ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆತ್ಮಾಹುತಿ ಬಾಂಬರ್ಗಳೂ ಸೇರಿದಂತೆ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದ ಓರ್ವ ಸೇರಿದಂತೆ ಒಂಬತ್ತು ಭಯೋತ್ಪಾದಕರನ್ನು ಪಾಕಿಸ್ತಾನ ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಸೇನೆ ಗುರುವಾರ ತಿಳಿಸಿದೆ. ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಗುಪ್ತಚರ ಆಧರಿತ ಕಾರ್ಯಾಚರಣೆ ನಡೆಸಿ ಇವರನ್ನು ಕೊಂದು ಹಾಕಲಾಗಿದೆ ಎಂದು ಎಂದು ಮಿಲಿಟರಿಯ ಮಾಧ್ಯಮ ವಿಭಾಗ, ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ತಿಳಿಸಿದೆ.
ಮೃತ ಭಯೋತ್ಪಾದಕರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಇರಬಹುದಾದ ಮತ್ತಷ್ಟು ಭಯೋತ್ಪಾದಕರನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.
ಇಸ್ಲಾಮಾಬಾದ್ ಮೂಲದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಸೆಕ್ಯುರಿಟಿ ಸ್ಟಡೀಸ್ (ಸಿಆರ್ಎಸ್ಎಸ್) ಬಿಡುಗಡೆ ಮಾಡಿದ ಮೂರನೇ ತ್ರೈಮಾಸಿಕ ವರದಿಯ ಪ್ರಕಾರ, ಭಯೋತ್ಪಾದಕರ ದಾಳಿಗಳಲ್ಲಿ ಈ ವರ್ಷದ ಮೂರು ತ್ರೈಮಾಸಿಕಗಳಲ್ಲಿ 1,534 ಜನ ಸಾವಿಗೀಡಾಗಿದ್ದು, ಇದು 2023ರ ಇಡೀ ವರ್ಷದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 1,523ಕ್ಕಿಂತ ಅಧಿಕವಾಗಿದೆ.
ಮೂರನೇ ತ್ರೈಮಾಸಿಕದಲ್ಲಿ ದಾಖಲಾದ 328 ಘಟನೆಗಳಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ಅಪರಾಧಿಗಳು ಸೇರಿದಂತೆ ಒಟ್ಟು 722 ಜನರು ಸಾವನ್ನಪ್ಪಿದ್ದಾರೆ ಮತ್ತು 615 ಜನರು ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನಖ್ವಾ ಪ್ರಾಂತ್ಯಗಳಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗಾಗಿ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ 60ಕ್ಕೂ ಹೆಚ್ಚು ಡೆಮಾಕ್ರಟಿಕ್ ಸಂಸದರು ಬುಧವಾರ ಅಧ್ಯಕ್ಷ ಜೋ ಬೈಡನ್ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನದ ಚುನಾವಣೆಗಳಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳು ನಡೆದಿರುವ ಬಗ್ಗೆಯೂ ಡೆಮಾಕ್ರಟಿಕ್ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಖಾನ್ ಆಗಸ್ಟ್ 2023ರಿಂದ ಜೈಲಿನಲ್ಲಿದ್ದಾರೆ. 2022ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದಾಗಿನಿಂದ ಇವರ ವಿರುದ್ಧ ಹತ್ತಾರು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ನಂತರ ಇವರ ಪಕ್ಷ ತೆಹ್ರೀಕ್ ಎ ಪಾಕಿಸ್ತಾನ್ ಪ್ರಸ್ತುತ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನಾ ಆಂದೋಲನವನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: ಶೇಖ್ ಹಸೀನಾ ಪಕ್ಷದ ವಿದ್ಯಾರ್ಥಿ ಸಂಘಟನೆ ನಿಷೇಧಿಸಿದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ