ಟೆಹರಾನ್(ಇರಾನ್): ಸಿರಿಯಾದಲ್ಲಿರುವ ಇರಾನ್‌ನ ಕಾನ್ಸುಲೇಟ್ ಮೇಲೆ ಇಸ್ರೇಲ್ ನಡಸಿದೆ ಎನ್ನಲಾದ ದಾಳಿಯು ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ. ಇಸ್ರೇಲ್ ಮೇಲೆ ದಾಳಿ ಮಾಡಲು ಮುಂದಾಗಿರುವ ಇರಾನ್, ಅಮೆರಿಕಕ್ಕೆ ಇದರಿಂದ ದೂರ ಇರಲು ಸೂಚಿಸಿದೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಇಬ್ಬರು ಜನರಲ್ಗಳು ಸೇರಿ 7 ಮಂದಿ ಸಾವಿಗೀಡಾಗಿದ್ದಾರೆ. ಇದು ಇರಾನ್ ಕಣ್ಣು ಕೆಂಪಾಗಿಸಿದೆ. ಇದರ ಬೆನ್ನಲ್ಲೇ 'ಉಗ್ರ' ಕ್ರಮಕ್ಕೆ ಮುಂದಾಗಿದ್ದು, ಇಸ್ರೇಲ್ ವಿರುದ್ಧ ಸೆಟೆದುನಿಂತಿದೆ. ಹಮಾಸ್ ವಿರುದ್ಧ ಯುದ್ಧದಲ್ಲಿ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕಕ್ಕೆ ತಕ್ಷಣಕ್ಕೆ ಎಚ್ಚರಿಕೆ ರವಾನಿಸಿದ್ದು, ಮುಂದಾಗುವ ಅನಾಹುತಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ಬೆಬನ್ಯಾಹು ಅವರ ಬಲೆಯಲ್ಲಿ ಸಿಲುಕಬೇಡಿ. ನೀವು ಹೊಡೆತ ತಿನ್ನುವ ಬದಲು ಆ ದೇಶದಿಂದ ದೂರುವಿರಿ ಇರಾನ್ ಅಧ್ಯಕ್ಷರ ರಾಜಕೀಯ ಸಹಾಯಕ ಮೊಹಮ್ಮದ್ ಜಾವೇದ್ ಅಲಿ ಲಾರಿಜಾನಿ ತಿಳಿಸಿದ್ದಾರೆ. ಇಸ್ರೇಲ್ ಈ ವೈಮಾನಿಕ ದಾಳಿ ನಡೆಸಿದೆ ಎಂದು ಆರೋಪಿಸಿರುವ ಇರಾನ್, ಇದರಲ್ಲಿ ನಮ್ಮ ಇಬ್ಬರು ಜನರಲ್ಗಳ ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಎರಡೂ ದೇಶಗಳ ನಡುವೆ ಹಳೆ ವೈಷಮ್ಯ ಸುಳಿದಾಡುತ್ತಿದ್ದು, ಇದೀಗ ನಡೆದ ದಾಳಿಯು ತೀವ್ರತೆ ಹೆಚ್ಚಿಸಿದೆ.
ಅಮೆರಿಕ ಹೇಳೋದೇನು?: ಸಿರಿಯಾದಲ್ಲಿನ ಇರಾನ್ ಕಾನ್ಸುಲೇಟ್ ಕಟ್ಟಡವನ್ನು ನಾಶಪಡಿಸಿದ ವೈಮಾನಿಕ ದಾಳಿಯ ನಂತರ ಅಮೆರಿಕ, ಇರಾನ್‌ಗೆ ತುರ್ತು ಸಂದೇಶವನ್ನು ರವಾನಿಸಿತ್ತು. ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕೃತವಾಗಿ ತಿಳಿಸಿತ್ತು.
ಇಸ್ರೇಲ್ನಲ್ಲಿ ಹೈ ಅಲರ್ಟ್: ವೈಮಾನಿಕ ದಾಳಿಯ ನಂತರ ಇಸ್ರೇಲ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯುದ್ಧ ಸೈನಿಕರಿಗೆ ರಜೆ ರದ್ದು ಮಾಡಲಾಗಿದೆ. ಮಿಲಿಟರಿ ಪಡೆಗಳನ್ನು ಸಜ್ಜುಗೊಳಿಸಿದೆ. ವಾಯು ಮಾರ್ಗವಾಗಿ ನಡೆಯಬಹುದಾದ ನಿರೀಕ್ಷಿತ ದಾಳಿಗಳನ್ನು ಹತ್ತಿಕ್ಕಲು ಜಿಪಿಎಸ್ ಆಧರಿತ ಡ್ರೋನ್‌ಗಳು ಅಥವಾ ಕ್ಷಿಪಣಿಗಳನ್ನು ನಾಶ ಮಾಡಲು ಟೆಲ್ ಅವಿವ್‌ನಲ್ಲಿ ನ್ಯಾವಿಗೇಷನಲ್ ಸಂವಹನಗಳನ್ನು ಸಕ್ರಿಯಗೊಳಿಸಿದೆ.
ಯುರೋಪಿಯನ್ ನಾಯಕರಿಂದ ಟೀಕೆ: ಈ ದಾಳಿಯು ಯುರೋಪಿಯನ್ ನಾಯಕರ ಟೀಕೆಗೆ ಗುರಿಯಾಗಿದೆ. ಹಮಾಸ್ ವಿರುದ್ಧ ನಡೆಸುತ್ತಿರುವ ಕದನಕ್ಕೆ ವಿರಾಮ ನೀಡಲು ಒತ್ತಡ ಹಾಕಲಾಗುತ್ತಿದೆ. ಜೊತೆಗೆ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟವನ್ನೂ ನಿಲ್ಲಿಸುತ್ತಿದ್ದಾರೆ.
'ಇಂತಹ ದಾಳಿಗೆ ಕ್ಷಮೆ ಇಲ್ಲ' ಎಂದು ಫ್ರೆಂಚ್ ವಿದೇಶಾಂಗ ಸಚಿವ ಜೀನ್ ಕ್ಲಾಡ್ ಜಂಕರ್ ಹೇಳಿದರೆ, ಮೂರು ಬ್ರಿಟಿಷರ ಸಾವು ಗ್ರಹಿಕೆಗೂ ಮೀರಿದ್ದಾಗಿದೆ. ಇದು ವಿಷಾದನೀಯ ಸಂಗತಿ ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಇದರ ಜೊತೆಗೆ ದಾಳಿಯನ್ನು ಖಂಡಿಸಿ ಇಸ್ರೇಲ್ನಲ್ಲಿನ ಬ್ರಿಟನ್ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಒಬ್ಬ ಪೋಲೆಂಡ್ ನಾಗರಿಕ ಸಾವಿಗೀಡಾಗಿದ್ದಕ್ಕೆ ಅಲ್ಲಿನ ಸರ್ಕಾರ ಇದನ್ನು ಅರಗಿಸಿಕೊಳ್ಳಲಾಗಲ್ಲ ಎಂದು ಟೀಕಿಸಿದೆ.
ಇದನ್ನೂ ಓದಿ: ಸಿರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಅಲ್ - ಖೈದಾ - ಸಂಯೋಜಿತ ಗುಂಪಿನ ಸಹ - ಸಂಸ್ಥಾಪಕ ಸಾವು - suicide bombing