ದೇರ್ ಅಲ್-ಬಲಾಹ್: ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾಗಿ ಅಕ್ಟೋಬರ್ 7ಕ್ಕೆ ಒಂದು ವರ್ಷ ಕಳೆದಿದೆ. ನಿರಂತರವಾಗಿ ನಡೆಯುತ್ತಿರುವ ದಾಳಿಯಲ್ಲಿ ಈವರೆಗೂ 42 ಸಾವಿರ ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಗಡಿಯನ್ನು ಪ್ಯಾರಾಚೂಟ್ ಮೂಲಕ ಅಕ್ರಮವಾಗಿ ಪ್ರವೇಶಿಸಿದ್ದರು. ಬಳಿಕ ಮ್ಯೂಸಿಕ್ ಫೆಸ್ಟಿವಲ್ ಮೇಲೆ ಗುಂಡಿನ ದಾಳಿ ಮಳೆಗರೆದಿದ್ದರು. ಇದರಿಂದ 1400ಕ್ಕೂ ಅಧಿಕ ಇಸ್ರೇಲಿಗರು ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರು. ಜೊತೆಗೆ, 250ಕ್ಕೂ ಅಧಿಕ ಜನರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿತ್ತು.
ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದಲ್ಲಿ ಅಡಗಿಕೊಂಡಿರುವ ಹಮಾಸ್ ಉಗ್ರರ ಮೇಲೆ ಯುದ್ಧ ಸಾರಿದೆ. ಬಾಂಬ್, ರಾಕೆಟ್, ಡ್ರೋನ್ ದಾಳಿ ನಡೆಸಿದ್ದಲ್ಲದೇ, ಸೇನಾಪಡೆಗಳನ್ನು ಗಾಜಾಪಟ್ಟಿಯಲ್ಲಿ ನುಗ್ಗಿಸಿ ಸಾವಿರಾರು ಹಮಾಸ್ ಉಗ್ರರು ಮತ್ತು ಅದರ ನಾಯಕರನ್ನು ಹತ್ಯೆ ಮಾಡಿದೆ.
ಗಾಜಾದಲ್ಲಿ ನಿರಂತರ ದಾಳಿ: ಇಸ್ರೇಲ್ ದಾಳಿಯಿಂದ ಗಾಜಾದಲ್ಲಿ ಆಗಿರುವ ಮಾರಣಹೋಮದ ಬಗ್ಗೆ ಅಲ್ಲಿನ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಗಾಜಾದ ಮೇಲೆ ಇಸ್ರೇಲ್ ಪಡೆಗಳು ನಡೆಸುತ್ತಿರುವ ಯುದ್ಧದಲ್ಲಿ 42 ಸಾವಿರ ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. 97,720 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ದಾಳಿಯಲ್ಲಿ ಸಾವಿಗೀಡಾದವರಲ್ಲಿ ಹೋರಾಟಗಾರರು ಮತ್ತು ನಾಗರಿಕರನ್ನು ಬೇರೆ ಬೇರೆ ಮಾಡಲಾಗಿದೆ. ಆದರೆ, ಸತ್ತವರಲ್ಲಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ. ಇಸ್ರೇಲ್ ಗಾಜಾದಲ್ಲಿ ನರಕ ಸೃಷ್ಟಿಸಿದೆ ಎಂದು ಟೀಕಿಸಿದೆ.
ಇದನ್ನೂ ಓದಿ: ಹಮಾಸ್ ದಾಳಿಗೆ ಒಂದು ವರ್ಷ: ಗಾಜಾ, ಲೆಬನಾನ್ ಮೇಲೆ ಇಸ್ರೇಲ್ ತೀವ್ರ ದಾಳಿ - Israel Attack On Lebanon