ಅಜರ್‌ಬೈಜಾನ್/ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾಪ್ಟರ್ ಪತನವಾದ ಒಂದು ದಿನದ ಬಳಿಕ ಙಪತ್ತೆಯಾಗಿದ್ದು, ಅದರಲ್ಲಿದ್ದ ಅಧ್ಯಕ್ಷ ರೈಸಿ ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದುಲ್ಲಾಹಿಯಾನ್ ಹಾಗೂ ಇತರ ಹಲವು ಹಿರಿಯ ನಾಯಕರು ಸೇರಿ 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ದೇಶದ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಭಾನುವಾರ (ಮೇ 19) ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿತ್ತು. ನಂತರ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಪ್ರತಿಕೂಲ ಹವಾಮಾನದ ನಡುವೆ, ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ವರ್ಜೆಕಾನ್ ಕೌಂಟಿಯಲ್ಲಿ ಅಪಘಾತದ ಸ್ಥಳದ ಬಳಿ ರಕ್ಷಣಾ ತಂಡವು ತೀವ್ರ ಶೋಧ ಮುಂದುವರಿಸಲಾಗಿತ್ತು.
ಅಜರ್‌ಬೈಜಾನ್ ಗಣರಾಜ್ಯದೊಂದಿಗೆ ಇರಾನ್‌ನ ಗಡಿಯಲ್ಲಿ ಅಣೆಕಟ್ಟನ್ನು ಉದ್ಘಾಟಿಸಿ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನವಾಗಿತ್ತು.
ಹವಾಮಾನ ವೈಪರೀತ್ಯವೇ ಅಪಘಾತಕ್ಕೆ ಕಾರಣವಾಗಿದ್ದು, ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಇರಾನಿನ ಸರಕಾರಿ ಮಾಧ್ಯಮಗಳು ವರದಿ ಮಾಡಿದ್ದವು. ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ಪ್ರಕಾರ, ಕನಿಷ್ಠ 46 ತಂಡಗಳನ್ನು ರಕ್ಷಣಾ ಕಾರ್ಯಗಳಿಗಾಗಿ ನಿಯೋಜಿಸಲಾಗಿತ್ತು. ಇರಾನ್‌ನ ಸೈನ್ಯದ ಮುಖ್ಯಸ್ಥರು, ಸೈನ್ಯದ ಎಲ್ಲಾ ಸಂಪನ್ಮೂಲಗಳು, ರೆವಲ್ಯೂಷನರಿ ಗಾರ್ಡ್‌ಗಳನ್ನು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಇರಾನ್ ಜನರ ಪ್ರಾರ್ಥನೆ ಫಲಿಸಿಲ್ಲ. ಅಧ್ಯಕ್ಷರು ದುರಂತ ಅಂತ್ಯ ಕಂಡಿದ್ದಾರೆ.
ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ: ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಹಾರ್ಡ್ ಲ್ಯಾಂಡಿಂಗ್ ಮಾಡಿದ ನಂತರ ಕಣ್ಮರೆಯಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು "ತೀವ್ರ ಕಳವಳ" ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ರೈಸಿ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್ ಪೋಸ್ಟ್‌ನಲ್ಲಿ ಭಾನುವಾರ ತಿಳಿಸಿದ್ದರು.
ಇರಾನ್ ಮಾಧ್ಯಮಗಳ ಪ್ರಕಾರ, ಉತ್ತರ ಇರಾನ್‌ನಲ್ಲಿ ದಟ್ಟವಾದ ಮಂಜಿನಿಂದಾಗಿ ತೊಂದರೆಗಳನ್ನು ಎದುರಿಸಿದ ನಂತರ ಬೆಂಗಾವಲುಪಡೆಯಲ್ಲಿ ಪ್ರಯಾಣಿಸುತ್ತಿದ್ದ ಮೂರು ಹೆಲಿಕಾಪ್ಟರ್‌ಗಳ ಪೈಕಿ ಒಂದು ಹೆಲಿಕಾಪ್ಟರ್ ಹಾರ್ಡ್ ಲ್ಯಾಂಡಿಂಗ್ ಆಗಿದೆ.
ಇದನ್ನೂ ಓದಿ: ಸ್ಲೋವಾಕಿಯಾ ಪ್ರಧಾನಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರು: ಉಪಪ್ರಧಾನಿ ಕಲಿನಾಕ್ ಹೇಳಿಕೆ - Attack on Slovakian PM