ಗಾಝಾ/ಟೆಲ್ ಅವೀವ್ : ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಶಸ್ತ್ರಸಜ್ಜಿತ ಪ್ಯಾಲೆಸ್ಟೈನಿಯರು ಮತ್ತು ಇಸ್ರೇಲಿ ಪಡೆಗಳ ಮಧ್ಯೆ ಭೀಕರ ಸಂಘರ್ಷ ಭುಗಿಲೆದ್ದಿದೆ ಎಂದು ಇಸ್ರೇಲ್ ಮಾಧ್ಯಮಗಳು ರವಿವಾರ ವರದಿ ಮಾಡಿವೆ. ಗಾಜಾ ನಗರದ ಉತ್ತರಕ್ಕೆ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಜಬಾಲಿಯಾ ಪ್ರದೇಶದಲ್ಲಿ ತನ್ನ ಹೋರಾಟಗಾರರು ಮತ್ತು ಇಸ್ರೇಲಿ ಪಡೆಗಳ ನಡುವೆ ಭಾರಿ ಘರ್ಷಣೆಗಳು ನಡೆದಿವೆ ಎಂದು ಪ್ಯಾಲೆಸ್ಟೈನ್ ಇಸ್ಲಾಮಿಕ್ ಸಂಘಟನೆ ಹಮಾಸ್ನ ಮಿಲಿಟರಿ ವಿಭಾಗ ಉಲ್ಲೇಖಿಸಿದೆ.
ಜಬಾಲಿಯಾದಲ್ಲಿನ ನಾಗರಿಕರನ್ನು ಸ್ಥಳಾಂತರಿಸಿದ ನಂತರ ಯುದ್ಧ ವಿಮಾನಗಳು ಅಲ್ಲಿನ ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ ನಿನ್ನೆ ಸಂಜೆ ಹೇಳಿದ್ದಾರೆ. ಜಬಾಲಿಯಾ ಪ್ರದೇಶದಿಂದ ಸ್ಥಳಾಂತರಗೊಳ್ಳುವಂತೆ ಅಂದಾಜು ಒಂದರಿಂದ ಒಂದೂವರೆ ಲಕ್ಷ ಜನರಿಗೆ ಸೇನೆ ಸೂಚನೆ ನೀಡಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಭಾನುವಾರ ವರದಿ ಮಾಡಿದೆ.
ದಕ್ಷಿಣದಲ್ಲಿ ಜಬಾಲಿಯಾ ಮತ್ತು ರಫಾ ಈ ಎರಡೂ ಸ್ಥಳಗಳಿಂದ ನಾಗರಿಕರನ್ನು ಸ್ಥಳಾಂತರಿಸುವ ಯತ್ನಗಳ ಬಗ್ಗೆ ಪ್ಯಾಲೆಸ್ಟೈನ್ ನಿರಾಶ್ರಿತರ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ) ತೀವ್ರ ಕಳವಳ ವ್ಯಕ್ತಪಡಿಸಿದೆ.
ಈಗ ಜಬಾಲಿಯಾದಲ್ಲಿ ಮತ್ತೊಮ್ಮೆ ಸಂಘರ್ಷ ಉಲ್ಬಣಿಸಿರುವುದು ಗಾಜಾ ಯುದ್ಧದ ಕಾರ್ಯತಂತ್ರದ ಬಗ್ಗೆ ಇಸ್ರೇಲ್ನ ರಾಜಕೀಯ ಮತ್ತು ಮಿಲಿಟರಿ ನಾಯಕರ ನಡುವಿನ ಸ್ಪಷ್ಟ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿವೆ.
ಯುದ್ಧದ ನಂತರದ ಅವಧಿಯಲ್ಲಿ ಅನುಸರಿಸಬೇಕಾದ ರಾಜಕೀಯ ಕಾರ್ಯತಂತ್ರದ ಕೊರತೆಯಿಂದಾಗಿ ಸೇನೆಯು ಈಗ ತಾನು ಯುದ್ಧ ಮುಗಿಸಿ ಹಿಂದೆ ಸರಿದ ಜಬಾಲಿಯಾದಂತಹ ಸ್ಥಳಗಳಲ್ಲಿ ಮತ್ತೆ ಹೋರಾಡುತ್ತಿದೆ ಎಂದು ಇಸ್ರೇಲ್ ಜನರಲ್ ಸ್ಟಾಫ್ ಮುಖ್ಯಸ್ಥ ಹರ್ಜಿ ಹಲೇವಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ದಾಳಿಯಲ್ಲಿ ಇಬ್ಬರು ವೈದ್ಯರ ಸಾವು: ಗಾಜಾ ಪಟ್ಟಿಯ ದೇರ್ ಅಲ್- ಬಾಲಾಹ್ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಅಧಿಕೃತ ಸುದ್ದಿ ಸಂಸ್ಥೆ ಡಬ್ಲ್ಯುಎಎಫ್ಎ ಭಾನುವಾರ ವರದಿ ಮಾಡಿದೆ. ಇಸ್ರೇಲಿ ಯುದ್ಧವಿಮಾನ ದಾಳಿಯಲ್ಲಿ ವೈದ್ಯರಾದ ಮುಹಮ್ಮದ್ ನಿಮ್ರ್ ಖಾಝತ್ ಮತ್ತು ಅವರ ಪುತ್ರ ಯೂಸುಫ್ ಮೃತಪಟ್ಟಿದ್ದು, ಅವರ ಶವಗಳನ್ನು ದೇರ್ ಅಲ್-ಬಾಲಾಹ್ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ : ಅನಿಶ್ಚಿತ ರಾಜಕೀಯ ಪರಿಸ್ಥಿತಿ: ಸೌದಿ ರಾಜಕುಮಾರ ಎಂಬಿಎಸ್ ಪಾಕಿಸ್ತಾನ ಭೇಟಿ ಮತ್ತೆ ಮುಂದೂಡಿಕೆ - SAUDI CROWN PRINCE