ನ್ಯೂಯಾರ್ಕ್: ಬಿಲ್ಗೇಟ್ಸ್ ಜೊತೆ ವಿಚ್ಛೇದನ ಪಡೆದು ಮೂರು ವರ್ಷದ ಬಳಿಕ ಮಿಲಿಂಡಾ ಫ್ರೆಂಚ್ ಗೇಟ್ಸ್ ಅವರು ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್ನ ಸಹ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಶ್ವದ ಬಿಲಿಯನೇರ್ ಉದ್ಯಮಿ ಬಿಲ್ ಗೇಟ್ಸ್ 20 ವರ್ಷಗಳ ಹಿಂದೆ ಪತ್ನಿ ಮಿಲಿಂಡಾ ಜೊತೆ ಸೇರಿ ವಿಶ್ವದ ಅತೀ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆ ಸ್ಥಾಪಿಸಿದ್ದರು. ಈ ಮೂಲಕ ವಿವಿಧ ದೇಶಗಳಲ್ಲಿ ಸಾಮಾಜಿಕ ಕಾರ್ಯ ನಿರ್ವಹಿಸಿದ್ದಾರೆ.
"ಬಿಲ್ ಮತ್ತು ನಾನು ಒಟ್ಟಾಗಿ ನಿರ್ಮಿಸಿದ ಸಂಸ್ಥೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇದರೊಂದಿಗೆ ನಾವು ಜಗತ್ತಿನೆಲ್ಲೆಡೆ ಅಸಾಮಾನತೆ ಪರಿಹಾರ ಸೇರಿದಂತೆ ಹಲವು ಅದ್ಭುತ ಕೆಲಸಗಳನ್ನು ಮಾಡಿದ್ದೇವೆ" ಎಂದು ಮಿಲಿಂಡಾ ತಿಳಿಸಿದ್ದಾರೆ. ಇದೇ ವೇಳೆ, ಫೌಂಡೇಷನ್ ಸಿಇಒ ಮಾರ್ಕ್ ಸುಜಾಮ್ಯಾನ್ ಅವರನ್ನು ಶ್ಲಾಘಿಸಿದ್ದಾರೆ.
2021ರ ಮೇ ತಿಂಗಳಲ್ಲಿ ಈ ದಂಪತಿ ವಿಚ್ಛೇದನ ಘೋಷಿಸಿದ ಬಳಿಕ ಫೌಂಡೇಷನ್ ಮಂಡಳಿಯ ಟ್ರಸ್ಟಿಗಳನ್ನು ಗಮನಾರ್ಹ ಪ್ರಮಾಣದಲ್ಲಿ ವಿಸ್ತರಿಸಲಾಗಿದೆ.
ಈಗಾಗಲೇ ಮಿಲಿಂಡಾ, ಪಿವೋಟಲ್ ವೆಂಚರ್ಸ್ ಸಂಸ್ಥೆಯಲ್ಲಿ ಹೂಡಿಕೆ ಮತ್ತು ಸಮಾಜಸೇವೆ ನಡೆಸುತ್ತಿದ್ದಾರೆ. ಇದು ಲಾಭರಹಿತ ಸಂಸ್ಥೆಯಲ್ಲ.
ಮಿಲಿಂಡಾ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್, ಸಂಸ್ಥೆಯಲ್ಲಿ ಫ್ರೆಂಚ್ ಗೇಟ್ಸ್ ಅವರ ನಿರ್ಣಾಯಕ ಕೊಡುಗೆಗಳಿಗೆ ಧನ್ಯವಾದ. ಆಕೆ ಸಂಸ್ಥೆ ತೊರೆಯುತ್ತಿರುವುದು ಬೇಸರದ ವಿಷಯ. ಆದರೆ, ಭವಿಷ್ಯದಲ್ಲಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ದೊಡ್ಡ ಪರಿಣಾಮ ಬೀರಲಿದ್ದಾರೆ ಎಂದು ತಿಳಿಸಿದ್ದಾರೆ.
ಮಿಲಿಂಡಾ ನಿರ್ಗಮನದ ಹಿನ್ನೆಲೆಯಲ್ಲಿ ಫೌಂಡೇಷನ್ ಹೆಸರು ಬದಲಾಯಿಸಲಿದ್ದು, ಕೇವಲ ಗೇಟ್ಸ್ ಫೌಂಡೇಷನ್ ಎಂದು ಇರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಫೌಂಡೇಷನ್ನಲ್ಲಿ ಅವರು ಮಹಿಳೆಯರು ಮತ್ತು ಕುಟುಂಬಗಳ ಭವಿಷ್ಯ ಕೇಂದ್ರೀಕರಿಸಿ ಕೆಲಸಗಳಿಗೆ ಬದ್ಧತೆ ತೋರುವುದಾಗಿ ತಿಳಿಸಿದ್ದರು. ಇದೀಗ ಸಂಸ್ಥೆ ತೊರೆದಿದ್ದು ಗೇಟ್ಸ್ ಅವರೊಂದಿಗೆ ಒಪ್ಪಂದದ ಭಾಗವಾಗಿ 12.5 ಬಿಲಿಯನ್ ಡಾಲರ್ ಪಡೆಯಲಿದ್ದಾರೆ. ಈ ಹಣವನ್ನು ಗೇಟ್ಸ್ ವೈಯಕ್ತಿಕ ಹಣದಿಂದ ನೀಡಲಿದ್ದು, ಫೌಂಡೇಷನ್ ದತ್ತಿಯಿಂದ ನೀಡುವುದಿಲ್ಲ ಎಂದು ಹೇಳಿದ್ದಾರೆ.(ಪಿಟಿಐ)
ಇದನ್ನೂ ಓದಿ: ಬಿಲ್ ಗೇಟ್ಸ್ ಮೆಚ್ಚಿನ ಭಾರತೀಯ ಸಿನಿಮಾ ಯಾವುದು ಗೊತ್ತಾ?