ಹೈದರಾಬಾದ್: ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮುಂದುವರೆದಿದ್ದು, ಸೋಮವಾರ ತಡರಾತ್ರಿ ಗಾಜಾಪಟ್ಟಿಯಲ್ಲಿ ಮತ್ತೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ರೀಮ್ ಅಬು ಹಯಾಹ್ ಎಂಬ ಮೂರು ತಿಂಗಳ ಕೂಸನ್ನು ಹೊರತುಪಡಿಸಿ, ಕುಟುಂಬ ಸದಸ್ಯರೆಲ್ಲಾ ಸಾವನ್ನಪ್ಪಿದ್ದಾರೆ. ಅದೇ ರೀತಿ ಮತ್ತೊಂದು ದಾಳಿಯಲ್ಲಿ ಅಬುಯೆಲ್ ಕೊಮಾಸನ್ ಎಂಬ ವ್ಯಕ್ತಿ ತನ್ನ ಹೆಂಡತಿ, ನಾಲ್ಕು ದಿನಗಳ ಅವಳಿ ಮಕ್ಕಳನ್ನು ಕಳೆದುಕೊಂಡಿದ್ದಾರೆ.
ಕಳೆದ 10 ತಿಂಗಳ ಹಿಂದೆ ಹಮಾಸ್ ಆರಂಭಿಸಿದ ಯುದ್ಧದ ಬಳಿಕ ಇಸ್ರೇಲ್ ಗಾಜಾ ಪಟ್ಟಿಯಲ್ಲಿನ ಹಮಾಸ್ ನೆಲೆಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ಮಾಡುತ್ತಿದೆ. ಇದರಿಂದಾಗಿ ಅನೇಕ ಮಂದಿ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದರೆ, ಮತ್ತೆ ಕೆಲವು ಪೋಷಕರು ತಮ್ಮ ಕಣ್ಣೆದುರೇ ಮಕ್ಕಳು ಸಾವನ್ನಪ್ಪಿರುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ.
ಸೋಮವಾರ ತಡರಾತ್ರಿ ಇಸ್ರೇಲ್ ಸೇನೆಯು ದಕ್ಷಿಣ ನಗರ ಖಾನ್ ಯೂನಿಸ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಬು ಹಯಾಹ್ ಮಗುವೊಂದು ಬದುಕಿದ್ದು, ತಮ್ಮ ಒಡಹುಟ್ಟಿದವರು, ಪೋಷಕರನ್ನು ಕಳೆದುಕೊಂಡು ಅನಾಥವಾಗಿದೆ. ತನ್ನವರನ್ನು ಕಳೆದುಕೊಂಡ ಅರಿವಿಲ್ಲದ ಮಗು ಇದೀಗ ಅಮ್ಮನ ಹಾಲಿಗೆ ಹಾತೊರೆಯುತ್ತಿದ್ದು, ಬೇರೆ ಏನನ್ನು ತಿನ್ನುತ್ತಿಲ್ಲ. ಆಕೆಗೆ ನಾವು ಏನೆಲ್ಲಾ ಕಸರತ್ತು ಮಾಡಿ ತಿನ್ನಿಸಲು ಮುಂದಾದರೂ ಮಗು ಊಟ ಸೇವಿಸುತ್ತಿಲ್ಲ ಎಂದು ಮಗುವಿನ ಚಿಕ್ಕಮ್ಮ ಸೋದ್ ಅಬುಹಯ್ಯ ಅಳಲು ತೋಡಿಕೊಂಡಿದ್ದಾರೆ.
ಅಬುಯೆಲ್ ಕೊಮಸನ್ ಕೂಡ ಈ ಘಟನೆಯಲ್ಲಿ ಹೆಂಡತಿ, ಅವಳಿ ನವಜಾತ ಶಿಶುಗಳು ಸೇರಿದಂತೆ ಎಲ್ಲಾ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ.
ಈ ರೀತಿಯ ದುರ್ಘಟನೆಗಳನ್ನು ತಪ್ಪಿಸಲು ಪ್ಯಾಲೇಸ್ತಿನಿಯರಿಗೆ ಹಾನಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿರುವುದಾಗಿ ಮಿಲಿಟರಿ ಹೇಳಿದೆ. ಜೊತೆಗೆ ಜನರು ಉಗ್ರಗಾಮಿಗಳ ವಸತಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಈ ಸಾವುಗಳು ಸಂಭವಿಸುತ್ತಿವೆ ಎಂದಿದೆ. ಇದೀಗ ಇಸ್ರೇಲ್ ಸೇನೆ ಮನೆ, ಶಾಲೆ, ಮಸೀದಿ, ಸಾರ್ವಜನಿಕ ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿದೆ.
ಈ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 40 ಸಾವಿರ ಪ್ಯಾಲೆಸ್ತೇನಿಯರನ್ನು ಕೊಲ್ಲಲಾಗಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಆರಂಭಿಸಿದ ಹಮಾಸ್ ನೇತೃತ್ವದ ಉಗ್ರಗಾಮಿಗಳು 1,200 ಜನರನ್ನು ಕೊಂದಿದ್ದು, 250 ಜನರನ್ನು ಅಪಹರಿಸಿದೆ ಎಂದು ಇಸ್ರೇಲ್ ತಿಳಿಸಿದೆ.
ಗಾಜಾ ಭೂ ಪ್ರದೇಶದಲ್ಲಿ ಶೇ 84ರಷ್ಟು ಜನರನ್ನು ಸ್ಥಳಾಂತರಿಸುವಂತೆ ಇಸ್ರೇಲ್ ಮಿಲಿಟರಿ ಆದೇಶ ನೀಡಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಅನೇಕ ಕುಟುಂಬಗಳ ಸ್ಥಳಾಂತರವಾಗುವ ಈ ಆದೇಶವನ್ನು ನಿರ್ಲಕ್ಷ್ಯಿಸಿ ಅಲ್ಲಿಯೇ ಇದ್ದಾರೆ. ಕಾರಣ ಎಲ್ಲೂ ಕೂಡ ಅವರು ಸುರಕ್ಷಿತ ಸ್ಥಳ ಕಾಣುತ್ತಿಲ್ಲ. ಜೊತೆಗೆ ಕಾಲ್ನಡಿಗೆಯ ಪ್ರಯಾಣ ಪ್ರಯಾಸದಾಯಕವಾಗಿದೆ. ಅಥವಾ ಸ್ಥಳ ತೊರೆದು ಹೋದರು ಮತ್ತು ಮನೆಗೆ ಹಿಂದಿರುಗಲು ಸಾಧ್ಯವಿಲ್ಲ ಎಂಬ ಆತಂಕ ಅವರನ್ನು ಕಾಡುತ್ತಿದೆ. (ಎಪಿ)
ಇದನ್ನೂ ಓದಿ: ಇಸ್ರೇಲ್ ವಿರುದ್ಧ ದಾಳಿ ಬೆದರಿಕೆ; ಇರಾನ್‌ಗೆ ಎಚ್ಚರಿಕೆ ರವಾನಿಸಿದ ಯುರೋಪಿಯನ್ ಮಿತ್ರ ರಾಷ್ಟ್ರಗಳು