ಢಾಕಾ(ಬಾಂಗ್ಲಾದೇಶ): "ಹಿಂಸೆ ನಮ್ಮನ್ನೆಲ್ಲ ಹಾಳು ಮಾಡುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ದೇಶ ಕಟ್ಟೋಣ. ಮುಂದಿನ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿವೆ. ದಯವಿಟ್ಟು ಎಲ್ಲರೂ ಶಾಂತರಾಗಿರಿ" ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ನೊಬೆಲ್ ಶಾಂತಿ ಪುರಸ್ಕೃತ ಮುಹಮ್ಮದ್ ಯೂನಸ್ ಬುಧವಾರ ಕರೆ ನೀಡಿದ್ದಾರೆ.
ಯುರೋಪ್ನಲ್ಲಿರುವ ಅವರು ಬಾಂಗ್ಲಾದೇಶಕ್ಕೆ ಬರುವುದಕ್ಕೂ ಮೊದಲು ದೇಶದ ಜನರಿಗೆ ಸಂದೇಶ ರವಾನಿಸಿದ್ದಾರೆ.
"ರಾಷ್ಟ್ರದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಶೇಕ್ ಹಸೀನಾ ಅವರ ಆಡಳಿತ ಕೊನೆಯಾಗಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ದೇಶವನ್ನು ನಿರ್ಮಾಣ ಮಾಡೋಣ. ಜನರು ಹಿಂಸೆಯನ್ನು ಬಿಟ್ಟು ಶಾಂತರಾಗಿ. ರಾಷ್ಟ್ರ ನಿರ್ಮಾಣದ ಕಡೆಗೆ ಗಮನ ಹರಿಸೋಣ" ಎಂದು ಕೋರಿದ್ದಾರೆ.
"ದಯವಿಟ್ಟು ಎಲ್ಲಾ ರೀತಿಯ ಹಿಂಸಾಚಾರದಿಂದ ದೂರವಿರಿ. ಶಾಂತರಾಗಿರಿ ಮತ್ತು ದೇಶವನ್ನು ಕಟ್ಟಲು ಸಿದ್ಧರಾಗಿ. ಹಿಂಸೆಯ ಹಾದಿ ಹಿಡಿದರೆ ಎಲ್ಲವೂ ನಾಶವಾಗುತ್ತದೆ. ಇದು ನಮ್ಮ ಸುಂದರ ದೇಶ. ಸಾಕಷ್ಟು ಅವಕಾಶಗಳನ್ನು ಹೊಂದಿದೆ. ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಇದನ್ನು ನಾವು ರಕ್ಷಿಸಬೇಕು" ಎಂದು ಹೇಳಿದ್ದಾರೆ.
ಈ ಬಂಡಾಯ ನಮಗೆ ಸಿಕ್ಕ ಎರಡನೇ ದೊಡ್ಡ (ಬಾಂಗ್ಲಾ ವಿಮೋಚನಾ ಹೋರಾಟ) ಗೆಲುವಾಗಿದೆ. ಇದರ ನೇತೃತ್ವದ ವಹಿಸಿದ ವಿದ್ಯಾರ್ಥಿಗಳು ಮತ್ತು ಅವರಿಗೆ ಬೆಂಬಲ ನೀಡಿದ ಜನರಿಗೆ ಅಭಿನಂದನೆ ಸಲ್ಲಿಸುವೆ. ಬೇರೆಯವರು ಮಾಡಿದ ತಪ್ಪುಗಳನ್ನು ನಾವು ಮಾಡಕೂಡದು. ಈ ಗೆಲುವನ್ನು ನಾವು ಸಂಭ್ರಮಿಸುವುದರ ಜೊತೆಗೆ, ರಾಷ್ಟ್ರ ನಿರ್ಮಾಣಕ್ಕೆ ಸಮರ್ಥವಾಗಿ ಬಳಸಿಕೊಳ್ಳೋಣ ಎಂದು ಕರೆ ನೀಡಿದ್ದಾರೆ.
ತ್ವರಿತ ಹೊಸದಾಗಿ ಚುನಾವಣೆ: ಕೆಲವೇ ತಿಂಗಳಲ್ಲಿ ಹೊಸದಾಗಿ ಚುನಾವಣೆ ನಡೆಸೋಣ. ಜನರು ತಮ್ಮ ಆಡಳಿತವನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು. ದೇಶದಲ್ಲಿ ಭಯರಹಿತ ಮತ್ತು ಪ್ರಜಾಪ್ರಭುತ್ವದ ಚುನಾವಣೆಗಳು ನಡೆಯಬೇಕು. ಹೀಗಾಗಿ ತ್ವರಿತವಾಗಿ ರಾಷ್ಟ್ರೀಯ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನಸ್ ಅವರ ವಿರುದ್ಧ ಹಲವು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಇದೇ ವರ್ಷದ ಜನವರಿಯಲ್ಲಿ ಯೂನಸ್ ಮತ್ತು ಅವರ ಕಂಪನಿಯ ಮೂವರು ಸಿಬ್ಬಂದಿಯ ಮೇಲೆ ಗಂಭೀರ ಆರೋಪ ಹೊರಿಸಿ 6 ತಿಂಗಳು ಜೈಲಿಗೆ ಕಳುಹಿಸಿದ್ದರು. ಸದ್ಯ ಅವರು ಯುರೋಪ್ನಲ್ಲಿ ವಾಸವಾಗಿದ್ದಾರೆ. ಗುರುವಾರ ಬಾಂಗ್ಲಾದೇಶಕ್ಕೆ ವಾಪಸ್ ಆಗಲಿದ್ದಾರೆ.
15 ವರ್ಷಗಳಿಂದ ದೇಶದ ಆಡಳಿತ ನಡೆಸುತ್ತಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ವಿದ್ಯಾರ್ಥಿಗಳ ದಂಗೆಗೆ ಬೆದರಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದ ಪಲಾಯನವಾಗಿ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಳಿಕ ಹೋರಾಟಗಾರರು 84 ವರ್ಷದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಲು ಒತ್ತಾಯಿಸಿದರು. ರಾಷ್ಟ್ರಪತಿಗಳು ಯೂನಸ್ ಅವರನ್ನು ಮುಂದಿನ ಸರ್ಕಾರದ ಮುಖ್ಯಸ್ಥರಾಗಿ ಘೋಷಿಸಿದ್ದಾರೆ.