ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗುರುವಾರ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಚುನಾವಣಾ ಪ್ರಚಾರ ಅಂತ್ಯವಾಗಿದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಮುಕ್ತಾಯಗೊಳಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ ಬೆನ್ನಲ್ಲೇ ಪ್ರಚಾರ ಕಾರ್ಯ ಮಂಗಳವಾರ ಮಧ್ಯರಾತ್ರಿ ಮುಗಿದಿದೆ.
ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವ ಯಾವುದೇ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷವು ನಿಗದಿತ ಸಮಯ ಮತ್ತು ದಿನಾಂಕದ ನಂತರ ಯಾವುದೇ ಸಭೆ, ಮೆರವಣಿಗೆ, ಕಾರ್ನರ್ ಸಭೆ ಅಥವಾ ಯಾವುದೇ ಕಾರ್ಯಕ್ರಮ ಏರ್ಪಡಿಸುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಚುನಾವಣೆಗಳು ನಡೆಯುವವರೆಗೆ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮತದಾನ ಸಮೀಕ್ಷೆಗಳ ಪ್ರಕಟಣೆ ಮತ್ತು ಪ್ರಸಾರವನ್ನು ನಿಷೇಧಿಸಲಾಗಿದೆ. ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಕಾರ್ನರ್ ಸಭೆಗಳು ಮತ್ತು ಮನೆ-ಮನೆ ಪ್ರಚಾರದ ಮೂಲಕ ಗರಿಷ್ಠ ಸಾರ್ವಜನಿಕ ಬೆಂಬಲ ಪಡೆಯಲು ಪ್ರಯತ್ನ ಮಾಡಿದರು.
ಪಾಕಿಸ್ತಾನದಲ್ಲಿ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಲು ಫೆಬ್ರವರಿ 8ರಂದು ಚುನಾವಣೆಗೆ ನಡೆಯಲಿದೆ. ಸಂಸದೀಯ ಪ್ರಜಾಪ್ರಭುತ್ವವಾಗಿರುವ ಪಾಕಿಸ್ತಾನವು ಫೆಡರಲ್ ಶಾಸಕಾಂಗ ಅಥವಾ ಹೌಸ್ ಅಸೆಂಬ್ಲಿ (ಸಂಸತ್ತು) ಮತ್ತು ನಾಲ್ಕು ರಾಜ್ಯ ವಿಧಾನಸಭೆಗಳ ಚುನಾವಣೆಗೆ ಸಜ್ಜಾಗಿದೆ. ಫೆಡರಲ್ ಶಾಸಕಾಂಗ ಚುನಾವಣೆಗೆ 5,121 ಅಭ್ಯರ್ಥಿಗಳನ್ನು ಒಳಗೊಂಡ ಒಟ್ಟು 44 ರಾಜಕೀಯ ಪಕ್ಷಗಳು ಸ್ಪರ್ಧಿಸುತ್ತಿದ್ದರೆ, ರಾಜ್ಯ ವಿಧಾನಸಭೆ ಚುನಾವಣೆಗಳಿಗಾಗಿ 12,695 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ದೇಶಾದ್ಯಂತ 90,675 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತದಾನ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆಯೊಂದಿಗೆ ಮತದಾನದ ದಿನಕ್ಕಾಗಿ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿವೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಹೇಳಿದೆ.
241 ಮಿಲಿಯನ್ ಜನಸಂಖ್ಯೆಯ ಪೈಕಿ ಒಟ್ಟು 128 ಮಿಲಿಯನ್ ಜನ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಆಗಸ್ಟ್ 9, 2023 ರಂದು ಆಗಿನ ಪಾಕಿಸ್ತಾನದ ಅಧ್ಯಕ್ಷರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದರು. ಅಕ್ಟೋಬರ್ 21, 2023ರಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ನಾಲ್ಕು ವರ್ಷಗಳ ನಂತರ ದೇಶಕ್ಕೆ ಮರಳಿದರು. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್), ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಎಂಬ ಮೂರು ಪ್ರಮುಖ ಪಕ್ಷಗಳು ಪಾಕಿಸ್ತಾನದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿವೆ.
ಇದನ್ನೂ ಓದಿ: ಹಮಾಸ್ ವಶದಲ್ಲಿದ್ದ 31 ಇಸ್ರೇಲಿಗರ ಸಾವು: ಕದನ ವಿರಾಮ ಸನ್ನಿಹಿತ ಎಂದ ಕತಾರ್