ಗಾಜಾ, ಪ್ಯಾಲೆಸ್ಟೈನ್: ಗಾಜಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮ ಸ್ಥಾಪಿಸುವ ಯಾವುದೇ ಒಪ್ಪಂದ ಅಥವಾ ಆಲೋಚನೆಗಳ ಬಗ್ಗೆ ಮುಕ್ತ ಮನಸು ಹೊಂದಿರುವುದಾಗಿ ಹಮಾಸ್ ಹೇಳಿದೆ. ಗಾಜಾದಲ್ಲಿನ ಜನರ ಸಂಕಟವನ್ನು ಕೊನೆಗೊಳಿಸುವ ಮತ್ತು ಶಾಶ್ವತ ಕದನ ವಿರಾಮವನ್ನು ಸ್ಥಾಪಿಸುವ ಯಾವುದೇ ಒಪ್ಪಂದ ಅಥವಾ ಆಲೋಚನೆಗಳಿಗೆ ಹಮಾಸ್ ಮುಕ್ತವಾಗಿದೆ ಎಂದು ಹಮಾಸ್ನ ಹಿರಿಯ ಅಧಿಕಾರಿ ಸಮಿ ಅಬು ಜುಹ್ರಿ ಮಂಗಳವಾರ ದೂರದರ್ಶನ ಭಾಷಣದಲ್ಲಿ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಎಲ್ಲ ಅಂಶಗಳು ಕದನವಿರಾಮ ಒಪ್ಪಂದದಲ್ಲಿರಬೇಕು: ಗಾಜಾ ಪಟ್ಟಿಯಿಂದ ಇಸ್ರೇಲಿ ಸೈನ್ಯವನ್ನು ಹಿಂತೆಗೆದುಕೊಳ್ಳುವುದು, ದಿಗ್ಬಂಧನ ತೆಗೆದುಹಾಕುವುದು ಮತ್ತು ಜನರಿಗೆ ಪರಿಹಾರ, ಬೆಂಬಲ ಮತ್ತು ಆಶ್ರಯವನ್ನು ಒದಗಿಸುವುದು, ಜೊತೆಗೆ ಪುನರ್ ನಿರ್ಮಾಣ ಮತ್ತು ಪ್ರಮುಖ ಕೈದಿಗಳ ವಿನಿಮಯ ಷರತ್ತುಗಳನ್ನು ಕದನ ವಿರಾಮ ಒಪ್ಪಂದ ಒಳಗೊಂಡಿರಬೇಕೆಂದು ಅಬು ಜುಹ್ರಿ ಹೇಳಿದರು.
ಕದನ ವಿರಾಮ ಮತ್ತು ಕೈದಿಗಳ ವಿನಿಮಯಕ್ಕೆ ಸಂಬಂಧಿಸಿದ ಹೊಸ ಪ್ರಸ್ತಾಪಗಳನ್ನು ಚರ್ಚಿಸಲು ಮಧ್ಯವರ್ತಿಗಳ ಮನವಿಗಳಿಗೆ ಹಮಾಸ್ ಸ್ಪಂದಿಸಿದೆ. ಈ ವಿಷಯದ ಬಗ್ಗೆ ತಮ್ಮ ಸಂಘಟನೆ ಈಗಾಗಲೇ ಕೆಲ ಸಭೆಗಳನ್ನು ನಡೆಸಿದೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಎರಡು ದಿನಗಳ ಕದನ ವಿರಾಮದ ಪ್ರಸ್ತಾಪ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತಾಹ್ ಅಲ್-ಸಿಸಿ ಅವರು ಗಾಜಾದಲ್ಲಿ ನಾಲ್ಕು ಇಸ್ರೇಲಿ ಒತ್ತೆಯಾಳುಗಳ ಬದಲಿಗೆ ಪ್ಯಾಲೆಸ್ಟೈನ್ ಕೈದಿಗಳ ವಿನಿಮಯ ಮಾಡಿಕೊಂಡು ಎರಡು ದಿನಗಳ ಕದನ ವಿರಾಮದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ಗಾಜಾ ಕದನ ವಿರಾಮ ಮಾತುಕತೆಗಳನ್ನು ಪುನರಾರಂಭಿಸುವ ಪ್ರಯತ್ನಗಳು ಮುಂದುವರಿಯುತ್ತಿರುವ ಮಧ್ಯೆ ಸಿಸಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ ಈಜಿಪ್ಟ್, ಕತಾರ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಾಜಾದಲ್ಲಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಕೆಲಸ ಮಾಡುತ್ತಿವೆ.
ಈಜಿಪ್ಟ್ ವಿದೇಶಾಂಗ ಸಚಿವ ಬದರ್ ಅಬ್ದೆಲಟ್ಟಿ ಮತ್ತು ಕತಾರ್ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರು ಗಾಜಾ ಪಟ್ಟಿ ಮತ್ತು ಲೆಬನಾನ್ ನಲ್ಲಿನ ಸಂಘರ್ಷಗಳನ್ನು ಕೊನೆಗೊಳಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸಿದರು. ದೂರವಾಣಿ ಸಂಭಾಷಣೆಯಲ್ಲಿ ಅಬ್ದೆಲಾಟ್ಟಿ ಮತ್ತು ಅಲ್ ಥಾನಿ ಗಾಜಾದಲ್ಲಿ ತಕ್ಷಣದಲ್ಲಿ ಕದನ ವಿರಾಮ ಏರ್ಪಡಿಸಲು ಮತ್ತು ಯುದ್ಧ ಪೀಡಿತ ಪ್ರದೇಶಕ್ಕೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ತಮ್ಮ ದೇಶಗಳ ಜಂಟಿ ಪ್ರಯತ್ನಗಳ ಬಗ್ಗೆ ಚರ್ಚಿಸಿದರು ಎಂದು ಈಜಿಪ್ಟ್ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಗಾಜಾ ಸಂಘರ್ಷ: 43 ಸಾವಿರ ದಾಟಿದ ಸಾವಿನ ಸಂಖ್ಯೆ, ಲಕ್ಷಕ್ಕೂ ಅಧಿಕ ಜನರಿಗೆ ಗಾಯ