿಗೆ ಸಿಂಡಿಕೇಟ್ ತುರ್ತು ಮನವಿ ಮಾಡಿದೆ.
ಸುಡಾನ್ನಲ್ಲಿ ಯುದ್ಧ ಆರಂಭವಾದಾಗಿನಿಂದ ನೂರಾರು ಪತ್ರಕರ್ತರು ಸಂಘರ್ಷ ವಲಯಗಳಿಂದ ಪಲಾಯನ ಮಾಡಿದ್ದಾರೆ. ಇನ್ನು ಕೆಲವರು ದೇಶ ತೊರೆದಿದ್ದಾರೆ. ಫೆಬ್ರವರಿಯಿಂದ, ಖಾರ್ಟೂಮ್ನ ಬಹುತೇಕ ಪ್ರದೇಶಗಳಲ್ಲಿ ಇಂಟರ್ ನೆಟ್ ಮತ್ತು ಮೊಬೈಲ್ ಫೋನ್ ಸೇವೆಗಳು ಸ್ಥಗಿತಗೊಂಡಿದ್ದರಿಂದ ಆ ಪ್ರದೇಶಗಳಲ್ಲಿ ಪತ್ರಕರ್ತರು ಕೆಲಸ ಮಾಡುವುದು ಅಸಾಧ್ಯವಾಗಿದೆ. ಅಕ್ಟೋಬರ್ 14 ರಂದು ಬಿಡುಗಡೆ ಮಾಡಲಾದ ಅಂಕಿ ಅಂಶಗಳ ಪ್ರಕಾರ ಸಂಘರ್ಷದಲ್ಲಿ ಈವರೆಗೆ 24,850 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ : ಇರಾನ್‌ಗೆ ಅಮೆರಿಕದ ಎಚ್ಚರಿಕೆ - ಮಧ್ಯಪ್ರಾಚ್ಯಕ್ಕೆ ಇನ್ನಷ್ಟು ಅಸ್ತ್ರಗಳ ರವಾನೆ!