ಟೆಲ್ ಅವಿವ್: ಗಾಜಾದಲ್ಲಿ ಶುಕ್ರವಾರ ನಡೆದ ಹಿಂಸಾತ್ಮಕ ಘಟನೆಯಲ್ಲಿ 70ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ವರದಿ ಪ್ರಕಾರ, ಇಸ್ರೇಲಿ ಅಧಿಕಾರಿಗಳು "ಯೋಜಿತ ಹತ್ಯಾಕಾಂಡ"ದಲ್ಲಿ ತೊಡಗಿದ್ದಾರೆ ಎಂದು ಹಮಾಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವು ನೋವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಹಮಾಸ್ ಸರ್ಕಾರಿ ಮಾಧ್ಯಮ ಕಚೇರಿಯ ಜನರಲ್ ಡೈರೆಕ್ಟರ್ ಇಸ್ಮಾಯಿಲ್ ಅಲ್-ತವಾಬ್ತಾ, ಇಸ್ರೇಲಿ ಮಿಲಿಟರಿಯು ಪೂರ್ವ ಗಾಜಾದಲ್ಲಿ ಸಾವಿರಾರು ಪ್ಯಾಲೆಸ್ಟೀನಿಯರು ಪಶ್ಚಿಮ ಮತ್ತು ದಕ್ಷಿಣದ ನೆರೆಹೊರೆ ಪ್ರದೇಶಗಳಿಗೆ ತೆರಳಲು ನಿರ್ದೇಶಿಸಿದೆ. ಆ ನಂತರ, ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ತಲ್ ಅಲ್-ಹವಾ ಪ್ರದೇಶದಿಂದ ರಕ್ಷಣಾ ಸಿಬ್ಬಂದಿ 70 ಶವಗಳನ್ನು ಹೊರತೆಗೆದಿದ್ದಾರೆ. ಇನ್ನೂ, ಸರಿ-ಸುಮಾರು 50 ಜನರು ಪತ್ತೆಯಾಗಿಲ್ಲ ಎಂದು ಇಸ್ಮಾಯಿಲ್ ಅಲ್-ತವಾಬ್ತಾ ತಿಳಿಸಿದ್ದಾರೆ.
"ಕೆಲ ಸ್ಥಳಾಂತರಗೊಂಡ ಜನರು ಬಿಳಿ ಧ್ವಜಗಳನ್ನು ಹಿಡಿದು, 'ನಾವು ಹೋರಾಟಗಾರರಲ್ಲ, ನಾವು ಸ್ಥಳಾಂತರಗೊಂಡಿದ್ದೇವೆ' ಎಂದು ಹೇಳಿದ್ದಾರೆ. ಅದಾಗ್ಯೂ ಇಸ್ರೇಲಿ ಸೇನೆಯು ಈ ಸ್ಥಳಾಂತರಗೊಂಡ ಜನರನ್ನು ಕೊಂದಿದೆ" ಎಂದು ಇಸ್ಮಾಯಿಲ್ ಅಲ್-ತವಾಬ್ತಾ ತಿಳಿಸಿದ್ದಾರೆ. ಜೊತೆಗೆ, "ಇಸ್ರೇಲಿ ಸೇನೆಯು ತಾಲ್ ಅಲ್-ಹವಾದಲ್ಲಿ ಹತ್ಯಾಕಾಂಡ ನಡೆಸಲು ಯೋಜಿಸುತ್ತಿತ್ತು" ಎಂದು ಆರೋಪಿಸಿದ್ದಾರೆ.
ಪ್ಯಾಲೆಸ್ಟೀನಿಯರ ವಿರುದ್ಧ ಇಸ್ರೇಲ್ ಯುದ್ಧವನ್ನು ಕೊನೆಗೊಳಿಸುವಂತೆ ಒತ್ತಾಯಿಸಲು ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು. ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ಅವರು ಗಾಜಾ ನಗರದಲ್ಲಿನ ಯುದ್ಧವನ್ನು ಖಂಡಿಸಿ, ನಾಗರಿಕರ ಮೇಲಿನ ಮತ್ತೊಂದು ದುರಂತಕ್ಕಿದು ಉದಾಹರಣೆ ಎಂದು ಉಲ್ಲೇಖಿಸಿದ್ದಾರೆ.
ಈ ಘಟನೆಗಳು ಗಾಜಾದಲ್ಲಿ ಜೀವಹಾನಿ ಮತ್ತು ಜನರ ಸ್ಥಳಾಂತರಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ಕಳೆದ ದಿನದ ಹಿಂಸಾಚಾರ ಘಟನೆಯಲ್ಲಿ ಸಾವಿನ ಸಂಖ್ಯೆ 70ಕ್ಕೇರಿದೆ, ಜೊತೆಗೆ ಅನೇಕರು ಗಾಯಗೊಂಡಿದ್ದಾರೆ.
2023ರ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲಿ ಗಡಿಯಲ್ಲಿ ಹಮಾಸ್ ದಾಳಿ ನಡೆಸಿದ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದಾಳಿ ಪ್ರಾರಂಭಿಸಿತು. ಇಸ್ರೇಲ್ ಮೇಲಿನ ದಾಳಿಯಲ್ಲಿ ಸರಿಸುಮಾರು 1,200 ಇಸ್ರೇಲಿಗರು ಸಾವಿಗೀಡಾಗಿದ್ದರು. ಸುಮಾರು 250 ಜನರನ್ನು ಹಮಾಸ್ ಉಗ್ರರು ಒತ್ತೆಯಾಳುಗಳಾಗಿ ಅಪಹರಿಸಿಕೊಂಡು ಹೋಗಿದ್ದರು. ಆ ನಂತರ ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಇಸ್ರೇಸ್ ಪಡೆಗಳ ನಡುವೆ ಯುದ್ಧ ಆರಂಭವಾಗಿತ್ತು. ಗಾಜಾ ನಿವಾಸಿಗಳು ಆಶ್ರಯ, ಆಹಾರ, ಔಷಧಿ ಮತ್ತು ಶುದ್ಧ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.