ದೇರ್ ಅಲ್ ಬಲಾಹ್(ಗಾಜಾ ಪಟ್ಟಿ): ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಇಂದು (ಅಕ್ಟೋಬರ್ 7) ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಗಾಜಾ ಮತ್ತು ಲೆಬನಾನ್ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿದೆ. ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಸಹ ರಾಕೆಟ್ ದಾಳಿ ಮಾಡಿದೆ.
ಭಾನುವಾರ ತಡರಾತ್ರಿ ಬೈರುತ್ ಉಪನಗರಗಳಲ್ಲಿ ಮತ್ತೆ ವೈಮಾನಿಕ ದಾಳಿ ನಡೆಸಲಾಗಿದೆ. ಉತ್ತರ ಗಾಜಾ ಮತ್ತು ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ಬಾಂಬ್ ದಾಳಿ ತೀವ್ರಗೊಳಿಸಿದೆ. ಮಸೀದಿಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈರುತ್‌ನ ಆಗ್ನೇಯದಲ್ಲಿರುವ ಕಮತಿಯೆಹ್ ಪಟ್ಟಣದಲ್ಲಿ ಭಾನುವಾರದಂದು ಪ್ರತ್ಯೇಕ ಇಸ್ರೇಲಿ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಲೆಬನಾನ್‌ನ ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಪ್ರಕಾರ, ಭಾನುವಾರ ರಾತ್ರಿ 30ಕ್ಕೂ ಹೆಚ್ಚು ಸ್ಟ್ರೈಕ್‌ಗಳು ವರದಿಯಾಗಿವೆ. ಇದೇ ವೇಳೆ, ಸುಮಾರು 130 ಸ್ಫೋಟಕಗಳು ಲೆಬನಾನ್‌ನಿಂದ ಇಸ್ರೇಲ್ ಪ್ರದೇಶಕ್ಕೆ ತಲುಪಿವೆ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ.
ಹಮಾಸ್‌ನ ಅಕ್ಟೋಬರ್ 7, 2023ರ ದಾಳಿಗೆ ಒಂದು ವರ್ಷವಾದ ಬೆನ್ನಲ್ಲೇ ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧ ಸಮರ ಸಾರಿದೆ. ಗಾಜಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ನಡೆಸಿದ ಬಹುದೊಡ್ಡ ದಾಳಿಗಳಲ್ಲಿ ಇದು ಒಂದಾಗಿದೆ.
ಇದೇ ವೇಳೆ ಉತ್ತರದ ನಗರವಾದ ಹೈಫಾ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿರುವುದಾಗಿ ದೃಢಪಡಿಸಿರುವ ಇಸ್ರೇಲ್ ಸೇನೆ, ಈ ವೇಳೆ ಬಿದ್ದ ಸ್ಫೋಟಕಗಳು ರಾಕೆಟ್‌ಗಳಿಂದ ಬಂದಿವೆಯೇ ಅಥವಾ ಇಂಟರ್‌ಸೆಪ್ಟರ್‌ಗಳಿಂದಲೋ ಎಂಬುದು ಸ್ಪಷ್ಟವಾಗಿಲ್ಲ ಎಂದಿದೆ. ಈ ಬಗ್ಗೆ, ಹತ್ತಿರದ ನೌಕಾನೆಲೆಗೆ ಹೊಡೆಯಲು ಪ್ರಯತ್ನಿಸಲಾಗಿತ್ತು ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ. 10 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ ಹೆಚ್ಚಿನವರು ಸ್ಫೋಟಕಗಳ ಚೂರುಗಳಿಂದ ಗಾಯಗೊಂಡಿದ್ದಾರೆ ಎಂದು ಮ್ಯಾಗೆನ್ ಡೇವಿಡ್ ಅಡೋಮ್ ಆಂಬ್ಯುಲೆನ್ಸ್ ಸೇವೆಯು ತಿಳಿಸಿದೆ.
ಭಾನುವಾರ ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಿಂದಾಗಿ ಬೆಂಕಿಯ ಜ್ವಾಲೆ ಹೊತ್ತಿ ಉರಿದಿದ್ದು, ಆಗಸದಲ್ಲಿ ಹೊಗೆ ಆವರಿಸಿತ್ತು. ಸೆಪ್ಟೆಂಬರ್ 23ರಂದು ತನ್ನ ವಾಯು ದಾಳಿ ತೀವ್ರಗೊಸಿದ ಇಸ್ರೇಲ್, ದಹಿಯೆಹ್ ಎಂದು ಕರೆಯಲ್ಪಡುವ ದಕ್ಷಿಣದ ಉಪನಗರಗಳ ಮೇಲೆ ಭಾರೀ ಬಾಂಬ್ ದಾಳಿ ಎಸಗಿದ ಮರುದಿನವೇ ಮತ್ತೊಂದು ಎಚ್ಚರಿಕೆ ನೀಡಿದೆ. ಇದರಿಂದ ಸಾವುನೋವುಗಳು ಸಂಭವಿಸಿವೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ದಾಳಿ ನಡೆಸಿರುವ ಬಗ್ಗೆ ಇಸ್ರೇಲ್ ದೃಢಪಡಿಸಿದ್ದು, ಹಿಜ್ಬುಲ್ಲಾವನ್ನು ಗುರಿಯಾಗಿಸಿ ಎಸಗಲಾಗಿದೆ ಎಂದು ಹೇಳಿಕೊಂಡಿದೆ. ಲೆಬನಾನ್‌ನಲ್ಲಿನ ಪ್ರಬಲವಾಗಿರುವ ಈ ಉಗ್ರಗಾಮಿ ಗುಂಪು, ಪ್ಯಾಲೆಸ್ತೀನ್ಗೆ ಬೆಂಬಲವಾಗಿ ಇಸ್ರೇಲ್ ಮೇಲೆ ತಿಂಗಳುಗಳಿಂದ ರಾಕೆಟ್‌ಗಳನ್ನು ಹಾರಿಸುತ್ತಿದೆ.
ಕಳೆದ ವಾರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇರಾನ್ ಮೇಲೆ ಕೂಡ ದಾಳಿ ಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ವಿಸ್ತಾರಗೊಳ್ಳುತ್ತಿರುವ ಸಂಘರ್ಷದಿಂದಾಗಿ ಇಸ್ರೇಲ್‌ಗೆ ನಿರ್ಣಾಯಕ ಮಿಲಿಟರಿ ಮತ್ತು ರಾಜತಾಂತ್ರಿಕ ಬೆಂಬಲ ಒದಗಿಸಿದ ಅಮೆರಿಕದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ಇರಾನ್-ಮಿತ್ರ ಉಗ್ರಗಾಮಿ ಗುಂಪುಗಳಿರುವ ಸಿರಿಯಾ, ಇರಾಕ್ ಮತ್ತು ಯೆಮೆನ್ ಕೂಡ ಇಸ್ರೇಲ್‌ನ ಮೇಲೆ ಪರೋಕ್ಷ ದಾಳಿಗಳ ಮೂಲಕ ಸಂಘರ್ಷದಲ್ಲಿ ಸೇರಿಕೊಂಡಿವೆ. ಅಕ್ಟೋಬರ್ 7ರ ದಾಳಿಯ ಒಂದು ವರ್ಷ ಪೂರ್ಣಗೊಳ್ಳುವ ಮುನ್ನ ಇಸ್ರೇಲ್ ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಈ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ರ‍್ಯಾಲಿಗಳು ನಡೆಯುತ್ತಿವೆ.
ಇತ್ತೀಚೆಗೆ, ಇಸ್ರೇಲ್ ದಕ್ಷಿಣ ಲೆಬನಾನ್ ಮೇಲೆ ಸೀಮಿತ ಭೂ ಕಾರ್ಯಾಚರಣೆ ನಡೆಸಿತ್ತು. ಇದಕ್ಕೂ ಮುನ್ನ, ಸರಣಿ ದಾಳಿಗಳ ಮೂಲಕ ದೀರ್ಘಕಾಲದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಮತ್ತು ಆತನ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದುಹಾಕಿತ್ತು. 2006ರಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಒಂದು ತಿಂಗಳ ಕಾಲ ಯುದ್ಧ ನಡೆದಿತ್ತು. ಇದೀಗ ಮತ್ತೆ ಸಂಘರ್ಷ ತೀವ್ರಗೊಂಡಿದೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ; ಮಧ್ಯ ಪ್ರಾಚ್ಯದಲ್ಲಿ ಮುಂದೇನಾಗಬಹುದು?: ವಿಶ್ಲೇಷಣೆ - Israel Iran conflict