ವಾಷಿಂಗ್ಟನ್(ಅಮೆರಿಕ): ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ಮುಂದುವರಿದಿದೆ. ಇರಾನ್ ಮೇಲೆ ಇಸ್ರೇಲ್ ಶುಕ್ರವಾರ ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಸಿರಿಯಾ ಮತ್ತು ಇರಾಕ್ ಮೇಲೂ ದಾಳಿ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ.
ಶುಕ್ರವಾರ ಬೆಳಗ್ಗೆ ಮಧ್ಯ ಇರಾನ್‌ನ ಇಸ್ಫಹಾನ್ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಇರಾನ್‌ನ ಇಸ್ಫಹಾನ್ ನಗರದ ವಿಮಾನ ನಿಲ್ದಾಣ ಮತ್ತು ಸೇನಾ ನೆಲೆಯ ಸಮೀಪ ಅನೇಕ ಸ್ಫೋಟದ ಸದ್ದು ಕೇಳಿಬಂದ ನಂತರ ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಹಲವಾರು ಸ್ಥಳಗಳಲ್ಲಿ ಸಕ್ರಿಯಗೊಳಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮಿಲಿಟರಿ ಅಧಿಕಾರಿಗಳ ಪ್ರಕಾರ, ಕಳೆದ ಶನಿವಾರ ಇರಾನ್, ಇಸ್ರೇಲ್ ಗುರಿಯಾಗಿಸಿಕೊಂಡು ಸತತವಾಗಿ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ನಮ್ಮ ದೇಶವು 300 ಮಾನವರಹಿತ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಐರನ್ಡ್ರೋಮ್ನಿಂದ ಪ್ರತಿದಾಳಿ ಮಾಡಿ ಆಕಾಶದಲ್ಲೇ ಹೊಡೆದುರುಳಿಸಿತ್ತು. ಶುಕ್ರವಾರ ಬೆಳಗ್ಗೆ ಸಿರಿಯನ್ ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣ ಸಿರಿಯನ್ ಗವರ್ನರೇಟ್‌ಗಳಾದ ಅಸ್-ಸುವೈದಾ ಮತ್ತು ದಾರಾದಲ್ಲಿನ ಸಿರಿಯನ್ ಸೇನಾ ನೆಲೆಗಳು ದಾಳಿಗೆ ಗುರಿಯಾಗಿದೆ ಮತ್ತು ದಕ್ಷಿಣ ಸಿರಿಯಾದ ದಾರಾದ ಕರ್ದಾ ಮತ್ತು ಇಜ್ರಾ ನಡುವಿನ ಸಿರಿಯನ್ ಮಿಲಿಟರಿ ರಾಡಾರ್ ತಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿವೆ ಎಂದು ವರದಿ ಮಾಡಿವೆ.
ಇರಾಕ್‌ನ ಮೊಸುಲ್ ಮತ್ತು ಎರ್ಬಿಲ್‌ನ ನಿವಾಸಿಗಳು ಶುಕ್ರವಾರ ಮುಂಜಾನೆ ಸಮಯದಲ್ಲಿ ಫೈಟರ್ ಜೆಟ್‌ಗಳ ಶಬ್ದಗಳನ್ನು ಕೇಳಿದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ಇರಾನ್ ಮೇಲಿನ ದಾಳಿಯ ನಂತರ, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ರಾಷ್ಟ್ರದ ಯುದ್ಧ ಕ್ಯಾಬಿನೆಟ್ ಜೊತೆ ಸಭೆ ನಡೆಸಿದ್ದಾರೆ ಈ ನಡುವೆ ದಾಳಿಯ ಕುರಿತು ಇರಾನ್‌ನ ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯಾನ್ ಪ್ರತಿಕ್ರಿಯಿಸಿ, ಇರಾನ್, ಇಸ್ರೇಲ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ಮೊಟಕುಗೊಳಿಸಿದೆ. ಇರಾನ್ ವಿರುದ್ಧ ಯಾವುದೇ ಮಿಲಿಟರಿ ಕಾರ್ಯಾಚರಣೆಗಳನ್ನು ಇಸ್ರೇಲ್ ನಡೆಸಬಾರದು. ಇರಾನ್ ವಿರುದ್ಧ ಯಾವುದೇ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸದಂತೆ ಇಸ್ರೇಲ್ ಅನ್ನು ತಡಯಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಇಸ್ರೇಲ್ ತಮ್ಮ ಮೇಲೆ ನಡೆಸಿದ ದಾಳಿಯ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡಲು ಇರಾನ್ ಯಾವತ್ತೂ ಹಿಂಜರಿಯುವುದಿಲ್ಲ. ತಮ್ಮ ದೇಶದ ಮೇಲೆ ಯಾವುದೇ ದಾಳಿಗೆ ಯತ್ನಿಸಿದರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಇಸ್ರೇಲ್ ಸರ್ಕಾರ ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ, ಇರಾನ್ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗೆ ಇರಾನ್ ಮೊದಲ ಬಾರಿಗೆ ತನ್ನ ಭೂಪ್ರದೇಶದಿಂದ ಇಸ್ರೇಲ್ ಮೇಲೆ ಸುಮಾರು 300 ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸಿತ್ತು. ಆ ದಾಳಿಯಲ್ಲಿ ದಕ್ಷಿಣ ಇಸ್ರೇಲ್‌ನಲ್ಲಿನ ಐಡಿಎಫ್ ನೆಲೆಯು ತೀವ್ರವಾಗಿ ಹಾನಿಗೊಳಗಾಗಿತ್ತು.
ಇದನ್ನೂ ಓದಿ: ಇರಾನ್ - ಇಸ್ರೇಲ್ ಸಂಘರ್ಷ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ - OIL PRICES