ಕೀವ್: ಉಕ್ರೇನ್ ಮೇಲೆ ಸೋಮವಾರ ರಷ್ಯಾ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಬೃಹತ್ ಪ್ರಮಾಣದ ದಾಳಿಯನ್ನು ಆರಂಭಿಸಿದೆ. ಇಂಧನ ಮೂಲಸೌಕರ್ಯ ಘಟಕಗಳ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದಾಳಿಯು ಮಧ್ಯರಾತ್ರಿಯ ಸುಮಾರಿಗೆ ಪ್ರಾರಂಭವಾಗಿದ್ದು, ಮುಂಜಾನೆಯ ನಂತರವೂ ಮುಂದುವರಿದಿತ್ತು. ಕಳೆದ ಕೆಲ ವಾರಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.
ಉಕ್ರೇನ್ ವಾಯುಪಡೆಯ ಪ್ರಕಾರ, ರಷ್ಯಾದ ಡ್ರೋನ್ಗಳು ಅನೇಕ ಗುಂಪುಗಳಾಗಿ ಉಕ್ರೇನ್ನ ಪೂರ್ವ, ಉತ್ತರ, ದಕ್ಷಿಣ ಮತ್ತು ಮಧ್ಯದ ಪ್ರದೇಶಗಳ ಕಡೆಗೆ ಹಾರಿ ಬರುತ್ತಿವೆ. ಇವುಗಳ ಹಿಂದೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಲಾಗುತ್ತಿದೆ. ರಾಜಧಾನಿ ಕೈವ್ನಲ್ಲಿ ಸ್ಫೋಟದ ಸದ್ದುಗಳು ಕೇಳಿಸಿದ್ದು, ದಾಳಿಯಿಂದ ನಗರದಲ್ಲಿ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಷ್ಕೊ ಹೇಳಿದ್ದಾರೆ.
ಉಕ್ರೇನ್ನ ಮುಂಚೂಣಿ ಪ್ರದೇಶಗಳಾದ ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಡೊನೆಟ್ಸ್ಕ್ ಪ್ರದೇಶಗಳ ಮೇಲೆ ರಾತ್ರಿಯಿಡೀ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ತಿಳಿಸಿದೆ.
ಸಮಯ 0230 ಜಿಎಂಟಿ ಸುಮಾರಿಗೆ ಕೈವ್ ಸುತ್ತಮುತ್ತಲಿನ ಪ್ರದೇಶದ ಹತ್ತಿರದಲ್ಲಿ ಹಾರಿಬಂದ 10 ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದು ಕೈವ್ ಮಿಲಿಟರಿ ಆಡಳಿತದ ಮುಖ್ಯಸ್ಥ ಸೆರ್ಹಿ ಪೊಪ್ಕೊ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ತಿಳಿಸಿದ್ದಾರೆ.
ರಷ್ಯಾದ ಈ ದಾಳಿಯನ್ನು ಉಕ್ರೇನ್ನಲ್ಲಿ ಮೊದಲೇ ನಿರೀಕ್ಷಿಸಲಾಗಿತ್ತು. ಉಕ್ರೇನ್ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ರಷ್ಯಾ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಬಹುದು ಎಂದು ಯುಎಸ್ ರಾಯಭಾರ ಕಚೇರಿ ಕಳೆದ ವಾರ ಎಚ್ಚರಿಕೆ ನೀಡಿದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಯುದ್ಧ ಆರಂಭಿಸಿದೆ. ಆಗಿನಿಂದಲೂ ಎರಡೂ ದೇಶಗಳು ಪರಸ್ಪರ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿವೆ.
ಪತ್ರಕರ್ತರ ಸಾವು: ಉಕ್ರೇನ್ನ ಪೂರ್ವದ ಮುಂಚೂಣಿ ಗಡಿಯಿಂದ 20 ಕಿ.ಮೀ (13 ಮೈಲಿ) ದೂರದಲ್ಲಿರುವ ಕ್ರಾಮಟೋರ್ಸ್ಕ್ ನಲ್ಲಿರುವ ಹೋಟೆಲ್ ಒಂದರ ಶನಿವಾರ ರಾತ್ರಿ ರಷ್ಯಾ ನಡೆಸಿದ ದಾಳಿಯಲ್ಲಿ ತನ್ನ ಸುರಕ್ಷತಾ ಸಲಹೆಗಾರ ರಯಾನ್ ಇವಾನ್ಸ್ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ರಾಯಿಟರ್ಸ್ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ತಂಡದ ಇತರ ಮೂವರು ಸದಸ್ಯರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಇದನ್ನೂ ಓದಿ : ಫ್ರಾನ್ಸ್ನಲ್ಲಿ ಟೆಲಿಗ್ರಾಮ್ ಸ್ಥಾಪಕ ಡುರೊವ್ ಬಂಧನ: ಆರೋಪ ಸಾಬೀತಾದರೆ 20 ವರ್ಷ ಜೈಲು - Telegram founder Durov arrested