ಬ್ರಾಂಪ್ಟನ್ (ಕೆನಡಾ): ಕೆನಡಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಟೊರೊಂಟೊ ನಗರದ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಈ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ರಾಜೀವ್ ವಾರಿಕೂ (51), ಇವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಪುತ್ರಿ ಮಾಹೆಕ್ ವಾರಿಕೂ (16) ಎಂದು ಗುರುತಿಸಲಾಗಿದೆ.
'ಈಟಿವಿ ಭಾರತ್'ಗೆ ಲಭ್ಯವಾದ ಮೂಲಗಳ ಪ್ರಕಾರ, ಟೊರೊಂಟೊದ ಬ್ರಾಂಪ್ಟನ್‌ನಲ್ಲಿ ರಾಜೀವ್ ವಾರಿಕೂ ಕುಟುಂಬ ವಾಸವಾಗಿತ್ತು. ಮಾರ್ಚ್ 7ರಂದು ತಮ್ಮ ಮನೆಯಲ್ಲಿ ಮೂವರು ಮೃತದೇಹಗಳು ಪತ್ತೆಯಾಗಿವೆ. ಅಂದು ಮಧ್ಯಾಹ್ನ 1:30ರ ಸುಮಾರಿಗೆ ಮನೆಯಲ್ಲಿ ಬೆಂಕಿ ಅವಘಡದ ಬಗ್ಗೆ ಅಗ್ನಿ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮನೆಯೊಳಗೆ ಮೂವರ ಅವಶೇಷಗಳು ದೊರೆತಿವೆ.
ಈ ಘಟನೆ ಬಗ್ಗೆ ಪೀಲ್ ಪ್ರಾದೇಶಿಕ ಪೊಲೀಸರು ಇಂದು (ಮಾರ್ಚ್ 15) ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತನಿಖಾಧಿಕಾರಿಯೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಿ ಮೃತರನ್ನು ಗುರುತಿಸಲಾಗಿದೆ. ರಾಜೀವ್ ವಾರಿಕೂ ಕಾಶ್ಮೀರಿ ಪಂಡಿತ್ ಆಗಿದ್ದರು. ಒಂಟಾರಿಯೊ ಆರೋಗ್ಯ ಸಚಿವಾಲಯದ ವ್ಯಾಪಾರ ಸೇವೆಗಳ ಶಾಖೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಬೆಂಕಿ ಅವಘಡ ಹೇಗೆ ಸಂಭವಿಸಿತ್ತು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದಲ್ಲಿ ನಾಲ್ವರು ಸಾವು ಪ್ರಕರಣ: ಕಳೆದ ಫೆಬ್ರವರಿಯಲ್ಲಿ ಅಮೆರಿಕದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಮೃತರನ್ನು ಆನಂದ್ ಸುಜಿತ್ ಹೆನ್ರಿ, ಈತನ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು 4 ವರ್ಷದ ಅವಳಿ ಗಂಡು ಮಕ್ಕಳು ಎಂದು ಗುರುತಿಸಲಾಗಿತ್ತು. ಸುಜಿತ್ ಹೆನ್ರಿ, ಆಲಿಸ್ ಪ್ರಿಯಾಂಕಾ ದಂಪತಿ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನಂತರದಲ್ಲಿ ಅದನ್ನು ಮುಂದುವರೆಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ಮೂಲತಃ ಕೇರಳದ ಆನಂದ್ ಹೆನ್ರಿ ಕುಟುಂಬವು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿತ್ತು. ದಂಪತಿ ತಮ್ಮಿಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಸ್ನಾನಗೃಹದಲ್ಲಿ ಪುರುಷ, ಮಹಿಳೆಯ ಶವ ದೊರೆತಿತ್ತು. ಇಬ್ಬರ ದೇಹದಲ್ಲಿ ಗುಂಡಿನ ಗಾಯಗಳು ಪತ್ತೆಯಾಗಿದ್ದವು. 9 ಮಿಲಿಮೀಟರ್ ಪಿಸ್ತೂಲ್ ಮತ್ತು ಲೋಡ್ ಮಾಡಲಾದ ಮ್ಯಾಗಜೀನ್ ಸಹ ದೊರೆತಿತ್ತು. ಇಬ್ಬರು ಮಕ್ಕಳು ಮೃತದೇಹಗಳು ಬೆಡ್ರೂಮ್ನಲ್ಲಿ ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಎರಡೂ ಸಂಶಯಗಳ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಕೇರಳದ ದಂಪತಿ, ಅವಳಿ ಮಕ್ಕಳು ಶವವಾಗಿ ಪತ್ತೆ