ಜೆರುಸಲೇಂ : ಮಾಲ್ಡೀವ್ಸ್ನಲ್ಲಿ ನೆಲೆಸಿರುವ ಎಲ್ಲ ಇಸ್ರೇಲಿಗರು ತಕ್ಷಣವೇ ಆ ದೇಶವನ್ನು ತೊರೆಯಬೇಕೆಂದು ಇಸ್ರೇಲ್ನ ವಿದೇಶಾಂಗ ಸಚಿವಾಲಯ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಮಾಲ್ಡೀವ್ಸ್ಗೆ ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸುವ ಕಾನೂನು ತರುವುದಾಗಿ ಮಾಲ್ಡೀವ್ಸ್ ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಸರ್ಕಾರ ತನ್ನ ನಾಗರಿಕರಿಗೆ ಈ ಸಲಹೆ ನೀಡಿದೆ.
"ಹೊಸ ಕಾನೂನಿನಿಂದ ಪ್ರಸ್ತುತ ಮಾಲ್ಡೀವ್ಸ್ನಲ್ಲಿರುವ ಇಸ್ರೇಲಿಗಳು ತೊಂದರೆ ಎದುರಿಸಿದರೆ, ಅವರಿಗೆ ಸಹಾಯ ಮಾಡುವುದು ನಮಗೆ ಕಷ್ಟವಾಗಲಿದೆ" ಎಂದು ಸಚಿವಾಲಯ ಹೇಳಿದೆ. ಇಸ್ರೇಲಿ ನಾಗರಿಕರು ಮತ್ತೊಂದು ದೇಶದ ಎರಡನೇ ಪಾಸ್ ಪೋರ್ಟ್ ಹೊಂದಿದ್ದರೂ ಸಹ, ಮಾಲ್ಡೀವ್ಸ್ಗೆ ಪ್ರವೇಶಿಸದಂತೆ ಅದು ಎಚ್ಚರಿಕೆ ನೀಡಿದೆ.
ಇಸ್ರೇಲಿಗರಿಗೆ ನಿರ್ಬಂಧಕ್ಕೆ ಮುಂದಾದ ಮಾಲ್ಡೀವ್ಸ್ ಸರ್ಕಾರ: ಇಸ್ರೇಲಿ ಪ್ರಜೆಗಳು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲು ಮಾಲ್ಡೀವ್ಸ್ ಸರ್ಕಾರ ತನ್ನ ಕಾನೂನುಗಳನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಮತ್ತು ಟೆಕ್ನಾಲಜಿ ಸಚಿವ ಅಲಿ ಇಹುಸಾನ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗಾಜಾದ ಮೇಲೆ ಇಸ್ರೇಲ್ ವಿನಾಶಕಾರಿ ಯುದ್ಧ ನಡೆಸುತ್ತಿರುವುದರಿಂದ ಆ ದೇಶದ ನಾಗರಿಕರನ್ನು ಮಾಲ್ಡೀವ್ಸ್ ಪ್ರವೇಶಿಸದಂತೆ ನಿಷೇಧಿಸಬೇಕೆಂದು ಸ್ಥಳೀಯರಿಂದ ಒತ್ತಾಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಹುಸಾನ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲಿಗರ ಮೇಲಿನ ನಿಷೇಧವನ್ನು ಜಾರಿಗೆ ತರಲು ಸರ್ಕಾರ ಕಾನೂನುಗಳಿಗೆ ತಿದ್ದುಪಡಿ ಮಾಡಲಿದೆ ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿಶೇಷ ಸಮಿತಿಯನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು. ಮಾಲ್ಡೀವ್ಸ್ಗೆ ವರ್ಷಕ್ಕೆ ಒಂದು ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಇದರಲ್ಲಿ ಅಂದಾಜು 15,000 ಪ್ರವಾಸಿಗರು ಇಸ್ರೇಲ್ ಮೂಲದವರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
1990 ಕ್ಕೂ ಮುನ್ನ ಮಾಲ್ಡೀವ್ಸ್ ತನ್ನ ದೇಶಕ್ಕೆ ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿತ್ತು. ನಂತರ 1990 ರ ದಶಕದ ಆರಂಭದಲ್ಲಿ ಇಸ್ರೇಲಿ ನಾಗರಿಕರ ಮೇಲಿನ ನಿಷೇಧವನ್ನು ಸರ್ಕಾರ ತೆಗೆದುಹಾಕಿತ್ತು ಮತ್ತು 2010 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸಿತ್ತು. ಆದಾಗ್ಯೂ, 2012 ರಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರನ್ನು ಪದಚ್ಯುತಗೊಳಿಸಿದ ನಂತರ ಇಸ್ರೇಲ್ನೊಂದಿಗೆ ಸಂಬಂಧಗಳನ್ನು ಉತ್ತಮಗೊಳಿಸುವ ಪ್ರಯತ್ನಗಳು ನಿಂತುಹೋದವು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ದ.ಕೊರಿಯಾಗೆ ಬಂದ ಕಸ ತುಂಬಿದ ಬಲೂನ್ಗಳು: 'ಪ್ರೀತಿಯ ಉಡುಗೊರೆ' ಎಂದ ಉ.ಕೊರಿಯಾ - Balloon War