ಜೆರುಸಲೇಂ (ಇಸ್ರೇಲ್): ಇಸ್ರೇಲ್ ಮೇಲೆ ಇರಾನ್ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದೆ. ಈ ಮೂಲಕ ಸಿರಿಯಾದಲ್ಲಿನ ತನ್ನ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿದ್ದರ ವಿರುದ್ಧ ಸೇಡು ತೀರಿಸಿಕೊಂಡಿದೆ. ಆಪರೇಷನ್ ಟ್ರೂ ಪ್ರಾಮಿಸ್ ಹೆಸರಿನಲ್ಲಿ ಇಸ್ರೇಲ್ ಮೇಲೆ ನೂರಕ್ಕೂ ಹೆಚ್ಚು ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ.
ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಇರಾಕ್‌ನ ವಾಯುಪ್ರದೇಶದಿಂದ ಇಸ್ರೇಲ್ ಕಡೆಗೆ ಹಾರಿವೆ. ಇವುಗಳಲ್ಲಿ ಕೆಲವನ್ನು ಅಮೆರಿಕ ಸೇನೆಯು ಮಧ್ಯಪ್ರಾಚ್ಯದಲ್ಲೇ ಹೊಡೆದುರುಳಿಸಿವೆ. ಇನ್ನು ಕೆಲವನ್ನು ಸಿರಿಯಾ ಮತ್ತು ಜೋರ್ಡಾನ್ ವಾಯುಪ್ರದೇಶದಲ್ಲಿ ಇಸ್ರೇಲ್ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಅದರಲ್ಲೂ ಕೆಲವು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ದಾಟಿ ಬಂದಿವೆ. ಇವನ್ನು ಇಸ್ರೇಲ್‌ನ ಏರೋಸ್ಪೇಸ್ ಯಶಸ್ವಿಯಾಗಿ ತಡೆದಿದೆ. ಸದ್ಯ ರಾಜಧಾನಿ ಜೆರುಸಲೇಂ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಇರಾಕ್ ಹಾರಿಬಿಟ್ಟ ಡ್ರೋನ್ ಮತ್ತು ಕ್ಷಿಪಣಿಗಳನ್ನು ಇಸ್ರೇಲ್‌ನ ಕ್ಷಿಪಣಿ ನಿಗ್ರಹ ವ್ಯವಸ್ಥೆಯು ತಡೆದಿದ್ದರಿಂದ ಭಾರೀ ಶಬ್ದ ಕೇಳಿಬಂದಿದೆ. ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜೋರ್ಡಾನ್, ಲೆಬನಾನ್ ಮತ್ತು ಇರಾಕ್ ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ತಂಡದ ಸಭೆ ಕರೆದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ನಿಯಮದ ಪ್ರಕಾರ ದಾಳಿ: ಇರಾನ್ ನಡೆಸಿದ ಈ ದಾಳಿಯನ್ನು ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಮೆಕ್ಸಿಕೋ, ಜೆಕ್ ಗಣರಾಜ್ಯ, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ ಖಂಡಿಸಿವೆ. ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಇರಾನ್, ತಾನು ವಿಶ್ವಸಂಸ್ಥೆಯ ಚಾರ್ಟರ್ ಆರ್ಟಿಕಲ್ 51ರ ಪ್ರಕಾರ ದಾಳಿ ನಡೆಸಲಾಗಿದೆ. ಇಲ್ಲಿಗೆ ಇದನ್ನು ನಿಲ್ಲಿಸಲಾಗುವುದು. ಇಸ್ರೇಲ್ ಮತ್ತು ಅಮೆರಿಕ ಮತ್ತೆ ತನ್ನ ಮೇಲೆ ದಾಳಿ ಮಾಡಿದರೆ ಈ ಬಾರಿಗಿಂತಲೂ ಅಧಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ದಾಳಿಯ ಬೆನ್ನಲ್ಲೇ, ಇರಾನ್‌ನ ಜನರು ಸಂಭ್ರಮಾಚರಣೆ ನಡೆಸಿದರು. ರಾಷ್ಟ್ರಧ್ವಜಗಳನ್ನು ಹಿಡಿದು ರಸ್ತೆಗಳಲ್ಲಿ ರ್ಯಾಲಿಗಳನ್ನು ನಡೆಸಲಾಗಿದೆ.
ದಾಳಿಗೆ ಪ್ರತಿದಾಳಿ: ಈ ತಿಂಗಳ ಆರಂಭದಲ್ಲಿ ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು. ಇದರಲ್ಲಿ ಹಲವುರು ಸೇನೆ ಮತ್ತು ವಿದೇಶಾಂಗ ಅಧಿಕಾರಿಗಳು ಸಾವಿಗೀಡಾಗಿದ್ದರು. ಇದು ಇಸ್ರೇಲ್ ನಡೆಸಿದ ದಾಳಿ ಎಂದು ಇರಾನ್ ಆರೋಪಿಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿತ್ತು. ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದು ಖಚಿತ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಹೇಳಿದ್ದರು. ಇದರಲ್ಲಿ ಅವರು ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದರು.