ಡಬ್ಲಿನ್: ಸೈಮನ್ ಹ್ಯಾರಿಸ್ ಐರ್ಲೆಂಡ್ನ ನೂತನ ಪ್ರಧಾನಿಯಾಗಲಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಆಡಳಿತಾರೂಢ ಫೈನ್ ಗೇಲ್ ಪಕ್ಷದ ಹೊಸ ನಾಯಕನಾಗಿ ಆಯ್ಕೆಯಾಗಿರುವ ಸೈಮನ್ ಹ್ಯಾರಿಸ್ ಐರ್ಲೆಂಡ್ನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಲಿದ್ದಾರೆ. ಐರ್ಲೆಂಡ್ನ ಪ್ರಸ್ತುತ ಭಾರತೀಯ ಮೂಲದ ಪ್ರಧಾನಿ ಲಿಯೋ ವರದ್ಕರ್ ಅವರ ರಾಜೀನಾಮೆಯ ನಂತರ ಹೊಸ ಪ್ರಧಾನಿಯ ಆಯ್ಕೆ ಪ್ರಕ್ರಿಯೆ ನಡೆದಿದೆ.
ಲಿಯೋ ವರದ್ಕರ್ ಅವರ ಸ್ಥಾನಕ್ಕೆ ಭಾನುವಾರ ಪಕ್ಷದ ನಾಯಕನಾಗಿ ನೇಮಕಗೊಂಡಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಎಂದು 37 ವರ್ಷದ ಸೈಮನ್ ಹ್ಯಾರಿಸ್ ಹೇಳಿದ್ದಾರೆ. ಲಿಯೋ ವರದ್ಕರ್ ಪ್ರಧಾನಿ ಹುದ್ದೆಯಿಂದ ಬುಧವಾರ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾರೆ.
ಏಪ್ರಿಲ್ 9ರಂದು ಒಯಿರಾಚ್ಟಾಸ್ ಎಂದು ಕರೆಯಲ್ಪಡುವ ದೇಶದ ಸಂಸತ್ತಿನ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದಲ್ಲಿ ಫೈನ್ ಗೇಲ್ ಪಕ್ಷದ ಪಾಲುದಾರ ಪಕ್ಷಗಳ ಸದಸ್ಯರು ರಿಪಬ್ಲಿಕ್ ಆಫ್ ಐರ್ಲೆಂಡ್ನ ನೂತನ ಪ್ರಧಾನಿಯಾಗಿ ಹ್ಯಾರಿಸ್ ಅವರ ಪರವಾಗಿ ಮತ ಚಲಾಯಿಸಲಿದ್ದಾರೆ.
"ಪಕ್ಷದ ನಾಯಕತ್ವವನ್ನು ಭದ್ರಪಡಿಸುವಲ್ಲಿ ಹ್ಯಾರಿಸ್ ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ" ಎಂದು ಫೈನ್ ಗೇಲ್ ಪಕ್ಷದ ಉಪ ನಾಯಕ ಸೈಮನ್ ಕೋವೆನಿ ಹೇಳಿದರು.
"ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಮೂಲಕ ಪಕ್ಷದ ಸದಸ್ಯರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ" ಎಂದು ಹ್ಯಾರಿಸ್ ತಮ್ಮ ಮಧ್ಯ-ಬಲಪಂಥೀಯ ಪಕ್ಷದ ಸದಸ್ಯರಿಗೆ ಭರವಸೆ ನೀಡಿದರು. ಫೈನ್ ಗೇಲ್ ಪಕ್ಷವು ಕಾನೂನು ಮತ್ತು ಸುವ್ಯವಸ್ಥೆಯ ಪರವಾಗಿ ನಿಲ್ಲಲಿದೆ ಎಂದು ಅವರು ಒತ್ತಿಹೇಳಿದರು ಮತ್ತು ರಾಷ್ಟ್ರೀಯವಾದಿಗಳಿಂದ ಪಕ್ಷದ ಧ್ವಜವನ್ನು ಮರಳಿ ಪಡೆಯಲು ಬಯಸುವುದಾಗಿ ತಿಳಿಸಿದರು.
ಈ ಹಿಂದೆ ಶಿಕ್ಷಣ, ಸಂಶೋಧನೆ ಮತ್ತು ವಿಜ್ಞಾನ ಸಚಿವರಾಗಿದ್ದ ಹ್ಯಾರಿಸ್, ಐರ್ಲೆಂಡ್ನಲ್ಲಿನ ಕೋವಿಡ್ -19 ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ವಯಸ್ಕ ಜೀವನದ ಹೆಚ್ಚಿನ ಭಾಗವನ್ನು ಸಂಸತ್ತಿನಲ್ಲಿ ಕಳೆದಿದ್ದರೂ, ಹ್ಯಾರಿಸ್ ತಮ್ಮನ್ನು ತಾವು ಆಕಸ್ಮಿಕ ರಾಜಕಾರಣಿ ಎಂದು ಹೇಳಿಕೊಳ್ಳುತ್ತಾರೆ.
ಹಿಂದಿನ ಪ್ರಧಾನಿ ಲಿಯೋ ವರದ್ಕರ್ ತಮ್ಮ 38ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ ದೇಶದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದರು. ಪ್ರಧಾನಿ ಹುದ್ದೆಗೆ ಬದಲಿ ವ್ಯಕ್ತಿ ಆಯ್ಕೆಯಾದ ತಕ್ಷಣವೇ ತಾವು ಹುದ್ದೆಗೆ ರಾಜೀನಾಮೆ ನೀಡುವುದಾಗಿ ವರದ್ಕರ್ ಬುಧವಾರ ಅನಿರೀಕ್ಷಿತವಾಗಿ ಘೋಷಣೆ ಮಾಡಿದ್ದರು. ವರದ್ಕರ್ ಅವರು ತಾನು ಸಲಿಂಗಕಾಮಿ ಎಂದು ಬಹಿರಂಗವಾಗಿ ಹೇಳಿಕೊಂಡ ದೇಶದ ಮೊದಲ ಪ್ರಧಾನಿಯಾಗಿದ್ದಾರೆ.
ಇದನ್ನೂ ಓದಿ : ಅಲ್ ಶಿಫಾ ಆಸ್ಪತ್ರೆ ಮೇಲೆ ಮುಂದುವರಿದ ಇಸ್ರೇಲ್ ದಾಳಿ: 140 ಪ್ಯಾಲೆಸ್ಟೈನಿಯರ ಸಾವು - Gaza