ಕ್ಯಾನ್ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಸಂಸತ್ ಸದಸ್ಯರಾಗಿ ಭಾರತೀಯ ಮೂಲದ ನ್ಯಾಯವಾದಿ ವರುಣ್ ಘೋಷ್ ಆಯ್ಕೆಯಾಗಿದ್ದಾರೆ. ಆಸೀಸ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿರುವ ಘೋಷ್, ಭಗವದ್ಗೀತೆ ಮೇಲೆ ಪ್ರಮಾಣವಚನ ಕೈಗೊಂಡರು.
ಪಶ್ಚಿಮ ಆಸ್ಟ್ರೇಲಿಯಾದಿಂದ ವರುಣ್ ಘೋಷ್ ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್ನ ಪ್ರತಿನಿಧಿಯಾಗಿ ಸಂಸತ್ತಿಗೆ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಘೋಷ್ ಅವರಿಗೆ ಪ್ರಧಾನಿ ಆಂಥೋನಿ ಅಲ್ಬನೀಸ್ ಶುಭಹಾರೈಸಿದ್ದಾರೆ. ''ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ್ ಅವರಿಗೆ ಸ್ವಾಗತ. ನಮ್ಮ ತಂಡದಲ್ಲಿ ನಿಮ್ಮನ್ನು ಹೊಂದುವುದೇ ಅದ್ಭುತ ಸಂಗತಿ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘೋಷ್ ಆಯ್ಕೆಯನ್ನು ವಿದೇಶಾಂಗ ಸಚಿವ ಪೆನ್ನಿ ವಾಂಗ್ ಕೂಡಾ ಸ್ವಾಗತಿಸಿದ್ದು, ''ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ್ ಅವರಿಗೆ ಸುಸ್ವಾಗತ. ಘೋಷ್ ಅವರು ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್'' ಎಂದು 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ, ''ತಮ್ಮ ಸಮುದಾಯ ಮತ್ತು ಪಶ್ಚಿಮ ಆಸ್ಟ್ರೇಲಿಯನ್ನರಿಗೆ ಗಟ್ಟಿ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿದೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ವರುಣ್ ಘೋಷ್ ಪರ್ತ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಕಲೆ ಮತ್ತು ಕಾನೂನಿನ ಪದವಿ ಪಡೆದಿದ್ದಾರೆ. ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಮನ್‌ವೆಲ್ತ್ ಸ್ಕಾಲರ್ ಆಗಿದ್ದರು. ಅಲ್ಲಿಂದ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್‌ನಲ್ಲಿ ಹಣಕಾಸು ವಕೀಲ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಿಶ್ವಬ್ಯಾಂಕ್‌ನ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಆ ಬಳಿಕ ಪರ್ತ್‌ಗೆ ಮರಳಿ ಆಸ್ಟ್ರೇಲಿಯಾದ ಲೇಬರ್ ಪಾರ್ಟಿ ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.
1980ರಲ್ಲಿ ಘೋಷ್ ಅವರ ಪೋಷಕರು ಭಾರತದಿಂದ ವಲಸೆ ಹೋಗಿದ್ದರು. 1997ರಲ್ಲಿ ಘೋಷ್ ಕೂಡ ಸ್ಥಳಾಂತರಗೊಂಡಿದ್ದರು. ಆಗ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಕ್ರೈಸ್ಟ್ ಚರ್ಚ್ ಗ್ರಾಮರ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಇವರು ಪ್ರತಿಪಾದಿಸುತ್ತಾರೆ. 2019ರ ಒಕ್ಕೂಟದ ಚುನಾವಣೆಯಲ್ಲಿ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಸೆನೆಟ್ ಟಿಕೆಟ್ ಪಡೆದಿದ್ದರು. ಆದರೆ, ಆಗ ಆಯ್ಕೆಯಾಗಲಿಲ್ಲ. ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ