ಲಾಹೋರ್, ಪಾಕಿಸ್ತಾನ: ಪಾಕಿಸ್ತಾನದಲ್ಲಿ ಬಹುತೇಕ ಚುನಾವಣಾ ಫಲಿತಾಂಶಗಳು ಹೊರಬಿದ್ದಿವೆ. ನೆರೆಯ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಆದರೂ ಈ ಮಧ್ಯೆ, ಪಿಎಂಎಲ್ -ಎನ್ ಪಕ್ಷದ ನಾಯಕ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಬೆಂಬಲಿಗರನ್ನು ಉದ್ದೇಶಿಸಿ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.
ನಮ್ಮ ಪಕ್ಷವು ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಪಡೆದಿದೆ. ಹೀಗಾಗಿ ಬೇರೆ ಪಕ್ಷಗಳೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಲಿದ್ದೇವೆ. ಸಂಕಷ್ಟದಲ್ಲಿರುವ ಪಾಕಿಸ್ತಾನವನ್ನು ಹೊರತರಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುವುದಾಗಿ ನವಾಜ್ ಹೇಳಿದ್ದಾರೆ. ಇದರೊಂದಿಗೆ, ವಿಶ್ವದೊಂದಿಗಿನ ಪಾಕಿಸ್ತಾನದ ಸಂಬಂಧವನ್ನು ಸುಧಾರಿಸುವ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುತ್ತೇವೆ: ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನಾಯಕ ನವಾಜ್ ಷರೀಫ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ನಾವು ನಿಮ್ಮೆಲ್ಲರನ್ನು ಅಭಿನಂದಿಸುತ್ತೇವೆ. ಪ್ರತಿಯೊಂದು ಪಕ್ಷಕ್ಕೂ ನೀಡಿದ ಜನಾದೇಶವನ್ನು ನಾವು ಗೌರವಿಸುತ್ತೇವೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನವನ್ನು ಬಿಕ್ಕಟ್ಟಿನಿಂದ ಹೊರತರಲು, ನಮ್ಮೊಂದಿಗೆ ಕೈ ಜೋಡಿಸುವಂತೆ ಅವರೆಲ್ಲರನ್ನೂ ಆಹ್ವಾನಿಸುತ್ತೇವೆ. ಪ್ರಪಂಚದೊಂದಿಗಿನ ನಮ್ಮ ಸಂಬಂಧಗಳು ಸುಧಾರಿಸಬೇಕೆಂದು ನಾವು ಬಯಸುತ್ತೇವೆ. ನಾವು ಅವರೊಂದಿಗೆ ನಮ್ಮ ಸಂಬಂಧವನ್ನು ಸುಧಾರಿಸುತ್ತೇವೆ ಮತ್ತು ಅವರೊಂದಿಗೆ ನಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ನವಾಜ್ ಷರೀಫ್ ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳು ಸಂಪರ್ಕದಲ್ಲಿದ್ದಾರೆ: 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಶಾಲಿಯಾಗುವ ಪಕ್ಷೇತರ ಅಭ್ಯರ್ಥಿಗಳು ಪಕ್ಷದ ಸಂಪರ್ಕದಲ್ಲಿದ್ದಾರೆ. ಪಕ್ಷೇತರು ನಮ್ಮನ್ನು ಸಂಪರ್ಕಿಸಿದ್ದಾರೆ ಮತ್ತು ಅವರು ಸಂವಿಧಾನದ ಪ್ರಕಾರ ಮುಂದಿನ 72 ಗಂಟೆಗಳಲ್ಲಿ ಯಾವುದೇ ಪಕ್ಷಕ್ಕೆ ಸೇರಬಹುದಾಗಿದೆ ಎಂದು ಪಿಎಂಎಲ್-ಎನ್ ನಾಯಕ ಇಶಾಕ್ ದಾರ್ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, PPP ಸಹ-ಅಧ್ಯಕ್ಷ ಜರ್ದಾರಿ ಅವರು ಲಾಹೋರ್ ತಲುಪಿದ್ದಾರೆ ಮತ್ತು ಸರ್ಕಾರ ರಚನೆಗೆ ಸಂಬಂಧಿಸಿದಂತೆ PML-N ನಾಯಕತ್ವವನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಉತ್ತಮ ಸಂಬಂಧ ಹೊಂದಬೇಕು: ಎಲ್ಲರೂ ಸೌಹಾರ್ದತೆಯಿಂದ ಕುಳಿತು ಪಾಕಿಸ್ತಾನವನ್ನು ಸಂಕಷ್ಟದಿಂದ ಹೊರತರಬೇಕಾಗಿದೆ. ಇಮ್ರಾನ್ ಖಾನ್ ಹೆಸರನ್ನು ತೆಗೆದುಕೊಳ್ಳದೆ, ಪಾಕಿಸ್ತಾನವು ಈ ಹೋರಾಟವನ್ನು ಸಹಿಸುವುದಿಲ್ಲ ಎಂದು ಹೋರಾಟದ ಮನೋಭಾವದಲ್ಲಿರುವವರಿಗೆ ನಾನು ಹೇಳಲು ಬಯಸುತ್ತೇನೆ. ಪಾಕಿಸ್ತಾನಕ್ಕೆ ಕನಿಷ್ಠ 10 ವರ್ಷಗಳ ಕಾಲ ಸ್ಥಿರತೆಯ ಅಗತ್ಯವಿದೆ. ಏಕೆಂದರೆ ಅದು ಪಾಕಿಸ್ತಾನಿಗಳ ಜೀವನದ ವಿಷಯವಾಗಿದೆ. ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಳ್ಳಲು ಬಯಸುವುದಾಗಿ ಷರೀಫ್ ಈ ಇದೇ ವೇಳೆ ಹೇಳಿದರು.
ಮೈತ್ರಿ ಜವಾಬ್ದಾರಿ ಶೆಹಬಾಜ್ಗೆ ನೀಡಲಾಗಿದೆ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಭಾಷಣದಲ್ಲಿ, ನಮಗೆ ಸ್ವಂತವಾಗಿ ಸರ್ಕಾರ ರಚಿಸಲು ಬಹುಮತವಿಲ್ಲ. ಹೀಗಾಗಿ ಇತರ ಪಕ್ಷಗಳನ್ನು ಒಗ್ಗೂಡಿ ಸರ್ಕಾರ ರಚಿಸಲು ಆಹ್ವಾನಿಸುತ್ತೇವೆ. ಆಸಿಫ್ ಜರ್ದಾರಿ, ಫಜಲ್-ಉರ್-ರೆಹಮಾನ್, ಎಂಕ್ಯೂಎಂ, ಡಾ. ಸಿದ್ದಿಕಿ ಅವರನ್ನು ಭೇಟಿ ಮಾಡಿ ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯು ನಾವು ಒಟ್ಟಾಗಿ ದೇಶವನ್ನು ಬಿಕ್ಕಟ್ಟಿನಿಂದ ಹೊರತರಬೇಕೆಂದನ್ನು ಬಯಸುತ್ತದೆ ಎಂದು ಹೇಳಲು ನಾನು ಶೆಹಬಾಜ್ ಷರೀಫ್‌ಗೆ ಕೆಲಸವನ್ನು ವಹಿಸಿದ್ದೇನೆ ಎಂದು ಷರೀಫ್ ಹೇಳಿದರು.
ನಾವು ಮತ್ತೆ ಚುನಾವಣೆ ನಡೆಸಲು ಸಾಧ್ಯವಿಲ್ಲ: ನಾವು ಮತ್ತೆ ಮತ್ತೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ನಿನ್ನೆ ನಾವೆಲ್ಲ ಒಟ್ಟಿಗೆ ಕುಳಿತಿದ್ದೆವು. ಆದರೆ ಫಲಿತಾಂಶ ಹೊರಬೀಳಲಿಲ್ಲ. ಈ ಬಿಕ್ಕಟ್ಟಿನಿಂದ ಪಾಕಿಸ್ತಾನವನ್ನು ಹೊರತರುವಲ್ಲಿ ಈ ದೇಶದ ಎಲ್ಲಾ ಸಂಸ್ಥೆಗಳು ಒಟ್ಟಾಗಿ ಸಕಾರಾತ್ಮಕ ಪಾತ್ರವನ್ನು ವಹಿಸಬೇಕು. ಚುನಾವಣಾ ಆಯೋಗದ ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ 265 ಕ್ಷೇತ್ರಗಳ ಪೈಕಿ 224 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಖಾನ್ ಅವರ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 92 ಸ್ಥಾನಗಳನ್ನು ಗೆದ್ದರೆ, ಪಿಎಂಎಲ್-ಎನ್ 63 ಸ್ಥಾನಗಳನ್ನು ಮತ್ತು ಪಿಪಿಪಿ 50 ಸ್ಥಾನಗಳನ್ನು ಗೆದ್ದಿದೆ. ಸಣ್ಣ ಪಕ್ಷಗಳು 19 ಸ್ಥಾನಗಳಲ್ಲಿ ಗೆಲುವು ಪಡೆದಿವೆ. ದೇಶದಲ್ಲಿ ಹೊಸ ಸರ್ಕಾರವನ್ನು ರಚಿಸಲು, ಯಾವುದೇ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳಲ್ಲಿ 133 ಸ್ಥಾನಗಳನ್ನು ಗೆಲ್ಲಬೇಕಾಗಿದೆ.
ಮೈತ್ರಿ ನಿರಾಕರಿಸಿದ ಪಿಟಿಐ : ಇಮ್ರಾನ್ ಖಾನ್ ಅವರ ಪಕ್ಷದ ಪಿಟಿಐ ಅಧ್ಯಕ್ಷ ಬ್ಯಾರಿಸ್ಟರ್ ಗೌಹರ್ ಖಾನ್ ಅವರು ಪಿಪಿಪಿ ಮತ್ತು ಪಿಎಂಎಲ್-ಎನ್ ಜೊತೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ತಮ್ಮ ಪಕ್ಷವು ಫೆಡರಲ್ ಸರ್ಕಾರವನ್ನು ಸ್ವಂತವಾಗಿ ರಚಿಸುವ ಸ್ಥಿತಿಯಲ್ಲಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷವು 150 ಸ್ಥಾನಗಳನ್ನು ಗೆಲ್ಲುತ್ತೆ ಮತ್ತು ಕೇಂದ್ರದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಿದೆ. ಅಷ್ಟೇ ಅಲ್ಲ ಕೇಂದ್ರ ಮತ್ತು ಪಂಜಾಬ್‌ನಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎಂದು ಗೌಹರ್ ಖಾನ್ ಹೇಳಿದ್ದಾರೆ.
ಓದ: ಇಮ್ರಾನ್ ಖಾನ್ ಪಕ್ಷದ ಅಭ್ಯರ್ಥಿ ಎದುರು ನವಾಜ್ ಷರೀಫ್‌ಗೆ ಸೋಲು: ವರದಿ