ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ಸಾಗುತ್ತಿದೆ. ಈ ವೇಳೆ ನಡೆದ ಉಗ್ರರ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರೆ ಆರು ಮಂದಿ ಗಾಯಗೊಂಡಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಗ್ರಹಾ ಅಸ್ಲಾಮ್ ಮತದಾನ ಕೇಂದ್ರದ ಸಮೀಪ ಪೊಲೀಸ್ ವಾಹನದ ಮೇಲೆ ಬಾಂಬ್ ದಾಳಿ ನಡೆಯಿತು. ಈ ಘಟನೆಯಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಬಲೂಚಿಸ್ತಾನದಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಎನ್ಎ-49 ಅಟೊಕ್, ಪಿಎಂಎಲ್ ಮತ್ತು ಪಿಟಿಐ ಕಾರ್ಯಕರ್ತರ ನಡುವಿನ ಗಲಾಟೆಯಿಂದಾಗಿ ಎರಡು ಬೂತ್ನಲ್ಲಿ ಮತದಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಮತದಾನ ವಿಳಂಬವಾಗಿದೆ. ಸರ್ಕಾರಿ ಬಾಲಕರ ಹೈಸ್ಕೂಲ್ ಭಂಗಿ ಹಜ್ರೋದಲ್ಲಿ ನಡೆದ ಗಲಾಟೆಯಿಂದಾಗಿ ಐದು ಗಂಟೆಗಳಷ್ಟು ತಡವಾಗಿ ಮತದಾನಕ್ಕೆ ಚಾಲನೆ ನೀಡಲಾಗಿದೆ.
ಎನ್ಎ-19 ಟಪ್ಪಿ ಮತದಾನ ಕೇಂದ್ರಗಳನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ ಎಂದು ನ್ಯಾಷನಲ್ ಡೆಮೋಕ್ರಟಿಕ್ ಮೂವ್ಮೆಂಟ್(ಎನ್ಡಿಎಂ) ಅಧ್ಯಕ್ಷ ಮೊಹ್ಸಿನ್ ದವರ್ ತಿಳಿಸಿದರು. ಅಲ್ಲದೇ, ಉಗ್ರರು ಸ್ಥಳೀಯರಿಗೆ ಮತ್ತು ಮತದಾನ ಸಿಬ್ಬಂದಿಗೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ರಕ್ಷಣಾ ದೃಷ್ಟಿಯಿಂದ ದೇಶದೆಲ್ಲೆಡೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ನಡೆಯನ್ನು ವಿವಿಧ ರಾಜಕೀಯ ಪಕ್ಷಗಳು ಟೀಕಿಸಿದ್ದು, ಕ್ರಮವನ್ನು ಖಂಡಿಸಿದ್ದಾರೆ. ದೇಶದಲ್ಲಿ ಮೊಬೈಲ್ ಕರೆ ಮತ್ತು ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸೇವೆ ಸ್ಥಗಿತಗೊಳಿಸುವ ಮುಂಚೆ ಯಾವುದೇ ಸೂಚನೆ ನೀಡಿರಲಿಲ್ಲ. ಚುನಾವಣೆಗೆ ಮುನ್ನಾದಿನ ಮಾತನಾಡಿದ್ದ ಪಾಕಿಸ್ತಾನದ ಟೆಲಿಕಮ್ಯೂನಿಕೇಷನ್ ಅಥಾರಿಟಿ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದಿಲ್ಲ ಎಂದಿತ್ತು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಿಂದಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದ್ದಾರೆ. ಚುನಾವಣಾ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎರಡು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಪಾಕಿಸ್ತಾನ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
336 ಸದಸ್ಯ ಬಲದ ನ್ಯಾಷನಲ್ ಅಸೆಂಬ್ಲಿಯಲ್ಲಿ 265 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 90 ಸಾವಿರ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. 6,50,000 ಸೇನಾ ಮತ್ತು ಪೊಲೀಸರನ್ನು ಚುನಾವಣಾ ಭದ್ರತೆಗೆ ನಿಯೋಜಿಸಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ಇಂದು ಪಾಕಿಸ್ತಾನ ಸಂಸತ್ ಚುನಾವಣೆ: ಜೈಲಿಂದಲೇ ಪಕ್ಷ ಗೆಲ್ಲಿಸ್ತಾರಾ ಇಮ್ರಾನ್ ಖಾನ್?