ಜೆರುಸಲೇಂ(ಇಸ್ರೇಲ್): ಗಾಜಾದಲ್ಲಿ ಮೂರು ತಿಂಗಳ ಹಿಂದೆ ನಡೆಸಿದ ದಾಳಿಯಲ್ಲಿ ಹಮಾಸ್ ಸರ್ಕಾರದ ಮುಖ್ಯಸ್ಥ ಸೇರಿ ಮೂವರು ನಾಯಕರನ್ನು ಹೊಡೆದುರುಳಿಸಲಾಗಿದೆ. ಇತ್ತ ಲೆಬನಾನ್ನಲ್ಲಿ ಹಿಜ್ಬುಲ್ಲಾದ 15 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಗುರುವಾರ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಸೇನಾಪಡೆ, 'ಮೂರು ತಿಂಗಳ ಹಿಂದೆ ಹಮಾಸ್ ಸರ್ಕಾರದ ಮುಖ್ಯಸ್ಥ ರಾವ್ಹಿ ಮುಷ್ತಾಹ್, ಹಮಾಸ್‌ನ ಭದ್ರತಾ ಇಲಾಖೆಯ ಮುಖ್ಯಸ್ಥ ಸಮೆಹ್ ಅಲ್ ಸಿರಾಜ್, ಹಮಾಸ್ ಕಮಾಂಡರ್ ಸಮಿ ಔದೆಹ್ ಹತ್ಯೆಯಾಗಿದ್ದಾರೆ' ಎಂದು ತಿಳಿಸಿದೆ.
'ಉತ್ತರ ಗಾಜಾದ ನೆಲದಡಿ ಇರುವ ಬಂಕರ್ನಲ್ಲಿ ಮೂವರು ನಾಯಕರು ಅಡಗಿದ್ದ ಬಗ್ಗೆ ಐಡಿಎಫ್ ಮತ್ತು ಐಎಸ್ಎ ಗುಪ್ತಚರ ದಳ ನೀಡಿದ ಖಚಿತ ಮಾಹಿತಿ ಆಧರಿಸಿ ಇಸ್ರೇಲ್ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಮೂವರೂ ಹತರಾಗಿದ್ದಾರೆ. ಈ ರಹಸ್ಯ ತಾಣವು ಹಮಾಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವಾಗಿತ್ತು. ದಾಳಿಯ ನಂತರ ಉಗ್ರರ ಸ್ಥೈರ್ಯ ಕುಸಿಯದಂತೆ ತಡೆಯಲು ತನ್ನ ನಾಯಕರ ಸಾವನ್ನು ಹಮಾಸ್ ಮುಚ್ಚಿಟ್ಟಿದೆ' ಎಂದು ಇಸ್ರೇಲ್ ಮಾಹಿತಿ ನೀಡಿದೆ.
ಇಸ್ರೇಲ್ನ ಈ ಹೇಳಿಕೆಯ ಬಳಿಕವೂ ಹಮಾಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ಗೆ ಸಹಾಯ ಮಾಡಿದ ಹಮಾಸ್‌ನ ಉನ್ನತ ನಾಯಕ ಯಾಹ್ಯಾ ಸಿನ್ವಾರ್ಗೆ ರಾವ್ಹಿ ಮುಶ್ತಾಹ್ ನಿಕಟವರ್ತಿಯಾಗಿದ್ದ. ಸಿನ್ವಾರ್ ಇನ್ನೂ ಜೀವಂತವಾಗಿದ್ದು, ಗಾಜಾದಲ್ಲಿ ಅಡಗಿದ್ದಾನೆ ಎಂದು ಹೇಳಲಾಗಿದೆ.
ಲೆಬನಾನ್ನಲ್ಲಿ ಹಿಜ್ಬುಲ್ಲಾ ಉಗ್ರರ ಹತ್ಯೆ: ಲೆಬನಾನ್ನ ಮೇಲೆಯೂ ದಾಳಿ ನಡೆಸುತ್ತಿರುವ ಇಸ್ರೇಲ್ 15 ಹಿಜ್ಬುಲ್ಲಾ ನಾಯಕರನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ನಾಯಕರ ಹತ್ಯೆಯಾಗಿದೆ ಎಂದಿದೆ. ರಾಜಧಾನಿ ಬೈರೂತ್ ಮೇಲೂ ಬಾಂಬ್ ದಾಳಿ ನಡೆಸಲಾಗಿದೆ. ಇದರಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಕಟ್ಟಡಗಳು ಹಾನಿಗೀಡಾಗಿವೆ.
ಇದನ್ನೂ ಓದಿ: ಸಿರಿಯಾ, ಲೆಬನಾನ್ನಲ್ಲಿ ಇಸ್ರೇಲಿ ವೈಮಾನಿಕ ದಾಳಿ: ನಸ್ರುಲ್ಲಾ ಅಳಿಯನ ಹತ್ಯೆ - Nasrallahs son in law killed